ಮಡಿಕೇರಿಯಲ್ಲಿ ಗಾಂಧೀಜಿ ಪ್ರಭಾವ

Posted on: October 2, 2015

G-3ಗಾಂಧೀಜಿ ಬಂದಾಗ ಕೊಡಗಿನ ಗೌರಮ್ಮ ನಡೆಸಿದ ಉಪವಾಸ ಅತ್ಯಂತ ಪ್ರಮುಖ ಘಟನೆ. ಆಗ ಗೌರಮ್ಮ ಇನ್ನೂ 21ರ ಯುವತಿ. ಸುಂಟಿಕೊಪ್ಪ ಬಳಿಯ ಗುಂಡುಗುಟ್ಟಿಯ ಎಸ್ಟೇಟ್‌ನಲ್ಲಿ ಅವರ ಪತಿ ಬಿ.ಟಿ ಗೋಪಾಲಕೃಷ್ಣ ರೈಟರ್ ಆಗಿದ್ದರು. ಆ ಎಸ್ಟೇಟ್ ಮಾಲಿಕ ಮಂಜುನಾಥಯ್ಯ ಅವರ ಮನೆಗೆ ಗಾಂಧೀಜಿ ಬಂದು ಉಳಿದಿದ್ದರು. ಭೂಕಂಪ ನಿಧಿ ಸಂಗ್ರಹಕ್ಕೆ ಬಂದಿದ್ದ ಬಾಪೂಜಿ ಶ್ರೀಮಂತರ ಮನೆಯಲ್ಲಿ ಉಳಿದು ಕೊಂಡಿದ್ದು ಗೌರಮ್ಮನಲ್ಲಿ ತಳಮಳ ಉಂಟು ಮಾಡಿತು. ಗಾಂಧೀಜಿ ತಮ್ಮ ಮನೆಗೂ ಬರಬೇಕು ಎಂದು ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ವಿಷಯ ತಿಳಿದ ಗಾಂಧಿಜಿ ತುಂಬಾ ನೊಂದುಕೊಂಡು ಗೌರಮ್ಮನ ಮನೆಗೂ ಬಂದರು. ತಮ್ಮ ಕೈಯ್ಯಾರೆ ಕಿತ್ತಳೆ ಹಣ್ಣು ತಿನ್ನಿಸಿ ಗೌರಮ್ಮನ ಉಪವಾಸ ಅಂತ್ಯಗೊಳಿಸಿದರು.

ಗಾಂಧೀ ಪ್ರಭಾವಕ್ಕೆ ಒಳಗಾಗಿದ್ದ ಗೌರಮ್ಮ ಖಾದಿಧಾರಿಯಾಗಿದ್ದರು. ಗಾಂಧೀಜಿ ತಮ್ಮ ಮನೆಗೆ ಬಂದಾಗ ಮಾಂಗಲ್ಯ ಬಿಟ್ಟು ಉಳಿದ ಎಲ್ಲ ಆಭರಣಗಳನ್ನೂ ಗಾಂಧೀಜಿಗೆ ಸಮರ್ಪಿಸಿದರು. ಜೊತೆಗೆ ಜೀವನದಲ್ಲಿ ಇನ್ನೆಂದು ಆಭರಣಗಳನ್ನು ಮಾಡಿಸಿಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿದರು ನಂತರ ಅದೇ ರೀತಿ ನಡೆದುಕೊಂಡರು. ಆಭರಣವನ್ನು ತಮಗೆ ಕೊಡಲು ಬಂದ ಗೌರಮ್ಮನನ್ನು ‘ಹೀಗೆ ಆಭರಣ ಕೊಡಬೇಕು ಎನ್ನುವುದು ಸ್ವಬುದ್ಧಿಯೋ ಹೇಗೆ’ ಎಂದು ಗಾಂಧೀಜಿ ಪ್ರಶ್ನಿಸಿದರು.

G-4‘ಆಕೆಯ ಸ್ವಬುದ್ಧಿಯಿಂದಲೇ ಒಡವೆ ಕೊಡಲು ಮುಂದೆ ಬಂದಿದ್ದಾಳೆ. ನಾನೂ ಹ್ಞೂಂ ಅಂದೆ’ ಎಂದು ಆಕೆಯ ಪತಿ ಹೀಳಿದರು. ‘ಸರಳವಾದ ಮಿತ ಜೀವನ ಎಂದಿಗೂ ಒಳ್ಳೆಯದು’ ಎಂದು ಗಾಂಧೀಜಿ. ಗೌರಮ್ಮನ ಮನೆಯಿಂದ ಹೊರಕ್ಕೆ ಹೋಗುವಾಗ ಗಾಂಧೀಜಿಯೂ ಕಣ್ಣು, ಹೃದಯ ತುಂಬಿಕೊಂಡಿದ್ದರು. ಗೌರಮ್ಮಳಿಗೆ ದುಃಖ ತಡೆಯಲಾಗಲಿಲ್ಲ. ಈ ಸನ್ನಿವೇಶವನ್ನು ಗಾಂಧೀಜಿ 1934 ರ ಮಾರ್ಚ್2ರ ‘ಹರಿಜನ’ ಸಂಚಿಕೆಯಲ್ಲಿ ವರ್ಣಿಸಿದ್ದಾರೆ. ಕನ್ನಡದ ಪ್ರತಿಬಾವಂತ ಕತೆಗಾರ್ತಿಯೂ ಆಗಿದ್ದ ಕೊಡಗಿನ ಗೌರಮ್ಮ ಗಾಂಧೀಜಿ ಗುಂಡುಗುಟ್ಟಿಗೆ ಬಂದಾಗ ಬಳಸಿದ್ದ ‘ಮೈಸೂರು ಸ್ಯಾಂಡಲ್ ಸೋಪ್’ ಅನ್ನು ತಮ್ಮ ಜೀವಿತದ ಕೊನೆಯ ಘಳಿಗೆವರೆಗೂ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅದು ಈಗಲೂ ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಸಂಗ್ರಹಲಾಯದಲ್ಲಿದೆ. ಗಾಂಧೀಜಿ ಗುಂಡುಗುಟ್ಟಿಗೆ ಬಂದಿದ್ದಾಗ ಕನ್ನಡದಲ್ಲಿ ಮೋ. ಕ. ಗಾಂಧಿ ಎಂದೇ ಸಹಿ ಮಾಡುತ್ತಿದ್ದರು. ನೂರಾರು ಜನರು ಅವರಿಂದ ಸಹಿ ಪಡೆದುಕೊಂಡರು. ಇದನ್ನು ಕಂಡು ಮಂಜುನಾಥಯ್ಯ ಅವರು ತಮ್ಮ ಹಿರಿಯ ಮಗ ಮೋಹನನ ಹೆಸರನ್ನು ‘ಮೋಕ’ ಎಂದೇ ಬದಲಾಯಿಸಿಬಿಟ್ಟರು.

ರಾಜ್ಯದ ಬಹುತೇಕ ಎಲ್ಲ ನಗರ ಪಟ್ಟಣಗಳಲ್ಲಿ ಗಾಂಧಿ ಮೈದಾನ, ಗಾಂಧಿ ರಸ್ತೆ, ಗಾಂದಿ ಪ್ರತಿಮೆ ಇರುವುದು ಮಾಮೂಲು. ಆದರೆ ಪೊನ್ನಂಪೇಟೆಯಲ್ಲಿ ಗಾಂಧಿ ಗದ್ದೆ ಇದೆ. 1934 ರ ಜನವರಿ 14 ರಂದು ಗಾಂಧೀಜಿಪೊನ್ನಂಪೇಟೆ ರಾಮಕೃಷ್ಣಾಶ್ರಮದಲ್ಲಿ ತಂಗಿದ್ದರು. ಅಲ್ಲಿಂದ ಅವರು ಹುದಿಕೇರಿಗೂ ಹೋಗಿದ್ದರು . ಪೊನ್ನಂಪೇಟೆಯಲ್ಲಿ ಗದ್ದೆ ದಂಡೆಯ ಮೇಲೆ ನಿಂತು ಭಾಷಣ ಮಾಡಿದ್ದರು. ಆ ಕಾರಣಕ್ಕಾಗಿ ಈ ಗದ್ದೆಯನ್ನು ಈಗಲೂ ಗಾಂಧಿ ಗದ್ದೆ ಎಂದು ಕರೆಯುತ್ತಾರೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚಪ್ಪುಡೀರ ಎಂ. ಪೊನ್ನಪ್ಪ ಅವರ ಸ್ವಾಧೀನದಲ್ಲಿರುವ ಈ ಗದ್ದೆಯಲ್ಲಿ ಬಹುತೇಕ ವರ್ಷಗಳ ಕಾಲ ಆಗಸ್ಟ್ 15 ರಂದೇ ಗದ್ದೆ ನಾಟಿ ಮಾಡಲಾಗುತ್ತಿತ್ತು. ಅಂದು ನಾಟಿ ಮಾಡಿದ ಎಲ್ಲ ಕೆಲಸಗಾರರಿಗೂ ಸಿಹಿ ಹಂಚಲಾಗುತ್ತಿತ್ತು.

ಪೊನ್ನಂಪೇಟೆ ರಾಮಕೃಷ್ಣಶ್ರಾಮದಲ್ಲಿ ಇಳಿದಿದ್ದ ಗಾಂಧೀಜಿ ಮತ್ತು ಅವರ ಪರಿವಾರವನ್ನು ನೋಡಿಕೊಂಡಿದ್ದ ಶಾಂಭವಿ ಅಪ್ಪಣಮ್ಮಯ್ಯ ಅವರನ್ನು ತಮ್ಮ ಕಾರಿನಲ್ಲಿಯೇ ಕುಳ್ಳಿರಿಸಿಕೊಂಡು ಗಾಂಧೀಜಿ ಹುದಿಕೇರಿ ಸಭೆಗೆ ಕರೆದುಕೊಂಡು ಹೋಗಿದ್ದರು. ಗಾಂಧಿ ಪ್ರಭಾವಕ್ಕೆ ಒಳಗಾಗಿದ್ದ ಮಲ್ಲೆಂಗಡ ಪಿ. ಚೆಂಗಪ್ಪ ಅವರ ಕತೆ ಇನ್ನೂ ಕುತೂಹಲಕಾರಿ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ವಿರಾಜಪೇಟೆ ಸುಬೇದಾರ್ ಕೋರ್ಟ್‌ನಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಯಿತು. ನ್ಯಾಯಾಧೀಶರು ಶಿಕ್ಷೆ ವಿಧಿಸಿದ ತಕ್ಷಣ ಕಟಕಟೆಯಿಂದ ಚಂಗನೆ ಹಾರಿದ ಚೆಂಗಪ್ಪ ನ್ಯಾಯಾಧೀಶರನ್ನು ನ್ಯಾಯಾಧೀಶರ ಪೀಠದಿಂದ ಇಳಿಸಿ ತಾವು ಪೀಠದ ಮೇಲೆ ಕುಳಿತು ‘ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದೇಶಪ್ರೇಮಿಗಳಿಗೆ ಅಪಮಾನ ಮಾಡಿದ್ದಕ್ಕಾಗಿ ನ್ಯಾಯಾಧೀಶರಿಗೆ 7 ವರ್ಷ ಕಠಿಣ ಸಜೆ ಮತ್ತು 600 ರೂಪಾಯಿ ದಂಡ ವಿಧಿಸಲಾಗಿದೆ’ ಅಂದು ತೀರ್ಪು ನೀಡಿದ್ದರು. ಈ ಅಪರಾಧಕ್ಕಾಗಿ ಚೆಂಗಪ್ಪ ಅವರಿಗೆ ಮತ್ತಷ್ಟು ಶಿಕ್ಷೆಯಾಯ್ತು. ಆದರೆ ಸ್ವಾತಂತ್ರ್ಯ ಹೋರಾಟದ ಅವರ ಕಿಚ್ಚು ಆರಲಿಲ್ಲ. ಅದು ಗಾಂಧೀಜಿ ಪ್ರಭಾವ.

G-1 G-2 G-5

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *