ಜಿಲ್ಲೆಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ : ಮಡಿಕೇರಿಯಲ್ಲಿ ಗೃಹ ಸಚಿವರಿಂದ ಧ್ವಜಾರೋಹಣ : ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸಲು ಕರೆ

Posted on: January 26, 2014

ಮಡಿಕೇರಿ:
ಕೊಡಗು ಜಿಲ್ಲೆಯಾದ್ಯಂತ 65 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಡಿಕೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ ಎಂದು ಭರವಸೆ ನೀಡಿದರು.

IMG_6321
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವರು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿಯ ಹಾದಿಯಲ್ಲಿ ಸಾಗಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು. ಸ್ವಾತಂತ್ರ್ಯ ಹಾಗೂ ಗಣತಂತ್ರದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಭೇದಭಾವವಿಲ್ಲದೆ ದೇಶದ ಅಭಿವೃದ್ಧಿಗೆ ಮುಂದಾಗಬೇಕು. ಸ್ವಾತಂತ್ರ್ಯದ ಹಣತೆಯನ್ನು ಹಚ್ಚಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು, ಸಮಾನತೆಗಾಗಿ ಹೋರಾಟ ನಡೆಸಿದ ಧೀಮಂತ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್, ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಇವರ ವೀರ ಪರಂಪರೆ ಇಮ್ಮಡಿಗೊಳ್ಳಲಿ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಮಹತ್ವಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಯೋಜನೆ, ಸಾಮಾಜಿಕ ಭದ್ರತೆಯ ಮನಸ್ವಿನಿ ಯೋಜನೆ ಹಾಗೂ ಮೈತ್ರಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಟಾನಗೊಳಿಸಿದೆ. ರೈತರು ಪಡೆಯಲಾದ ಅಲ್ಪಾವಧಿ ಬೆಳೆ ಸಾಲವನ್ನು ರೂ.25,000/-ದವರೆಗೆ ಮನ್ನಾ ಮಾಡಲಾಗಿದೆ. ವಿವಿಧ ನಿಗಮಗಳ ಮೂಲಕ ನೀಡಿದ ಸಾಲವನ್ನು ಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ 5871 ಫಲಾನುಭವಿಗಳ ರೂ. 5.94 ಕೋಟಿ ಸಾಲ ಮನ್ನಾ ಮಾಡಲು ಕ್ರಮವಹಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿ ಹೆಣ್ಣು ಮಕ್ಕಳ ಹಾಜರಾತಿಗೆ ಪ್ರತಿ ದಿನ ರೂ. 2ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ “ವಿದ್ಯಾಸಿರಿ” ಎಂಬ ನೂತನ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ರೂ. 50,000/- ಸಹಾಯಧನ ನೀಡುವ “ಬಿದಾಯಿ (ಶಾದಿ ಭಾಗ್ಯ)” ಯೋಜನೆ ಜಾರಿಗಾಗಿ ಜಿಲ್ಲೆಗೆ ರೂ. 9.00ಲಕ್ಷ ಅನುದಾನ ಬಿಡುಗಡೆಯಾಗಿದೆ.
ಅರಣ್ಯ ಹಕ್ಕು ಕಾಯ್ದೆಯಡಿ ಕೊಡಗು ಜಿಲ್ಲೆಯಲ್ಲಿ ಒಟ್ಟು 1112 ಪರಿಶಿಷ್ಟ ಪಂಗಡದ ಅರಣ್ಯ ವಾಸಿಗಳಿಗೆ ಒಟ್ಟು 1364.37 ಎಕರೆ ಅರಣ್ಯ ಭೂಮಿ ಹಾಗೂ 45 ಹಾಡಿಗಳಲ್ಲಿ ಒಟ್ಟು 26237.22 ಎಕರೆ ಅರಣ್ಯ ಭೂಮಿಯನ್ನು ಸಮುದಾಯ ಹಕ್ಕಾಗಿ ಮಂಜೂರು ಮಾಡಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರ್ರಿ ಕಾರ್ಯಕ್ರಮದಡಿ ಜಿಲ್ಲೆಗೆ ರೂ.24.48 ಕೋಟಿ ಅನುದಾನ ನಿಗದಿಯಾಗಿದ್ದು 2.78 ಲಕ್ಷ ಮಾನವ ದಿನಗಳ ಉದ್ಯೋಗವನ್ನು ಒದಗಿಸಲಾಗಿದೆ.
“ನಿರ್ಮಲ ಭಾರತ ಅಭಿಯಾನ” ಕಾರ್ಯಕ್ರಮದಡಿ ಈಗಾಗಲೇ ಈ ಸಾಲಿನಲ್ಲಿ 5963 ಶೌಚಾಲಯಗಳನ್ನು ಪೂರ್ತಿಗೊಳಿಸಿದ್ದು, ಜಿಲ್ಲೆಯಲ್ಲಿ 98 ಗ್ರಾಮ ಪಂಚಾಯತಿಗಳ ಪೈಕಿ 60 ಗ್ರಾಮ ಪಂಚಾಯತಿಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ದೊರೆತ್ತಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರೂ. 9.57 ಕೋಟಿ, ಕುಡಿಯುವ ನೀರಿನ ಯೋಜನೆಗೆ ರೂ.25.00 ಕೋಟಿ, ತುರ್ತು ಕಾಮಗಾರಿಗಳಿಗೆ ರೂ.2.80 ಕೋಟಿ, ಬರಪರಿಹಾರದಡಿ ರೂ. 3.00 ಕೋಟಿ ನೀಡಲು ಯೋಜಿಸಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಡಿ ರೂ. 4.17 ಕೋಟಿ ಖರ್ಚು ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯ ರಾಜ್ಯ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ರೂ. 12.03 ಕೋಟಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಹುಣಸೂರು-ತಲಾಕಾವೇರಿ ರಸ್ತೆ ಮತ್ತು ವಿರಾಜಪೇಟೆ-ಬೈಂದೂರು ರಸ್ತೆ ಅಭಿವೃದ್ದಿಗೆ ರೂ. 17.06 ಕೋಟಿ, ಘಾಟ್ ರಸ್ತೆ ಅಭಿವೃದ್ಧಿಗಾಗಿ ರೂ.9.43 ಕೋಟಿ, ಪ್ರಕೃತಿ ವಿಪತ್ತು ಕಾರ್ಯಕ್ರಮದಡಿ ರೂ.50.00 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.
ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪೊನ್ನಂಪೇಟೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಟರ್ಫ್ ಹಾಕಿ ಮೈದಾನ ನಿರ್ಮಾಣಕ್ಕಾಗಿ ರೂ.2.00 ಕೋಟಿ, ವಿರಾಜಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ರೂ. 3.00 ಕೋಟಿ, ಮಡಿಕೇರಿಯಲ್ಲಿರುವ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಈಜುಕೊಳ ಪುನಶ್ಚೇತನಕ್ಕಾಗಿ ರೂ.2.07 ಕೋಟಿ ಅನುದಾನದಡಿ ಕಾಮಗಾರಿ ಪ್ರಗತಿಯಲ್ಲಿದೆ.
ಜಿಲ್ಲೆಯ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಕುಶಾಲನಗರದಲ್ಲಿ ರೂ. 3ಕೋಟಿ ವೆಚ್ಚದಲ್ಲಿ ಕಲಾ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಗ್ರಹ ಸಚಿವರೂ ಆದ ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.

IMG_6384 IMG_6361 IMG_6358 IMG_6354 IMG_6341 IMG_6331 IMG_6325 IMG_6321 IMG_6319 IMG_6318 IMG_6317 IMG_6315 IMG_6314 IMG_6313 IMG_6310 IMG_6293 IMG_6291 IMG_6289 IMG_6287 IMG_6286 IMG_6284 IMG_6281 IMG_6270 IMG_6269 IMG_6281 IMG_0184 IMG_0181 IMG_0164 IMG_0003 IMG_6351 IMG_6348 IMG_6346 IMG_6342 IMG_6339 IMG_6335 IMG_6331

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *