ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಕೊಡಗಿನ ಸಂಭ್ರಮದ ಸುಗ್ಗಿ ಹಬ್ಬ ಹುತ್ತರಿ

Posted on: November 26, 2015

ಕೊಡಗಿನಲ್ಲಿ ಈಗ ಬೆಳದಿಂಗಳಿನ ಹಬ್ಬ ಪುತ್ತರಿಯ ಸಂಭ್ರಮ. ಕೊಡವರ ನಾಡಿನಲ್ಲಿ ಪ್ರತಿ ವರ್ಷ ಪುತ್ತರಿಯಂದು ಹರಡುವ ಬೆಳದಿಂಗಳಿಗೆ ವಿಶೇಷ ಸಡಗರವಿದೆ. ಕೊಡಗಿನ ಕೃಷಿಕರ ಪಾಲಿಗೆ ಪುತ್ತರಿಯೆಂಬುದು ಸುಗ್ಗಿ ಹಬ್ಬ, ಹಿಗ್ಗಿನ ಹಬ್ಬ. ತಾವು ಬೆವರು ಸುರಿಸಿ ಶ್ರಮದಿಂದ ಹೊಲದಲ್ಲಿ ಬೆಳೆದ ಭತ್ತದ ಪೈರನ್ನು ಭೂದೇವಿಗೆ ಪೂಜೆ ಸಲ್ಲಿಸಿ ಹೊಲದಿಂದ ಮನೆಗೆ ಸಾಂಪ್ರದಾಯಿಕವಾಗಿ ತರುವ ಹಬ್ಬವೇ ಪುತ್ತರಿ. ಕೊಡವ ಭಾಷೆಯಲ್ಲಿ ಪುದಿಯ ಎಂದರೆ ಹೊಸ ಮತ್ತು ಅರಿ ಎಂದರೆ ಅಕ್ಕಿ ಎಂಬ ಅರ್ಥವಿದೆ. ಪುದಿಯ ಅರಿ-ಹೊಸ ಅಕ್ಕಿ ಎಂಬುದೇ ಪುತ್ತರಿಯಾಗಿದ್ದು, ಕೊಡಗಿನ ಪ್ರತೀ ಹೊಲದಲ್ಲೂ ಪುತ್ತರಿ ಹಬ್ಬದಂದು ಪೂಜೆ ನಡೆಯುತ್ತದೆ. ಕುಟುಂಬಸ್ಥರೆಲ್ಲ ಸೇರಿ ಪುತ್ತರಿಯ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಹಬ್ಬದೂಟ ಸೇವಿಸುತ್ತಾರೆ. ಕೊಡಗಿನಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಬಿಟ್ಟರೆ ಮೂರನೇ ಪ್ರಮುಖ ಹಬ್ಬವೇ ಪುತ್ತರಿ.

5

ಕೊಡಗಿನವರು ದೇಶ-ವಿದೇಶ ಎಲ್ಲೇ ನೆಲೆಸಿರಲಿ ತವರಿನ ಪ್ರಮುಖ ಸುಗ್ಗಿ ಹಬ್ಬ ಪುತ್ತರಿ ಬಂತೆಂದರೆ ಬಹುತೇಕ ಕೊಡಗಿನ ಜನರು ಹಬ್ಬದ ಸಡಗರದೊಂದಿಗೆ ಕೊಡಗಿಗೆ ಧಾವಿಸುತ್ತಾರೆ. ಅನಿವಾರ್ಯವಾಗಿ ಊರಿಗೆ ಬರಲಾಗದವರು, ತವಿರುವ ಸ್ಥಳದಲ್ಲಿಯೇ ಕುಲದೇವಿ ಕಾವೇರಿ, ಮಳೆದೈವ ಇಗುತ್ತಪ್ಪನಿಗೆ ಪೂಜೆ ಸಲ್ಲಿಸಿ ಪುತ್ತರಿ ಆಚರಿಸುವುದಿದೆ. ಮನೆಯನ್ನು ಶುಚಿಗೊಳಿಸುವುದರಿಂದ ಪುತ್ತರಿ ಹಬ್ಬದ ತಯಾರಿ ಆರಂಭವಾಗುತ್ತದೆ. ಇಡೀ ಮನೆಯ ಕಸತೆಗೆದು, ಸುಣ್ಣ ಬಣ್ಣ ಬಳಿದು, ಮನೆಯನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲ ಮನೆಯ ಅಂಗಳಕ್ಕೆ ಸಗಣಿ ಸಾರಿಸಿ ಶುಚಿಗೊಳಿಸಲಾಗುತ್ತದೆ. ಮನೆಯಿಂದ ಗದ್ದೆಗೆ ತೆರಳುವ ಹದಿಯನ್ನು ಶುಚಿಯಾಗಿಸಿ, ದಾರಿಯ ಎರಡೂ ಬದಿಗಳಿಗೆ ಬಾಳೆ ಕಂಬ ನೆಟ್ಟು, ಮಾವಿನ ತೋರಣದಿಂದ ಶೃಂಗರಿಸಲಾಗುತ್ತದೆ. ಮನೆಯ ಗೃಹಿಣಿಯರು ಪುತ್ತರಿಯ ವಿಶೇಷ ತಿನಿಸಾದ ತಂಬಿಟ್ಟು ಉಂಡೆ ತಯಾರಿಕೆಗೆ ಸಿದ್ಧತೆ ನಡೆಸುತ್ತಾರೆ. ಕುಸಲಕ್ಕಿಯನ್ನು ಹುರಿದು ಪುಡಿ ಮಾಡಿ, ಬಾಳೆಹಣ್ಣನ್ನು ಸಂಗ್ರಹಿಸಿ, ತಂಬಿಟ್ಟು ತನಿಸಿಗಾಗಿ ಮನೆಮಂದಿ ಕಾತುರದಿಂದ ಕಾಯುವಂತೆ ಮಾಡುತ್ತಾರೆ. ಅಂತೆಯೇ ಚಳಿಗಾಲದಲ್ಲಿ ದೊರಕುವ ಗೆಣಸನ್ನು ಬೇಕಾದಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗುತ್ತದೆ. ತಂಬಿಟ್ಟು, ಪುತ್ತರಿಗೆಣಸು ಹಬ್ಬದ ವಿಶೇಷ ಖಾದ್ಯಗಳು.

4

ಪುತ್ತರಿಯ ದಿನ ಸಂಜೆ ಸೂರ್ಯಾಸ್ತಮಾನಾವಾಗಿ ಬೆಳದಿಂಗಳು ಚೆಲ್ಲುತ್ತಿರುವಂತೆಯೇ, ಕುಟುಂಬದ ಯಜಮಾನ ಸರ್ವಸದಸ್ಯರೊಂದಿಗೆ ಮನೆಯಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾರೆ ಹೊಲದಲ್ಲಿ ಕದಿರು ತೆಗೆಯಲು ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸೂಕ್ತ ನಿಮಿಷದ ಮುಹೂರ್ತ ನಿಗದಿಯಾಗಿರುತ್ತದೆ. ಆ ಮುಹೂರ್ತಕ್ಕೆ ಸರಿಯಾಗಿ ಮನೆಮಂದಿಯೆಲ್ಲ, ಸಂಭ್ರಮದಿಂದ ಪಟಾಕಿ ಸಿಡಿಸುತ್ತಾ ಮನೆಯಿಂದ ಹೊಲಕ್ಕೆ ತೆರಳುತ್ತಾರೆ. ಹೊಲದಲ್ಲಿ ಬೆಳೆದು ನಿಂತ ಭತ್ತದ ಪೈರಿನ ಬುಡಕ್ಕೆ ಹಾಲು ಸುರಿದು, ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಒಲಿದು ಬಾ ಬಾರೋ ದೇವಾ ಎಂಬರ್ಥ ಹೊಂದಿರುವ ಪೊಲಿ ಪೊಲಿಯೇ ದೇವಾ ಬಾ ಎಂಬ ಉದ್ಘೋಷ ಎಲ್ಲರಿಂದಲೂ ಕೇಳಿ ಬರುತ್ತಿರುವಂತೆಯೇ, ಕುಟುಂಬದ ಹಿರಿಯರು, ಪೈರಿಗೆ ನಮಿಸಿ, ಅದನ್ನು ಕೊಯ್ಯುತ್ತಾರೆ. ಈ ಸಂದರ್ಭ ಮೂರು ಬಾರಿ ಆಕಾಶಕ್ಕೆ ಗುಂಡು ಹಾರಿಸಲಾಗುತ್ತದೆ.

ನಮ್ಮ ಗದ್ದೆಗಳಲ್ಲಿ ಫಸಲಿನ ಸಂಪತ್ತು ಸದಾ ಅಕ್ಷಯವಾಗಿರಲಿ ಎಂದು ಪಾರ್ಥಿಸುತ್ತಾ, ಕುಟುಂಬಸ್ಥರು, ಬಂಧು-ಮಿತ್ರರೊಂದಿಗೆ ಮನೆಗೆ ಮರಳುತ್ತಾರೆ. ಈ ರೀತಿ ಹೊಲದಲ್ಲಿ ಕದಿರು ತೆಗೆಯುವಾಗ, ಮೆರವಣಿಗೆಯಲ್ಲಿ ಬರುವಾಗ ಯುವಕರು ಪಟಾಕಿಗಳ ಸರಮಾಲೆಯನ್ನೇ ಸಿಡಿಸುತ್ತಾರೆ. ಪ್ರತೀ ಗ್ರಾಮದ ಗದ್ದೆಗಳಲ್ಲಿ ಏಕಕಾಲದಲ್ಲಿ ಕದಿರು ಕೊಯ್ಯುವುದರಿಂದ ಪುತ್ತರಿ ರಾತ್ರಿಯಲ್ಲಿ ಕೊಡಗಿನ ಎಲ್ಲೆಲ್ಲೊ ಪಟಾಕಿಗಳ ಸದ್ದು ಮಾರ್ದನಿಸುತ್ತದೆ.

ಮನೆಗೆ, ಬೆಳದಿಂಗಳ ಬೆಳಕಿನಲ್ಲಿ ದೀಪ ಹಿಡಿದ ಬಾಲೆಯರ ಮುಂಚೂಣಿಯಲ್ಲಿ ಬರುವ ಮನೆ ಮಂದಿ ದೇವರ ಕೋಣೆಯಲ್ಲಿ ಹೊಲದಿಂದ ತಂದ ಭತ್ತದ ಪೈರನ್ನು ಇಟ್ಟು ಪೂಜೆಸಲ್ಲಿಸುವರು. ನಂತರ ತಂಬಿಟ್ಟು ಪ್ರಸಾದ ಸೇವನೆ. ಪುತ್ತರಿ ಹಬ್ಬಕ್ಕೆ ಸಂಪೂರ್ಣ ಸಸ್ಯಾಹಾರದ ಭೋಜನವಿರುತ್ತದೆ. ರಸದೌತಣದ ಬಳಿಕ ಮನೆ ಮುಂದೆ ಒಟ್ಟು ಸೇರುವ ಬಂಧು-ಮಿತ್ರರು, ಉಭಯಕುಶಲೋಪರಿ ಮಾತುಕತೆ ನಡೆಸುತ್ತಾರೆ. ಮತ್ತೆ, ಪಟಾಕಿಗಳ ಸಿಡಿಸುವಿಕೆಯೊಂದಿಗೆ ಹಿರಿಯ-ಕಿರಿಯರು ಪುತ್ತರಿಗೆ ಮತ್ತಷ್ಟು ಸಂತಸ ತಂದುಕೊಳ್ಳುತ್ತಾರೆ.

ಮಧ್ಯ ರಾತ್ರಿ ಸಮೀಪಿಸುತ್ತಿರುವಂತೆಯೇ ಬೆಳದಿಂಗಳ ಹಾಟ್ ಬೆಳಕಿನಲ್ಲಿ ಸಾಂಪ್ರದಾಯಿಕ ವಾದ್ಯದ ಶಬ್ದಕ್ಕೆ ತಕ್ಕಂತೆ ಪುರುಷರು-ಮಹಿಳೆಯರು ಮಕ್ಕಳು ಒಟ್ಟಾಗಿ ಸಾಮೂಹಿಕ ನರ್ತನ ಮಾಡುತ್ತಾರೆ. ಈ ರಾತ್ರಿಯ ಸಂಭ್ರಮ-ಕುಟುಂಬದ ಮಿಲನ ಜೀವನದುದ್ದಕ್ಕೂ ಹೀಗೆಯೇ ಮುಂದುವರೆಯಲಿ ಎಂಬ ಮನದ ಪ್ರಾರ್ಥನೆಗೆ ಬಾನಿನಲ್ಲಿ ಮಿನುಗುತ್ತಿರುವ ಚಂದಿರನೇ ಸಾಕ್ಷಿಯಾಗುತ್ತಾನೆ!

ಪುತ್ತರಿ ಹಬ್ಬ ಮುಗಿದರೂ ಅದರ ಸಂಭ್ರಮ ಮತ್ತೂ ಒಂದು ವಾರದ ಕಾಲದ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹಳ್ಳಿಗಳಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಪುತ್ತರಿ ಕೋಲಾಟ ವಿಶೇಷ ರೀತಿಯಲ್ಲಿ ನಡೆಯುತ್ತದೆ. ಸಮರ ನೃತ್ಯ ಪರೆಯಕಳಿ, ಬೊಳಕಾಟ್, ಕಪ್ಪೆಯಾಟ್ ಸೇರಿದಂತೆ ಕೋಡವರ ಹತ್ತಾರು ಜನಪದ ಕಲೆಗಳ ಪ್ರದರ್ಶನದಲ್ಲಿ ಹಳ್ಳಿಗರು ಪಾಲ್ಗೊಳ್ಳುತ್ತಾರೆ. ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸಿ ಹಬ್ಬದಲ್ಲಿ ಪಾಲ್ಗೊಂಳ್ಳುವ ಕೊಡವರು, ಈ ರೀತಿ ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನದೊಂದಿಗೆ ಭವಿಷ್ಯದ ತಲೆಮಾರಿಗೂ ಈ ವಿಶೇಷ ನೃತ್ಯ ಪ್ರಕಾರಗಳನ್ನು ಪರಿಚಯಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಹೊಲ-ಗದ್ದೆಗಳು ಕಡಿಮೆಯಾಗುತ್ತಿದೆ. ತವರಿಗೆ ಪುತ್ತರಿಗೆ ಬರುವುದು ಸಂಪ್ರದಾಯ ಎಂಬ ನಂಬಿಕೆಯೂ ಕಡಿಮೆಯಾಗುತ್ತದೆ. ಸಗಣಿಯ ನೆಲದ ಬದಲಿಗೆ ಮನೆ ಮುಂದೆ ಸಿಮೆಂಟ್ ನೆಲ ಕಂಡಿದೆ. ಅವಿಭಕ್ತ ಕುಟುಂಬದವರಲ್ಲಿ ಒಟ್ಟಾಗಿ ಸೇರಿ ಆಚರಿಸುತ್ತಿದ್ದ ಪುತ್ತರಿಯ ಸಾಮೂಹಿಕ ಸಂಭ್ರಮಕ್ಕೆ ಈ ಮೊದಲಿನ ನೆಲದ ಬದಲಿಗೆ ಮನೆ ಮುಂದೆ ಸಿಮೆಂಟ್ ನೆಲ ಕಂಡಿದೆ. ಅವಿಭಕ್ತ ಕುಟುಂಬದವರಲ್ಲಿ ಒಟ್ಟಾಗಿ ಸೇರಿ ಆಚರಿಸುತ್ತಿದ್ದ ಪುತ್ತರಿಯ ಸಾಮೂಹಿಕ ಸಂಭ್ರಮಕ್ಕೆ ಈ ಮೊದಲಿನ ಕಳೆ ಇಲ್ಲ ಎಂದು ಹಿರಿಯರು ಗೊಣಗುವುದಿದೆ. ಇದೆಲ್ಲದರ ನಡುವೆಯೂ ಕೊಡಗಿನ ಪ್ರಮುಖ ಹಬ್ಬವಾಗಿ ಆಚರಿಸಲ್ಪಟುವ ಪುತ್ತರಿಯ ವಿಶಿಷ್ಟತೆಯಿಂದಾಗಿಯೇ ಕೊಡಗಿನ ಜನತೆ ಪುತ್ತರಿ ಬಪ್ಪಕ ಬಣ್ಣತೆ ಬಾತ್. . ಪುತ್ತರಿ ಪೋಪಕ ಎಣ್ಣತೆ ಪೋಯಿತ್. . ದಮ್ಮಯ್ಯ ಪುತ್ತರಿ ನೀ ಒಮ್ಮಲು ಪೋವತೆ ಎಂದು ಹಾಡುತ್ತಾರೆ. ಇದರ ಅರ್ಥ ಪುತ್ತರಿ ನೀ ಬರುವಾಗ ಬಣ್ಣದ ಸಡಗರದ ರಂಗಿನೊಂದಿಗೆ ಬರುತ್ತಿಯ. . . ಆದರೆ ನೀ ಹೋಗುವಾಗ ಹೇಳದೇ ಹೋಗುತ್ತೀಯ. . . ದಮ್ಮಯ್ಯ ಪುತ್ತರಿಯೇ. . . ನೀನು ಒಮ್ಮೆಗೆ ಸಂಭ್ರಮದೊಂದಿಗೆ ಹೋಗದಿರು! ಪುತ್ತರಿ ಕೊಡಗಿನ ಬೆಳದಿಂಗಳ ಹಬ್ಬವಾಗಿ ವರ್ಷಕ್ಕೊಮೆ ಬರಬಹುದು. ಆದರೆ, ಇದು ತರುವ ಸಂಭ್ರಮ, ಕೊಡಗಿನ ಜನತೆಯ ಮನದಲ್ಲಿ ವರುಷವಿಡೀ ನೆಲೆ ನಿಂತಿರುತ್ತದೆ.

3 2 1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *