ಮೇ.29 ರಂದು ಕೊಡಗು ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ : ಈ ಬಾರಿ ಮಹಿಳೆಯರ ದರ್ಬಾರ್

Posted on: May 24, 2014

ಮಡಿಕೇರಿ :

ಕೊಡಗು ಜಿಲ್ಲಾ ಪಂಚಾಯಿತಿಯ ಮೂರನೇ ಅವಧಿಯ ಅಧಿಕಾರಕ್ಕಾಗಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇ.29 ರಂದು ನಡೆಯಲಿದೆ. ಈ ಬಾರಿ ಘೋಷಣೆಯಾಗಿರುವ ಮೀಸಲಾತಿಯ ಪ್ರಕಾರ ಜಿ.ಪಂ. ನಲ್ಲಿ ಮಹಿಳೆಯರ ದರ್ಬಾರ್ ನಡೆಯಲಿದೆ. ಮುಂದಿನ 20 ತಿಂಗಳ ಆಡಳಿತಕ್ಕಾಗಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಬಿ.ಸಿ.ಎಂ.ಬಿ. ಮಹಿಳೆಗೆ ನಿಗಧಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಮೀಸಲಾತಿ ಪ್ರಕಟಗೊಂಡಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಈಗಾಗಲೆ ಅಧಿಕಾರಕ್ಕಾಗಿ ಲೆಕ್ಕಾಚಾರ ನಡೆದಿದೆ.

ಕೊಡಗು ಜಿಲ್ಲಾ ಪಂಚಾಯಿತಿ 29 ಸದಸ್ಯ ಬಲ ಹೊಂದಿದ್ದು, ಬಿಜೆಪಿ 21 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಏಳು ಹಾಗೂ ಜೆಡಿಎಸ್ ಓರ್ವ ಸದಸ್ಯರ ಬಲ ಹೊಂದಿದೆ. ಪ್ರಥಮ ಅವಧಿಯಲ್ಲಿನ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿ ಮಡಿಕೇರಿ ತಾಲೂಕಿನ ಮಕ್ಕಂದೂರು ಕ್ಷೇತ್ರದ ಶಾಂತೆಯಂಡ ರವಿಕುಶಾಲಪ್ಪ ಅಧ್ಯಕ್ಷ ಹಾಗೂ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಕ್ಷೇತ್ರದ ಹೆಚ್.ಎಂ.ಕಾವೇರಿ ಉಪಾಧ್ಯಕ್ಷರಾಗಿ ಅಧಿಕಾರದ ರುಚಿ ನೋಡಿದ್ದರು.

Jilla-1

ಎರಡನೆಯ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿ ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆ ಕ್ಷೇತ್ರದ ಬಿ.ಶಿವಪ್ಪ ಅಧ್ಯಕ್ಷ ಹಾಗೂ ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಕ್ಷೇತ್ರದ ಸದಸ್ಯೆ ಬಿದ್ದಂಡ ಉಷಾ ದೇವಮ್ಮ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ಪಂಚಾಯಿತಿಯ ಕೊನೆಯ ಅವಧಿಯ ಅಧಿಕಾರಾವಧಿಯಲ್ಲಿ ಅಧ್ಯಕ್ಷ ಸ್ಥಾನ ಬಹುತೇಕ ವಿರಾಜಪೇಟೆ ತಾಲೂಕಿಗೆ ಒಲಿಯುವ ಸಾಧ್ಯತೆ ಹೆಚ್ಚಾಗಿದೆ. ಪ್ರಥಮ ಅವಧಿಯಲ್ಲಿ ಮಡಿಕೇರಿ ತಾಲೂಕಿಗೆ ಅಧ್ಯಕ್ಷ ಸ್ಥಾನ ದೊರೆತಿದ್ದು, ಎರಡನೆಯ ಅವಧಿಯ ಅಧ್ಯಕ್ಷಗಿರಿ ಸೋಮವಾರಪೇಟೆ ತಾಲೂಕಿಗೆ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಮೂರನೆಯ ಅವಧಿಯ ಅಧಿಕಾರಕ್ಕೆ ವಿರಾಜಪೇಟೆ ತಾಲೂಕಿನಿಂದ ಒತ್ತಡ ಬರುವುದು ನಿಶ್ಚಿತ.

ಸ್ಪರ್ಧೆಯಲ್ಲಿ ಕಾಂತಿಬೆಳ್ಯಪ್ಪ ಮೊದಲಿಗರು ::::
ಜಿಲ್ಲಾ ಪಂಚಾಯತಿ ಅಧಿಕಾರವನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡ ಬಳಿಕ ಪಕ್ಷದ 21 ಸದಸ್ಯರ ನಡುವೆ ಆಂತರಿಕ
ಒಪ್ಪಂದವೊಂದನ್ನು ಮಾಡಿಕೊಂಡಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಮೂರು ಅವಧಿಯ ಅಧಿಕಾರದಲ್ಲಿ ಒಮ್ಮೆ ಒಂದು ಸ್ಥಾನ ಪಡೆದುಕೊಂಡವರು ಮತ್ತೆ ಯಾವುದೇ ಬೇಡಿಕೆ ಮುಂದಿಡಬಾರದು ಎನ್ನುವುದು ಒಪ್ಪಂದದ ಸಾರಾಂಶವಾಗಿದೆ. ಇದರಂತೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸೇರಿ ಒಂದು ಅವಧಿಯಲ್ಲಿ ತಲಾ ಐದು ಮಂದಿಯಂತೆ 21 ಸದಸ್ಯರ ಪೈಕಿ 15 ಮಂದಿಗೆ ಒಂದಲ್ಲಾ ಒಂದು ಸ್ಥಾನ ದೊರೆಯುವುದರಿಂದ ಇದಕ್ಕೆ ಎಲ್ಲರೂ ಬದ್ಧರಾಗಿದ್ದಾರೆ ಎನ್ನಲಾಗಿದೆ.

ಇದೀಗ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಸ್ಥಾನಕ್ಕೆ ಶರೀನ್ ಸುಬ್ಬಯ್ಯ, ಕಾಂತಿ ಬೆಳ್ಯಪ್ಪ, ಮಣಿನಂಜಪ್ಪ, ಬೀನಾ ಬೋಳಮ್ಮ, ಧನ್ಯರತಿ, ಹಾಲಿ ಉಪಾದ್ಯಕ್ಷೆ ಬಿದ್ದಂಡ ಉಷಾ ದೇವಮ್ಮ ಅರ್ಹತೆ ಹೊಂದಿದ್ದಾರೆ. ಆದರೆ ಇವರ ಪೈಕಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕಾಂತಿ ಬೆಳ್ಯಪ್ಪ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಮತ್ತು ಪ್ರಭಾವ ಬೀರುವುದರಲ್ಲಿಯೂ ಯಶಸ್ವಿ ರಾಜಕಾರಣಿ ಎನಿಸಿಕೊಂಡಿದ್ದಾರೆ. ಈ ಹಿಂದಿನ ಆಂತರಿಕ ಒಪ್ಪಂದದಂತೆ ಪಕ್ಷ ಶರೀನ್ ಸುಬ್ಬಯ್ಯ ಅವರಿಗೆ ಅವಕಾಶ ನೀಡಲೇಬೇಕಾಗಿದೆಯಾದರೂ ಇದು ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.
ಉಪಾಧ್ಯಕ್ಷ ಸ್ಥಾನ ಬಿಸಿಎಂಬಿ ಮಹಿಳೆಗೆ ಮೀಸಲಾಗಿದ್ದು, ಮೂರನೆಯ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ವಿರಾಜಪೇಟೆ ತಾಲೂಕಿಗೆ ದೊರೆತಲ್ಲಿ ಉಪಾಧ್ಯಕ್ಷ ಸ್ಥಾನ ಮಡಿಕೇರಿ ತಾಲೂಕಿಗೆ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಇದರ ಲಾಭ ಸಿಗಲಿರುವುದು ಬಹುತೇಕ ಕಡಗದಾಳು ಕ್ಷೇತ್ರದ ಸದಸ್ಯೆ ಬೀನಾ ಬೋಳಮ್ಮ ಅವರಿಗೆ ಎನ್ನಲಾಗುತ್ತಿದೆ. ಆದರೆ ಧನ್ಯರತಿ ಪೂವಯ್ಯ ಅವರ ಹೆಸರು ಈ ಸ್ಥಾನಕ್ಕಾಗಿ ಪ್ರಬಲವಾಗಿ ಕೇಳಿ ಬರುತ್ತಿದೆ. ಎಲ್ಲಾ ರಾಜಕೀಯ ಕುತೂಹಲಗಳಿಗೂ, ಲೆಕ್ಕಾಚಾರಗಳಿಗೂ ಮೇ.೨೯ ರಂದು ತೆರೆ ಬೀಳಲಿದೆ.

ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ :::
ಮೇ.29 ರಂದು ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರ ಅಧ್ಯಕ್ಷತೆಯಲ್ಲಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಲಿದೆ.

Jilla-2

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *