ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ರವಿಯಸ್ತಂಗತನಾದರೂ ಮೂಡಣಾಕಾದಿತ್ಯನಿರಲಿ!

Posted on: May 13, 2013
ರವಿಯಸ್ತಂಗತನಾದರೂ ಮೂಡಣಾಕಾದಿತ್ಯನಿರಲಿ!
========================

551273_10151492605433674_809508778_n

ಕಳೆದ ಶನಿವಾರ ಮುಂಜಾನೆ ಏಳಕ್ಕೆ ಮಡಿಕೇರಿಯ ದಾರಿ ಹಿಡಿದದ್ದು ಹಸಿರ ನಡುವೆ ಒಂದಿಷ್ಟು ತಾಜಾ ಉಸಿರು ನನ್ನ ಶ್ವಾಸಕೋಶದೊಳಗೆ ಸಾಗಲಿ ಎನ್ನುವುದಕ್ಕಾಗಿ ಅಲ್ಲ. ಮಾರ್ಚ್ ೨೮ರಂದು ಆಫ್ರಿಕಾದಲ್ಲಿ ಅಸುನೀಗಿದ್ದ ಕವಿ ಮಿತ್ರ, ಬರಹಗುರು ರವಿ ಮೂರ್ನಾಡ್ ಕುಟುಂಬವನ್ನು ಮಾತನಾಡಿಸಿಬರಬೇಕೆಂಬ ಉದ್ದೇಶದಿಂದ, ಅಸ್ತಂಗತರಾದ ರವಿಯವರ ಪುಟ್ಟಮಗುವಿನೊಂದಿಗೊಂದು ಕ್ಷಣ ಮಂದಹಾಸವನು ಬೀರಬೇಕೆಂಬ ಮಹದಾಸೆಯಿಂದ, ಪತಿಯನಗಲಿ ಗತಿಯಿಲ್ಲದವಳಾದೆ ಎನುವ ಸಹಜ ಖಿನ್ನತೆಯಲ್ಲಿರಬಹುದಾದ ಅವರ ಧರ್ಮಪತ್ನಿಯವರನ್ನು ತಮ್ಮನ ಸ್ಥಾನದಲ್ಲಿ ಬರಿಯ ಕೈಯಲ್ಲಾದರೂ ನಿಂತು ಮನೋಸ್ಥೈರ್ಯ ತುಂಬಬೇಕೆಂಬ ಪುಟ್ಟಮನಸ್ಸಿನಿಂದ, ದಿಟ್ಟ ನಡಿಗೆಯಿಟ್ಟಿದ್ದೆ.

ಮೋಡದೊಳಗೆ ಮರೆಯಾದ ಸೂರ್ಯ ಬಿಸಿಲ ಚೆಲ್ಲದಿದ್ದರಿಂದ ಮಡಿಕೇರಿಯಲಿ ತಂಪಿದ್ದರೂ ಮನದೊಳಗೊಂದು ನೋವ ಉರಿಯಿತ್ತು, ಆ ರವಿಯನು ಮುಖತಃ ಭೇಟಿಯಾಗಲಾಗಲಿಲ್ಲವೆಂಬ ಕರಿಛಾಯೆಯಿತ್ತು. ಫೇಸ್ಬುಕ್ ಮಿತ್ರ ಧನಂಜಯ್ ಮಡಿಕೇರಿಯವರನ್ನು [ಶ್ರೀಯುತರು ಮಡಿಕೇರಿ ಜಿಲ್ಲೆ ಪೋಲಿಸ್ ನಿಸ್ತಂತು(ವಯರ್ಲೆಸ್) ವಿಭಾಗದ ಅಧಿಕಾರಿ] ಜೊತೆಗೆ ಬರಲು ಆಹ್ವಾನಿಸಿದಾಗ, ಚುನಾವಣಾ ಕರ್ತವ್ಯದ ತೀವ್ರ ಕೆಲಸಗಳ ನಡುವೆಯೂ ನನ್ನ ಜೊತೆಯಾದರು. ಧನಂಜಯರ ದ್ವಿಚಕ್ರವಾಹನವು ದಾರಿ ಹಿಡಿದದ್ದು ಮಡಿಕೇರಿಯ ಮುತ್ತಪ್ಪ ದೇವಸ್ಥಾನದ ಹಿಂಭಾಗಕ್ಕೆ.

‘ತಾನು ಇದೇ ಜೂನ್ ತಿಂಗಳಲ್ಲಿ ತಾಯ್ನಾಡಿಗೆ ಬರುತ್ತೇನೆ, ಮತ್ತೆ ವಾಪಾಸ್ಸು ಹಿಂದಿರುಗುವುದಿಲ್ಲ’ ಎಂಬ ಪತಿ ದೇವರ ಮಾತನ್ನು ಪ್ರೇಮಾ ಪದೇ ಪದೇ ಮೆಲುಕುಹಾಕಿದಾಗಲಂತೂ ನಾವು ಮೌನಿ. ಮಗು ಆದಿತ್ಯನಂತೂ ಅಪ್ಪ ಕಳೆದ ವರ್ಷ ಕಳುಹಿಸಿದ ಆನೆಯನ್ನು ನೆನೆಸಿಕೊಳ್ಳುತ್ತಾನಂತೆ. ಊರಿಗೆ ಬಂದಾಗ ತನಗಾಡಲು ಇನ್ನೂ ದೊಡ್ಡ ಆನೆಯನ್ನೇ, ಅದೂ ಜೀವಂತ ಆನೆಯನ್ನೇ ಕೊಡಿಸುತ್ತಾರೆ ಎನ್ನುವ ಮುಗ್ದ ಬಯಕೆಗೆ ಜೀವ ಬರಲೇ ಇಲ್ಲ. ಬರುವುದೇ ಇಲ್ಲವೇನೋ? ಇದು ಬದುಕು, ನಾವೊಂದು ಬಗೆದರೆ ದೈವವೊಂದು ಬಗೆಯುತ್ತದೆಯೆನ್ನುವದಕೆ ಸಾಕ್ಷಿ! ವಿಧಿ ಕ್ರೂರಿ!

ಪ್ರೇಮರವರ ದುಃಖದಲ್ಲಿಂತಾದರೂ ಭಾಗಿಯಾಗುವುದು ನಮ್ಮ ಕರ್ತವ್ಯವಾಗಿತ್ತು. ನಂಬಿದವರನ್ನೇ ಕಳೆದುಕೊಂಡ, ತನಗಿನ್ನಾರು ಗತಿ ಮುಂದಕ್ಕೆನುವ ಮನಸ್ಥಿತಿಯಲ್ಲಿ ಹೆಚ್ಚಿನ ಸಹಾಯ ನಮ್ಮ ಕೈಲಾಗದಿದ್ದರೂ ‘ನಿಮ್ಮ ಜೊತೆ ನಾವಿದ್ದೇವೆ’ ಎನ್ನುವ ನೈತಿಕ ಬೆಂಬಲ, ಮನೋಸ್ಥೈರ್ಯ ನೀಡುವುದು ಬಹುಶಃ ಮುಖ್ಯವಾಗುತ್ತದೆ ನೋವನೊಂದಷ್ಟು ದೂರ ತಳ್ಳಲು ಬೆಂದ ಮನದಿಂದ. ಕತ್ತಲೊಂದನು ಕಳೆದರೆ ಮೂಡಣದಿ ಮತ್ತೆ ಬೆಳಕು ಮೂಡಬಹುದೆಂಬ ಭರವಸೆ. ರವಿಯಿಲ್ಲದಿದ್ದರೂ ತನ್ನವರೆನಿಸಿಕೊಂಡವರಿದ್ದಾರಲ್ಲ ಜೊತೆಗೆನ್ನುವ ಆತ್ಮೀಯತೆ, ಒಲವು, ಪ್ರೀತಿಯೊಂದಿಗೆ ನೊಂದವರು ನೋವ ಮರೆತರೆ ನಮ್ಮ ಮೊಗದಲೊಂದಿಷ್ಟು ಸಂತಸ.

ನೋವ ಸಾಗರದಲ್ಲೂ ಈ ಸಂತಸದ ಕಿರಣ ಹೊಮ್ಮಲು ಬೆನ್ನೆಲುಬಾಗಿ ನಿಂತವರು ಹಲವರು. ದೂರದ ಅಮೇರಿಕಾದ ಬಾಸ್ಟನ್ ಕನ್ನಡ ಕೂಟದ ರಾಜೇಶ್ ಪೈ ಮತ್ತು ಮಧುಸೂದನ್ ಅಕ್ಕಿಹೆಬ್ಬಾಳ್, ಶಿರ್ವಾ ಹರೀಶ್ ಶೆಟ್ಟಿ, ರಂಗಸ್ವಾಮಿ ಮೂಕನಹಳ್ಳಿ, ಶ್ರೀನಿವಾಸ ಪ್ರಭು, ಪದ್ಯಾಣ ರಾಮಚಂದ್ರ ರಾವ್ , ಪ್ರಮೋದ್ ಶೆಟ್ಟಿ, ಮೊದಲಾದವರಾದಿಯಾಗಿ ಧನಸಹಾಯವು ರವಿ ಮೂರ್ನಾಡ್ ಕುಟುಂಬಕ್ಕೆ ಹರಿದುಬಂದಿದ್ದು ಸಂತಸನೀಡಿದ ವಿಚಾರ. ಇದಷ್ಟೇ ಅಲ್ಲದೇ ಇನ್ನೂ ಅನೇಕ ನಮ್ಮ ಫೇಸ್ಬುಕ್ ಮಿತ್ರರು ಕೊಡುಗೆ ನೀಡಿದ್ದನ್ನು ನಾನಿಲ್ಲಿ ಸ್ಮರಿಸಬೇಕು. (ನಾನಿಲ್ಲಿ ಎಲ್ಲಾ ಕೊಡುಗೈ ದಾನಿಗಳ ಹೆಸರುಗಳನ್ನು ಪ್ರಸ್ತಾಪಿಸಲು ಸಾಧ್ಯವಾಗುತ್ತಿಲ್ಲ, ದಾನಿಗಳ ಅನುಮತಿಯೊಂದಿಗೆ ಮುಂದಿನ ದಿನಗಳಲ್ಲಿ ಅದನ್ನು ಪ್ರಕಟಿಸುವೆ. ಕ್ಷಮೆಯಿರಲಿ). ಈ ರೀತಿಯ ಧನಸಹಾಯವಲ್ಲದೇ, ಗುರುತು ಪರಿಚಯವಿಲ್ಲದಿದ್ದರೂ, ನಮ್ಮ ಸಹಾಯದ ಮನವಿಗೆ ಸ್ಪಂದಿಸಿದ ಫೇಸ್ಬುಕ್ ಮಿತ್ರರಲ್ಲೊಬ್ಬರಾದ ವಿನಯಾರವರು ಪ್ರೇಮಾರವರಿಗೆ ಹೊಲಿಗೆಯಂತ್ರವೊಂದನ್ನು ತಲುಪಿಸುವ ಮುಖಾಂತರ ಮಾನವೀಯತೆಯನ್ನು ಮೆರೆಸುವ ಕಾರ್ಯ ಮಾಡಿದ್ದಾರೆ. ಇದಲ್ಲದೇ ಪ್ರೇಮಾರವರು ಸ್ವಾವಲಂಬಿಯಾಗಿ ಜೀವನ ನಡೆಸಲು ತನ್ನಿಂದಾಗಬಹುದಾದ ಸಹಾಯ ಹಸ್ತ ಚಾಚಲು ಸಿದ್ಧ ಎನ್ನುವ ಮನೋಭಾವವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನೂ ಹೆಚ್ಚಿನ ಧನ ಸಹಾಯದ ಮಾತು ಕೂಡ ರಂಗಸ್ವಾಮಿಯವರಿಂದ ಬಂದಿದೆ. ಜೊತೆಗೆ ಆ ಮಗುವಿನ ವಿದ್ಯಾಭ್ಯಾಸಕ್ಕೆ ನೆರವಾಗುವಂತೆ ತಿಂಗಳಿಗೆ ಒಂದು ಕಿರುಮೊತ್ತವನ್ನು ರವಿ ಮೂರ್ನಾಡ್ ಕಟ್ಟಿ ಬೆಳೆಸಿದ ಕನ್ನಡ ಬ್ಲಾಗ್ ನಿರ್ವಾಹಕ ತಂಡ ಆ ಕುಟುಂಬಕ್ಕೆ ನೀಡಲಿದೆ. ನಿರ್ವಾಹಕ ತಂಡದೊಂದಿಗೆ ಮತ್ತೋರ್ವ ಫೇಸ್ಬುಕ್ ಮಿತ್ರ ಕೃಷ್ಣಮೂರ್ತಿ ಭದ್ರಾವತಿಯವರಂಥ ಮಹಾನುಭಾವರು ಕೈ ಜೋಡಿಸಿದ್ದು, ಈ ನಿಟ್ಟಿನಲ್ಲಿ ಎಲ್ಲರನ್ನೂ ಆ ಕುಟುಂಬದ ಪರವಾಗಿ ವಂದಿಸುತ್ತೇವೆ. ಇನ್ನೂ ಹೆಚ್ಚಿನ ಧನಸಹಾಯದ ಭರವಸೆಗಳು ಬಂದಿದ್ದು, ಕನ್ನಡಿಗರು ತಮ್ಮವರನು ಕೈಬಿಡಲಾರರು ಎನ್ನುವುದಕ್ಕೆ ಇದು ನಿದರ್ಶನ ಮತ್ತು ಶ್ರೇಷ್ಠಗುಣ.

ನನ್ನ ಜೊತೆ ಬೆಂಗಳೂರಿಗೆ ಬರುತ್ತೀಯಾ ಎಂದು ಕೇಳಿದರೆ ದೊಡ್ಡವನಾದ ಮೇಲೆ ಬರುತ್ತೇನೆನ್ನುವ ಆ ಪುಟ್ಟಮಗು ಆದಿತ್ಯ, ಅಪ್ಪನಿಲ್ಲದ ಕೊರಗಲಿ ಸೊರಗದೇ, ಬೆಳಕ ಕಿರಣವಾಗಲಿ ಪ್ರೇಮಾರ ಬದುಕಿನಲಿ, ರವಿಯಸ್ತಂಗತನಾದರೂ ಮೂಡಣಾಕಾದಿತ್ಯನಿರಲಿ!

 

One thought on “ರವಿಯಸ್ತಂಗತನಾದರೂ ಮೂಡಣಾಕಾದಿತ್ಯನಿರಲಿ!

  1. ನನ್ನ ಈ ಲೇಖನವನ್ನು ಕಳಕಳಿಯಿಂದ ಪ್ರಕಟಿಸಿದ ಕೊಡಗು ನ್ಯೂಸ್ ತಂಡಕ್ಕೆ ವಂದನೆಗಳು

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *