ಹತ್ತು ವರ್ಷಗಳ ನಂತರ ಮರಳಿ ಬಂದ ನೀತು

ಸಿದ್ದಾಪುರ:

IMG_2963

IMG_2960

IMG_2965

ಸುಮಾರು 15 ವರ್ಷದ ಬಳಿಕ ಯುವತಿಯೊಬ್ಬಳು ತನ್ನ ಕುಟುಂಬಸ್ಥರ ಬಳಿ ಸೇರಿದ ಪ್ರಸಂಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ ಯುವತಿ ತನ್ನ ತಾಯಿ ಮತ್ತು ಅಕ್ಕನಿಂದ ದೂರವಾಗಿ ಸುಮಾರು 10 ವರ್ಷಗಳಾಗಿತ್ತು, ಇದೀಗ ನವಜೀವನ ಎಂಬ ಕ್ರಿಶ್ಚಿಯನ್ ಸಂಸ್ಥೆಯೊಂದು ಯುವತಿಯ ನೆರವಿಗೆ ಬಂದಿದ್ದು ಆಕೆಯನ್ನು ತನ್ನ ಕುಟುಂಬಸ್ಥರ ಬಳಿ ಕರೆತರುವಲ್ಲಿ ಯಶಸ್ವಿಯಾಗಿದೆ.

ಸಿದ್ದಾಪುರ ಸಮೀಪದ ಮಾಲ್ದಾರೆ ನಿವಾಸಿಗಳಾದ ಬಾಲಕೃಷ್ಣ ಮತ್ತು ಪ್ರೇಮ ದಂಪತಿಗಳಿಗೆ ಶಾಲಿನಿ ಮತ್ತು ನೀತು ಎಂಬ ಇಬ್ಬರು ಹೆಣ್ಣು ಮಕ್ಕಳು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಗಂಡನಿಂದ ದೂರವಾದ ಪ್ರೇಮ ತನ್ನ ಇಬ್ಬರು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಒಪ್ಪೊತ್ತಿನ ಊಟಕ್ಕಾಗಿ ಊರೂರು ಅಲೆಯುತ್ತಿದ್ದ ಪ್ರೇಮ ಕೊನೆಗೆ ಸಕಲೇಶಪುರದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಮನೆಗೆಲಸ ಮಾಡಿ ಇಬ್ಬರು ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದ್ದ ಪ್ರೇಮ ತನ್ನ ಹಿರಿಯ ಮಗಳಾದ ಶಾಲಿನಿಯನ್ನು ಬೆಂಗಳೂರಿನ ವಿಜಯನಗರದ ಮನೆಯೊಂದಕ್ಕೆ ಕೆಲಸಕ್ಕೆ ಕಳುಹಿಸಿಕೊಟ್ಟರು. ಇನ್ನು ಪ್ರಪಂಚದ ಅರಿವೇ ಇಲ್ಲದ ಆ ಪುಟ್ಟ ಹುಡುಗಿ ಕೆಲಸ ಮಾಡಲು ಸಾದ್ಯವಾಗದೆ ಅಲ್ಲಿಂದ ಮರಳಿ ತನ್ನ ತಾಯಿ ಬಳಿ ಸೇರಿದಳು. ಆದರೆ ತಾಯಿ ತನ್ನ ಕಿರಿಯ ಮಗಳಾದ ನೀತುವನ್ನು ಅದೇ ಮನೆಗೆ ಕೆಲಸಕ್ಕೆಂದು ಕಳುಹಿಸಿ ಕೊಟ್ಟರು. ಇಲ್ಲಿಂದಲೇ ಪ್ರಾರಂಭವಾಗುತ್ತೆ ನೀತುವಿನ ಬದುಕಿನ ದುರಂತ ಕಥೆ.
ನೀತು ಆ ಮನೆಗೆ ಕೆಲಸಕ್ಕೆ ಸೇರಿದಂದಿನಿಂದ ಇಂದಿನವರೆಗೂ ತನ್ನ ತಾಯಿಯನ್ನಾಗಲೀ ಅಕ್ಕನನ್ನಾಗಲೀ ಒಮ್ಮೆಯೂ ಭೇಟಿಯಾಗಲಿಲ್ಲ. ನೀತುವನ್ನು ಕೆಲಸಕ್ಕೆ ಸೇರಿಸಿದ ಏಜೆಂಟ್ ಒಂದು ದಿನ ನೀತುವನ್ನು ಭೇಟಿಯಾಗಿ ನಿನ್ನ ತಾಯಿ ತೀರಿಕೊಂಡಿದ್ದಾಳೆ ಎಂಬುದಾಗಿ ಸುದ್ದಿ ತಿಳಿಸಿದ್ದಾರೆ. ಇದರಿಂದ ನೊಂದ ನೀತು ನನ್ನವರು ಯಾರು ಇಲ್ಲ ಎಂಬ ಕೊರಗಿನಲ್ಲಿ ಅದೇ ಮನೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಇದ್ದಳು. ಆದರೆ ಮಕ್ಕಳ ಕಲ್ಯಾಣ ಇಲಾಖೆಯವರು ಬಾಲಕಾರ್ಮಿಕಳಾಗಿದ್ದ ನೀತುವನ್ನು ಪತ್ತೆ ಹಚ್ಚಿ ಅಪ್ಸ ಎಂಬ ಖಾಸಗಿ ಸಂಸ್ಥೆಗೆ ವಿದ್ಯಾಭ್ಯಾಸದ ಸಲುವಾಗಿ ಕಳುಹಿಸಿ ಕೊಟ್ಟರು. ಪ್ರಾಥಮಿಕ ವಿದ್ಯಾಬ್ಯಾಸವನ್ನು ಅಪ್ಸ ದಲ್ಲಿ ಮುಗಿಸಿದ ನೀತುವನ್ನು ಮತ್ತೆ ಮಕ್ಕಳ ಕಲ್ಯಾಣ ಇಲಾಖೆಯು ಪ್ರೌಢ ಶಿಕ್ಷಣಕ್ಕಾಗಿ ಕಮ್ಮನಹಳ್ಳಿಯಲ್ಲಿರುವ ಆಕ್ಸುಲಿಯಮ್ ನವ ಜೀವನ ಎಂಬ ಸಂಸ್ಥೆಗೆ ಸೇರಿಸಿತು. ಅಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದ ನೀತುವಿನ ಪೋಷಕರನ್ನು ಪತ್ತೆ ಹಚ್ಚುವಂತೆ ಮಕ್ಕಳ ಕಲ್ಯಾಣ ಇಲಾಖೆಯು ನವಜೀವನ ಸಂಸ್ಥೆ ಬಳಿ ಕೋರಿಕೊಂಡ ಮೇರೆಗೆ ಸಂಸ್ಥೆಯು ನೀತುವಿನ ವಿಳಾಸ ಪತ್ತೆ ಹಚ್ಚಲು ಮುಂದಾಯಿತು. ಹೀಗೆ ವಿಳಾಸ ಹುಡುಕಿಕೊಂಡು ಬಂದ ಸಂಸ್ಥೆಯ ಸಿಸ್ಟರ್ ಜೈನ್ ಎಂಬುವವರು ಮಡಿಕೇರಿ ಸಿದ್ದಾಪುರ ಮಾಲ್ದಾರೆಯಲ್ಲಿ ವಿಚಾರಿಸಿದರಾದರೂ ನೀತುವಿನ ಪೋಷಕರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಮರಳಿ ಬೆಂಗಳೂರಿಗೆ ತೆರಳಲು ಮುಂದಾದ ಇವರ ನೆರವಿಗೆ ಬಂದ ಇಲ್ಲಿನ ಮೂವರು ಯುವಕರಾದ ಚಂದ್ರಶೇಖರ್, ಯತೀಶ ಮತ್ತು ವಿನು ನೀತುವಿನ ಚಿಕ್ಕಮ್ಮ ಶೋಭ ಎಂಬುವವರ ಮನೆ ಹುಡುಕಿ ಕೊಡುವಲ್ಲಿ ಯಶಸ್ವಿಯಾದರು. ಮನೆಗೆ ಬಂದ ಸಿಸ್ಟರ್ ಜೈನ್ ಎಂಬುವವರು ನೀತುವನ್ನು ಚಿಕ್ಕಮ್ಮನ ಮನೆಗೆ ಕರೆತಂದರು. ಚಿಕ್ಕಮ್ಮನನ್ನು ನೋಡಿದ ನೀತು ಕಣ್ಣೀರಿಟ್ಟ ಪ್ರಸಂಗವು ನಡೆಯಿತು. 15 ವರ್ಷಗಳ ಹಿಂದೆ ಅಕ್ಕ ಪ್ರೇಮ ಭಾವ ಬಾಲಕೃಷ್ಣ ಇವರ ಮಕ್ಕಳಾದ ಶಾಲಿನಿ ಮತ್ತು ನೀತು ಕಾಣೆಯಾಗಿದ್ದರು. ಇಷ್ಟು ವರ್ಷಗಳ ನಂತರ ಕುಟುಂಬದ ಒಬ್ಬಳನ್ನು ನೋಡಿ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ ಚಿಕ್ಕಮ್ಮ ಶೋಭ ಈಕೆಯನ್ನಾದರೂ ನಾವು ಉಳಿಸಿಕೊಂಡು ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಆಕೆಯ ಭವಿಷ್ಯಕ್ಕೆ ನೆರವಾಗುತ್ತೇವೆ ಎಂದರು.
ಸಂಸ್ಥೆಯ ಸಿಸ್ಟರ್ ಜೈನ್ ಮಾತನಾಡಿ ಬೆಂಗಳೂರಿನಲ್ಲಿ ನಮ್ಮ ಸಂಸ್ಥೆಯು ಅನಾಥ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಲು ನೆರವಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *