ಮಹಿಳೆಯರ ಭಕ್ತಿ ಭಾವದ ಹಬ್ಬ ನಾಗರ ಪಂಚಮಿ

Posted on: August 10, 2013

DSC01074
ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ಆಚರಿಸುತ್ತಾರೆ. ಇದನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುವುದುಂಟು. ಈ ವಿಶೇಷ ದಿನದಂದು ನಾಗ ಕಲ್ಲಿಗೆ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಭಕ್ತಿ ಭಾವದಿಂದ ಹೆಂಗಳೆಯರು ಪೂಜೆ ಸಲ್ಲಿಸುತ್ತಾರೆ.
ಬೆಳಗ್ಗೆ ಮಂಗಳ ಸ್ನಾನ ಮುಗಿಸಿ ಮಡಿ ಬಟ್ಟೆ ತೊಟ್ಟು ಪೂಜೆ ಆರಂಭಿಸಬೇಕು. ದೇವರ ಮನೆಯಲ್ಲಿ ಮಣ್ಣಿನಿಂದ ಹುತ್ತದ ಮತ್ತು ಹಾವಿನ ಆಕಾರಗಳನ್ನು ಮಾಡಿ ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಸುಬ್ರಹ್ಮಣ್ಯ ಸ್ವಾಮಿಯ ಫೋಟೋ ಇರುತ್ತದೆ. ಅದನ್ನೂ ಜೊತೆಯಲ್ಲಿ ಇಟ್ಟು ಪೂಜೆ ಮಾಡಬಹುದು. ಈ ದಿನದಂದೂ ನಾಗಪ್ಪನಿಗೆ ಹಾಲು ನೀರಿನಿಂದ ತನಿ ಎರೆಯುತ್ತಾರೆ. ಆದರೆ ಮಂತ್ರಾಕ್ಷತೆ ಉಪಯೋಗ ಮಾಡುವುದಿಲ್ಲ. ಅದರ ಬದಲು ಅಕ್ಕಿ ಹಿಟ್ಟು ಕಡಲೆ ಕಾಳು ಸೇರಿಸಿದ ಮಿಶ್ರಣ ಇಡುವುದು ಹೆಚ್ಚು ಉಪಯುಕ್ತವಾಗಿರುತ್ತದೆ ಎನ್ನುವುದು ಹಿರಿಯರ ನಂಬಿಕೆ.
ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇಲ್ಲಿ ಮೂರರಿಂದ ಐದು ದಿನ ಆಚರಿಸಲ್ಪಡುವ ಈ ಹಬ್ಬಕ್ಕೆ ಉಂಡೆ /ಉಂಡಿ ಹಬ್ಬ ಎಂತಲೂ ಕರೆಯುತ್ತಾರೆ.
ಒಡಹುಟ್ಟಿದವರ ಹಬ್ಬ: ನಾಗರ ಪಂಚಮಿ ಹಬ್ಬವನ್ನು ಅಣ್ಣ-ತಂಗಿಯರ ಹಬ್ಬವೆಂದು ಕರೆಯುತ್ತಾರೆ. ಈ ವಿಶೇಷ ದಿನದಂದು ಸೋದರ- ಸೋದರಿಯರ ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎನ್ನುತ್ತಾ ಹುತ್ತಕ್ಕೆ ಎರೆದ ಹಾಲನ್ನು ಸೋದರರ ಹೊಕ್ಕಳಿಗೂ, ಬೆನ್ನಿಗೂ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಯಾಕಂದ್ರೆ ಹೊಟ್ಟೆ ಎಂದರೆ ಮುಂದಿನ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂದು, ಬೆನ್ನು ಎಂದರೆ ಹಿಂದಿನ ಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂದೆಂದು ಸುಖ ಸಂತೋಷದಿಂದ ನೆಮ್ಮದಿಯಾಗಿರಲಿ ಎಂದು ಮತ್ತು ಈ ಹಬ್ಬ ಒಡಹುಟ್ಟಿದವರ ಸಂಬಂಧ ಸದೃಢವಾಗಿರಲಿ ಎಂದು ಆಶಿಸುವುದು ವಿಶೇಷ.
ಕೃತಜ್ಞತೆಯ ಸಂಕೇತ: ಸಾಮಾನ್ಯವಾಗಿ ಜ್ಯೇಷ್ಠ-ಆಷಾಡ ನಡುವೆ ಮಳೆಯಾಗುತ್ತದೆ. ಈ ಕಾಲಾವಧಿಯಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಶ್ರಾವಣ ಆರಂಭದ ಹೊತ್ತಿಗೆ ಬಿತ್ತಿದ ಬೀಜಗಳು ಪೈರಾಗಿ ಬೆಳೆದಿರುತ್ತವೆ. ಬೆಳೆದ ಪೈರನ್ನು ಇಲಿಗಳು ತಿಂದು ಅಪಾರ ಹಾನಿಯುಂಟುಮಾಡುತ್ತದೆ. ಇಂತಹ ಸಂರ್ಭದಲ್ಲಿ ಹಾವುಗಳು ಇಲಿಗಳನ್ನು ತಿನ್ನುವ ಮೂಲಕ ರೈತರಿಗೆ ಸಹಾಯ ಮಾಡುತ್ತದೆ. ಇಂತಹ ಹಾವಿನ ಋಣವನ್ನು ಹುತ್ತಕ್ಕೆ ಹಾಲೆರುವ ಮೂಲಕ ತೀರಿಸುತ್ತಾರೆ.
ಸಂತಾನೋತ್ಪತ್ತಿಗೆ ಸಹಕಾರಿ: ಶ್ರಾವಣ ಮಾಸದ ನಾಗರ ಪಂಚಮಿಯ ದಿನದಂದು ಹುತ್ತಕ್ಕೆ ಹಾಲೆರೆಯುವುದರಿಂದ ಹುತ್ತದ ಔಷಧಯುಕ್ತ ವಾಸನೆಯನ್ನು ತಾಯಿಯು ಸೇವಿಸುವುದರಿಂದ ಹುಟ್ಟುವ ಮಕ್ಕಳು ಯಾವುದೇ ರೋಗ ರುಜೀನಗಳಿಂದ ಮುಕ್ತವಾಗಿ, ಆರೋಗ್ಯವಂತ ಮಕ್ಕಳು ಜನಿಸಲು ಸಹಕಾರಿಯಾಗಿರುತ್ತದೆ ಎನ್ನುತ್ತಾರೆ ಹಿರಿಯರು.
ಪೂಜಾ ವಿಧಿ-ವಿಧಾನಗಳು: ನೈವೇದ್ಯಕ್ಕೆ ಚಿಗಳಿ(ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿಂಡಿ), ತಂಬಿಟ್ಟು(ಅಕ್ಕಿ ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು)ಗಳನ್ನು ಮಾಡುತ್ತಾರೆ.
ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆದು ಅಕ್ಕ-ಅಣ್ಣನಿಗೆ ನಮಸ್ಕಾರ ಮಾಡುತ್ತಾರೆ.
ವಿಶೇಷ ತಿನಿಸುಗಳು: ಈ ವಿಶೇಷ ದಿನದಂದು ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬನ್ನು ತಯಾರಿಸುತ್ತಾರೆ.
ಕರಿದ ತಿಂಡಿ ನಿಷಿದ್ಧ: ನಾಗರ ಪಂಚಮಿಯ ದಿನ ನಾಗಪ್ಪನಿಗೆ ಘಾಟು ತಗುಲಾಬಾರದೆಂದು ಕರಿದ ಮತ್ತು ಎಣ್ಣೆಯ ತಿನಿಸುಗಳನ್ನು ನಿಷೇಧಿಸಲಾಗಿರುತ್ತದೆ.
ಹಬ್ಬದ ಕೊನೆಯಲ್ಲಿ ಜೋಕಾಲಿ ಕಟ್ಟಿ ಆಟವಾಡುತ್ತಾ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲೇ ಅಲ್ಲ, ಇಡೀ ಭಾರತ ದೇಶದಲ್ಲಿಯೇ ವಿಜ್ರಂಭಣೆಯಿಂದ ಆಚರಿಲಾಗುತ್ತದೆ.
ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಶುಭವನ್ನು ಉಂಟು ಮಾಡಲಿ ಎಂದು kodagunews.com ಬಳಗ ಹಾರೈಸುತ್ತದೆ.

4 09080420080806_pic4 nagara-in1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *