ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಶುಶ್ರೂಷಕಿ ಗೀತಾ ಸಾವಿನ ಪ್ರಕರಣ : ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ : ಕುಟುಂಬಸ್ಥರ ಆರೋಪ

Posted on: October 11, 2014

ಮಡಿಕೇರಿ :

ಗೋಣಿಕೊಪ್ಪಲಿನ ಸರ್ಕಾರಿ ಆಸ್ಪತ್ರೆಯ ಹಿರಿಯ ಶುಶ್ರೂಷಕಿ ಎನ್.ಯು.ಗೀತಾ ಅವರು ಸುಟ್ಟ ಗಾಯಗಳಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ತಲೆಮರೆಸಿಕೊಂಡಿದ್ದು, ಇವರನ್ನು ತಕ್ಷಣ ಬಂಧಿಸಿ ನ್ಯಾಯ ಒದಗಿಸಿಕೊಡಬೇಕೆಂದು ಗೀತಾ ಅವರ ಪುತ್ರಿ ಚೋನಿರ ಜೆ.ನಿಖಿತ ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ. ದೂರು ನೀಡಿ 20 ದಿನಗಳೇ ಕಳೆದಿದ್ದರೂ ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೃತೆ ಗೀತಾ ಅವರ ಸಂಬಂಧಿ ತೇಲಪಂಡ ಶಿವಕುಮಾರ್ ನಾಣಯ್ಯ ಹಣ ಹಾಗೂ ರಾಜಕೀಯ ಪ್ರಭಾವದಿಂದ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಗೀತಾ ಅವರ ಬಾಯಿ ಮತ್ತು ದೇಹಕ್ಕೆ ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದ್ದು, ಇದೊಂದು ಪೂರ್ವ ನಿಯೋಜಿತ ಪ್ರಕರಣವೆಂದು ಆರೋಪಿಸಿದ ಅವರು ಶ್ರೀಮಂಗಲ ಠಾಣೆಯಲ್ಲಿ ದೂರು ದಾಖಲು ಮಾಡಲು ಪೊಲೀಸರು ವಿಳಂಬ ಧೋರಣೆ ತಾಳಿದರೆಂದು ಬೇಸರ ವ್ಯಕ್ತಪಡಿಸಿದರು.

PM-2

ಗೀತಾ ಅವರ ಪತಿ ಚೋನಿರ ಜೀತು ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಜೀತು ಅವರ ತಂದೆ ಚೋನಿರ ಕಾಳಯ್ಯ, ತಾಯಿ ನೀಲಮ್ಮ, ಅಣ್ಣ ಜೀವನ್, ಅಣ್ಣನ ಪತ್ನಿ ಶರ್ಲಿ ತಲೆಮರೆಸಿಕೊಂಡಿದ್ದಾರೆ. ಇವರುಗಳು ಸೀಮೆಎಣ್ಣೆ ಸ್ಟೌ ಸಿಡಿದು ಗೀತಾ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಾಡಗರಕೇರಿಯ ಅಡುಗೆ ಮನೆಯಲ್ಲಿ ಸ್ಟೌ ಸ್ಫೋಟಗೊಂಡ ಯಾವುದೇ ಕುರುಹುಗಳಿಲ್ಲ. ಗೀತಾ ಅವರು ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯ ಖರ್ಚಿನ ಮೊತ್ತ ೪.೫೦ ಲಕ್ಷ ರೂ. ಗಳನ್ನು ಪುತ್ರಿ ನಿಖಿತ ಮತ್ತು ಕುಟುಂಬದ ಇತರ ಸದಸ್ಯರು ಪಾವತಿಸಿದ್ದಾರೆ. ಗೀತಾ ಅವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಪತಿಯ ಮನೆಯವರು ಯಾರೂ ಆಸ್ಪತ್ರೆಗೆ ಭೇಟಿ ನೀಡಲಿಲ್ಲ. ಗೀತಾ ಅವರು ಸರ್ಕಾರಿ ನೌಕರರಾಗಿದ್ದರೂ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಕರಣದ ಕುರಿತು ಯಾವುದೇ ಸ್ಪಂದನೆಯನ್ನು ನೀಡಿಲ್ಲ ಎಂದು ತೇಲಪಂಡ ಶಿವಕುಮಾರ್ ಆರೋಪಿಸಿದರು.

ಗೀತಾ ಅವರ ಮಕ್ಕಳಿಗೆ ಆಶ್ರಯ ಇಲ್ಲದಾಗಿದ್ದು, ದೂರನ್ನು ವಾಪಸ್ಸು ಪಡೆಯುವಂತೆ ಪುತ್ರಿ ನಿಖಿತಾಗೆ ಜೀವ ಬೆದರಿಕೆಯ ಕರೆಗಳು ಬರುತ್ತಿವೆ. ಮಕ್ಕಳು ಆತಂಕದಲ್ಲಿದ್ದು, ಪೊಲೀಸರು ಸೂಕ್ತ ರಕ್ಷಣೆಯನ್ನು ನೀಡಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಲೆ ಮರೆಸಿಕೊಂಡವರ ಬಂಧನಕ್ಕೆ 1 ವಾರಗಳ ಕಾಲಾವಕಾಶವನ್ನು ಕೋರಿಕೊಂಡಿದ್ದು, ಬಂಧನವಾಗದಿದ್ದಲ್ಲಿ ಕಾನೂನಿನ ಹೋರಾಟ ಮತ್ತು ಸಂಘಟನೆಗಳ ಮೂಲಕ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಹಣ ಹಾಗೂ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಐವರು ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ಒತ್ತಾಯಿಸಿದರು.

ಪುತ್ರಿ ಚೋನೀರ ಜೆ.ನಿಖಿತ್ ಮಾತನಾಡಿ ನನ್ನ ತಂದೆ ಜೀತು ಅವರು ಪ್ರಕರಣದ ಕುರಿತು ನೀಡಿರುವ ಹೇಳಿಕೆಗಳು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು, ಇದು ಆಸ್ತಿಗಾಗಿ ನಡೆದ ಕೃತ್ಯವೆಂದು ಆರೋಪಿಸಿದರು. ತಾಯಿ ಗೀತಾ ಅವರ ಮೇಲೆ ಈ ಹಿಂದೆಯೂ ತಂದೆ ಜೀತು ಅವರು ಹಲ್ಲೆ ನಡೆಸಿದ್ದು, ಪ್ರೇಮ ವಿವಾಹದ ಕಾರಣ ತಂದೆಯ ಕುಟುಂಬಸ್ಥರು ತಾಯಿ ಗೀತಾ ಅವರನ್ನು ದೂರವೇ ಇಟ್ಟಿದ್ದರು. ತನ್ನ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ ಎಂದು ಸ್ಪಷ್ಟಪಡಿಸಿದ ನಿಖಿತ್ ತಪ್ಪು ಮಾಡದೇ ಇದ್ದಿದ್ದರೆ ನಾಲ್ವರು ಆರೋಪಿಗಳು ಯಾಕೆ ತಲೆಮರೆಸಿಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದರು. ಪೊಲೀಸರಿಂದ ನ್ಯಾಯ ಸಿಗದಿದ್ದಲ್ಲಿ ಸಂಘಟಿತ ಹೋರಾಟ ನಡೆಸುವುದಲ್ಲದೆ ಸುಪ್ರೀಂ ಕೋರ್ಟ್‌ಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.  ಸುದ್ದಿಗೋಷ್ಠಿಯಲ್ಲಿ ಗೀತಾ ಅವರ ಪುತ್ರ ಚೋನೀರ ಜೆ.ಅಂಕಿತ್, ಸಹೋದರಿ ಎನ್.ಯು.ವನಜಾಕ್ಷಿ ಹಾಗೂ ಅಣ್ಣನ ಮಗ ಮಾಣೀರ ಉಮೇಶ್ ಉಪಸ್ಥಿತರಿದ್ದರು.

PM-1

Cr-3

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *