ಕೊಡಗಿನಲ್ಲಿ ಕೈಲು ಮುಹೂರ್ತ ಹಬ್ಬದ ಸಂಭ್ರಮ

Posted on: September 3, 2015

ಮಡಿಕೇರಿ :

ಕೊಡಗಿನಲ್ಲಿ ಈಗ ಆಯುಧ ಪೂಜೆ ಸಂಭ್ರಮ. ಅಂದ್ರೆ ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲು ಮುಹೂರ್ತದ ಸಡಗರ. ಹಸಿರ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಹೇಳಿ ಕೇಳಿ ಕೃಷಿ ಪ್ರಧಾನ ಜಿಲ್ಲೆ. ಇದಕ್ಕೆ ಈ ಕೈಲು ಮುಹೂರ್ತ ಹಬ್ಬವೇ ಸಾಕ್ಷಿ. ಕೈಲ್ ಎಂದರೆ “ಆಯುಧ” ಪೊಳ್ದು ಎಂದರೆ “ಪೂಜೆ” ಎಂದು ಅರ್ಥ.

Kail

ಧಾರಾಕಾರ ಮಳೆಯ ನಡುವೆ ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆಯನ್ನು ಪೂರ್ಣಗೊಳಿಸಿರುವ ಜಿಲ್ಲೆಯ ರೈತರು ಆಯುಧಗಳಿಗೆ ಪೂಜೆ ಸಲ್ಲಿಸುವ ಕೈಲು ಮುಹೂರ್ತ ಹಬ್ಬದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೇಗಿಲು, ನೊಗ, ಕತ್ತಿ, ಕೋವಿ, ಗುದ್ದಲಿ ಸೇರಿದಂತೆ ನಿತ್ಯ ಬಳಕೆಯ ಆಯುಧ ಪರಿಕರಗಳನ್ನು ಮನೆಯಲ್ಲಿ ನಿಗದಿತ ಸ್ಥಳದಲ್ಲಿ ಜೋಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಪೂಜೆ ಸಲ್ಲಿಸಿ ಸಿಹಿ ತಿನಿಸು ನೀಡುತ್ತಾರೆ. ಕೊಡಗಿನ ಸಾಂಪ್ರದಾಯಿಕ ಆಯುಧವಾದ ಕೋವಿಯನ್ನು ಕಾಡಿನಲ್ಲಿ ಬೆಳೆಯುವ ವಿಶೇಷ ಗೌರಿ ಹೂವಿನಿಂದ ಅಲಂಕಾರ ಮಾಡಿ ಪೂಜಿಸುವುದು ಕೈಲು ಮುಹೂರ್ತ ಹಬ್ಬದ ವಿಶೇಷ.

ಆಯುಧ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಮಾಂಸಹಾರ ಊಟವನ್ನು ಸವಿದು ವಿವಿಧ ಆಟೋಟಗಳಲ್ಲಿ ಪಾಲ್ಗೊಳ್ಳುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಂದಿ ಮಾಂಸದ ಖಾದ್ಯಗಳಿಗೆ ಹೆಚ್ಚಿನ ಮಹತ್ವವಿರುವುದು ವಿಶೇಷ. ಗ್ರಾಮೀಣ ಕ್ರೀಡಾಕೂಟಕ್ಕೆ ಹೆಚ್ಚಿನ ಮಹತ್ವವಿದ್ದು, ಹಬ್ಬದಲ್ಲಿ ಪಾಲ್ಗೊಳ್ಳುವ ಮಂದಿ ಮಂದ್ಗಳಲ್ಲಿ ಮರಕ್ಕೆ ಕಟ್ಟಲಾದ ತೆಂಗಿನ ಕಾಯಿಗೆ ಗುಂಡು ಹೊಡೆದು ಸಂಭ್ರಮಿಸುತ್ತಾರೆ.

ಕೈಲು ಮುಹೂರ್ತ ಹಬ್ಬವನ್ನು ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟಂಬರ್ 2-3 ರಂದು ಆಚರಿಸಲಾಗುತ್ತದಾದರೂ ನಾಲ್ಕುನಾಡು, ಬಲ್ಲತ್ತನಾಡು, ಕಡಿಯತ್ತನಾಡು, ಮುಕ್ಕೋಡ್ಲು, ಮಕ್ಕಂದೂರು ಭಾಗದಲ್ಲಿ ಪ್ರತ್ಯೇಕ ದಿನಗಳಲ್ಲಿ ಆಚರಿಸಲಾಗುತ್ತದೆ. ಕೊಡಗು ಜಿಲ್ಲೆಯಿಂದ ಹೊರ ಭಾಗದಲ್ಲಿರುವ ಮೂಲ ನಿವಾಸಿಗಳು “ಕೈಲು ಮುಹೂರ್ತ” ಹಬ್ಬದಂದು ತಮ್ಮ ತಮ್ಮ ಊರುಗಳಿಗೆ ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ.

Kail-7 Kail-6 Kail-5

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *