ಲೋಕಾರ್ಪಣೆಗೆ ಸಿದ್ದವಾಗಿದೆ ಶ್ರೀ ಮಹಾಗಣಪತಿ ದೇವಾಲಯ

Posted on: January 27, 2014

ಸೋಮವಾರಪೇಟೆ:
ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ನಿರ್ಮಾಣವಾಗಿರುವ ಸಮೀಪದ ಹಾನಗಲ್ಲು ಗ್ರಾಮದ ಶ್ರೀ ಮಹಾಗಣಪತಿ ದೇವಾಲಯ ಲೋಕಾರ್ಪಣೆಗೆ ಸಿದ್ದಗೊಂಡಿದೆ.

26SPT05
40 ವರ್ಷಗಳ ಹಿಂದೆ ಗಣೇಶೋತ್ಸವ ದಿನದಂದು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದ ಸ್ಥಳದಲ್ಲಿ ಇದ್ದಂತಹ ಪುಟ್ಟ ಗುಡಿಯಲ್ಲಿ ನಂತರದ ದಿನಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದೀಗ ಆ ಪುಟ್ಟ ಗುಡಿಯನ್ನು ಕೆಡವಿ ನೂತನ ದೇವಾಲಯವನ್ನು ನಿರ್ಮಿಸಲಾಗಿದೆ. ಹಾನಗಲ್ಲು ಗ್ರಾ.ಪಂ.ಗೆ ಒಳಪಡುವ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ರೂ. 13 ಲಕ್ಷ ವೆಚ್ಚದಲ್ಲಿ ನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಮುಂದಿನ ಫೆ. 5 ಮತ್ತು 6ರಂದು ಪ್ರಾರಂಭೋತ್ಸವ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವ ನೆರವೇರಲಿದೆ.
ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಆರ್. ರಮೇಶ್, ಉಪಾಧ್ಯಕ್ಷ ಹೆಚ್.ಸಿ. ರಾಜು, ಕಾರ್ಯದರ್ಶಿ ಧರ್ಮಪ್ಪ, ಪ್ರಮುಖರಾದ ಜೋಯಪ್ಪ, ಬಸಪ್ಪ ಸೇರಿದಂತೆ ಇತರರು ದೇವಾಲಯ ನಿರ್ಮಾಣದ ಉಸ್ತುವಾರಿ ವಹಿಸಿದ್ದು, ಉದ್ಘಾಟನೆಗೆ ಸಿದ್ದತೆ ನಡೆಸುತ್ತಿದ್ದಾರೆ. ಫೆ.5 ರಂದು ಬೆಳಿಗ್ಗೆ 8.30ಕ್ಕೆ ದೇವಾಲಯದ ಪ್ರಾರಂಭೋತ್ಸವ ನೆರವೇರಲಿದೆ. ಅಂದು ಬೆಳಿಗ್ಗೆ 8.30ರಿಂದ ಶೃಂಗೇರಿಯ ಘನಪಾಟಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಅಂಕುರಾರ್ಪಣಾ, ಪಂಚಗವ್ಯ, ಶುದ್ಧಿ ಹೋಮ, ನವಗ್ರಹ ಹೋಮ, ಬಿಂಬಶುದ್ಧಿ, ಜಲಾಧಿವಾಸ, ಕ್ಷೀರಾಭಿವಾಸ ಪೂಜೆಗಳು, ಪಂಚವಿಂಶತಿ, ಕಲಶ ಪ್ರತಿಷ್ಠಾಪನೆ, ಮಹಾಪೂಜೆ, ಮಂಗಳಾರತಿ ನೆರವೇರಲಿದೆ.
ಸಂಜೆ 5 ಗಂಟೆಗೆ ರಾಕ್ಷೊಘ್ನ ಹೋಮ, ಅಘೋರಾಸ್ತ್ರ ಹೋಮ, ಪ್ರಸಾದ ಹೋಮ, ಗಣಪತಿ ಪ್ರತಿಷ್ಠಾಂಗ ಪರ್ಯಾಯತ್ರಯ ಹೋಮ, ಧಾನ್ಯಾಧಿವಾಸ, ಶಯ್ಯಾದಿಕಲ್ಪ ಪೂಜೆಗಳು ನೆರವೇರಲಿವೆ.
ತಾ. 6ರಂದು ಪ್ರಾತಃಕಾಲ 4.30ಕ್ಕೆ ಮಹಾಗಣಪತಿ ಪ್ರತಿಷ್ಠಾಪನೆ, ಅಷ್ಟಬಂಧ, ಕಲಾನ್ಯಾಸ, ತತ್ವಾನ್ಯಾಸ, ಶಿಖರ ಪ್ರತಿಷ್ಠಾಪನಾ ಹೋಮ, ಶಿಖರ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕ, ಮಹಾಮಂಗಳಾರತಿ, 12.30ರಿಂದ ಅನ್ನದಾನ ನೆರವೇರಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ವಿರಕ್ತ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಆರ್. ರಮೇಶ್ ವಹಿಸಲಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚಿದಾನಂದ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *