ಟಿಪ್ಪು ದಿನಾಚರಣೆ :ಎಸ್‌ಪಿ ವರ್ಗಾವಣೆಗೆ ವಿರೋಧ

Posted on: January 6, 2016

ಮಡಿಕೇರಿ:
ಟಿಪ್ಪು ದಿನಾಚರಣೆಯ ಸಂದರ್ಭ ಹಸಿದ ಹೆಬ್ಬುಲಿಯಂತೆ ಕೈಯಲ್ಲಿ ಲಾಠಿ ಹಿಡಿದು ಭದ್ರತೆಯ ನೇತೃತ್ವ ವಹಿಸಿದ್ದ ಕೊಡಗು ಎಸ್‌ಪಿ ವರ್ತಿಕಾ ಕಟಿಯಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ವಿರೋಧದ ಧ್ವನಿ ಎದ್ದಿದೆ. ರಾಜ್ಯ ಸರ್ಕಾರದ ಕ್ರಮವನ್ನು ಕೆಲ ಸಂಘ ಸಂಸ್ಥೆಗಳು ಖಂಡಿಸಿವೆ.

DSC_0109k
ನವಂಬರ್ ೧೦ರಂದು ಕರ್ನಾಟಕ ಸರ್ಕಾರ ಆಚರಣೆ ಮಾಡಿದ ಟಿಪ್ಪು ಜಯಂತಿ ಕೊಡಗಿನಲ್ಲಿ ಅಶಾಮತಿಯ ವಾತಾವರಣ ನಿರ್ಮಾಣ ಮಾಡಿದ್ದು ಎಲ್ಲರ ಮನಸಿನಲ್ಲಿಯೂ ಇದೆ. ಈ ಸಂದರ್ಭ ಜಿಲ್ಲೆಯ ಪ್ರಥಮ ಪ್ರಜೆ ಜಿಲ್ಲಾಧಿಕಾರಿಗಳು ವೈಯಕ್ತಿಕ ರಜೆಯ ಮೇಲೆ ತೆರಳಿದ್ದರು. ಜಿಲ್ಲೆಯ ಜವಬ್ದಾರಿಯನ್ನು ಆಗ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಕೂರ್ಮಾರಾವ್ ಅವರಿಗೆ ನೀಡಲಾಗಿತ್ತು….
ಅದೇ ಸಮಯದಲ್ಲಿ ಪೊಲೀಸ್ ಇಲಾಖೆಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕೊಡಗು ಪೊಲೀಸ್ ವರಿಷ್ಟಾಧಿಕಾರಿ ವರ್ತಿಕಾ ಕಟಿಯಾರ್ ಕೂಡಾ ದೆಹಲಿಗೆ ತೆರಳಿದ್ದರು. ಆದರೆ ಇಲಾಖೆಯ ಗುಪ್ತಚರ ವಿಭಾಗದಿಂದ ಜಿಲ್ಲೆಯಲ್ಲಿನ ಸೂಕ್ಷ್ಮ ಪರಿಸ್ಥಿತಿಯ ಮಾಹಿತಿ ತಿಳಿದ ವರ್ತಿಕಾ ಕಟಿಯಾರ್ ಕ್ರೀಡಾಕೂಟವನ್ನೂ ಬಿಟ್ಟು ದೆಹಲಿಯಿಂದ ಹಗಲು ರಾತ್ರಿ ಪ್ರಯಾಣ ಮಾಡಿ ನವಂಬರ್ ೯ರಂದು ಮಡಿಕೇರಿಗೆ ಬಂದರು. ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಭದ್ರತೆಯ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಂಡರು.
ಈ ಮೂಲಕ ಹಸಿದ ಹೆಬ್ಬುಲಿಯಂತೆ ಸಾವಿರಾರು ಮಂದಿ ಉದ್ರಿಕ್ತ ಪ್ರತಿಭಟನಾಕಾರರ ಮದ್ಯೆ ಲಾಠಿ ಹಿಡಿದು ನಿಂತು ಮನವೊಲಿಸುವ ಯತ್ನ ಮಾಡಿದ್ದರು. ಅವರ ಖಡಕ್ ಮಾತಿನಿಂದ ನಿಜಕ್ಕೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದರಲ್ಲಿತ್ತು. ಅಷ್ಟೇ ಅಲ್ಲಾ ಸಮಾರಂಭ ನಡೆಯುತ್ತಿದ್ದ ಸಭಾಂಗಣಕ್ಕೂ ತೆರಳಿದ ವರ್ತಿಕಾ ಕಟಿಯಾರ್ ಅಭಯ ನೀಡಿದ್ದರು…ಮತ್ತೆ ಹೊರಗೆ ಬಂದು ಪ್ರತಿಭಟನಾಕಾರರ ಮನವೊಲಿಸುವ ಸಂದರ್ಭ ಮೈಸೂರು ದಕ್ಷಿಣ ವಲಯ ಐಜಿ ಬಿ.ಕೆ.ಸಿಂಗ್ ಲಾಠಿ ಪ್ರಹಾರಕ್ಕೆ ಆದೇಶ ನೀಡಿದ್ದರು. ಪರಿಣಾಮ ಲಾಠಿ ಪ್ರಹಾರ ನಡೆದು ಹಲವರು ಗಾಯಗೊಂಡರು… ಲಾಠಿ ಪ್ರಹಾರ ಮಾಡದಂತೆ ಕೊಡಗು ಎಸ್‌ಪಿ ವರ್ತಿಕಾ ಕಟಿಯಾರ್ ಅಧಿಕಾರಿಗಳಿಗೆ ಮತ್ತೆ ಆದೇಶ ನೀಡಿ ಸೆಕ್ಷನ್ ಜಾರಿಗೆ ತಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಓರ್ವ ಹೆಣ್ಣು ಮಗಳಾಗಿ ಕಾನೂನಿನ ಚೌಕಟ್ಟಿನಲ್ಲೂ ಮಾನವೀಯತೆ ಮೆರೆದು ಪರಿಸ್ಥಿತಿಯನ್ನು ನಿಯಂತ್ರಿಸಿದ ವರ್ತಿಕಾ ಕಟಿಯಾರ್ ಅವರ ಕಾರ್ಯಕ್ಕೆ ಜಿಲ್ಲೆಯ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವರ್ತಿಕಾ ಕಟಿಯಾರ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು… ಅಷ್ಟೇ ವೇಗವಾಗಿ ಅಂದು ನಡೆದ ಘಟನೆಯ ಸಾವು ನೋವಿಗೆ ಕಾರಣವಾದವರ ಹೆಡೆಮುರಿಕಟ್ಟಲು ಜಿಲ್ಲೆಯ ಪೊಲೀಸರು ವರ್ತಿಕಾ ಕಟಿಯಾರ್ ನೇತೃತ್ವದಲ್ಲಿ ಹಗಲು ರಾತ್ರಿ ಕಾರ್ಯ ಮಾಡಿದ್ದರು….ಆರೋಪಿಗಳನ್ನೂ ಬಂಧಿಸಿದ್ದರು.
ಇದರ ನಡುವೆ ರಾಜ್ಯ ಸರ್ಕಾರ ಕೊಡಗಿನ ಜನತೆಗೆ ಶಾಕ್ ನೀಡಿದೆ….!!?
ಕೊಡಗಿನ ಹೆಮ್ಮೆಯ ಖಡಕ್ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ರಾಜ್ಯ ಸರ್ಕಾರ ವರ್ಗ ಮಾಡಿ ಆದೇಶ ಹೊರಡಿಸಿದೆ. ಟಿಪ್ಪು ಜಯಂತಿಯಂದು ನಡೆದ ಘಟನೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ, ಹಾಗೂ ರಜೆಯ ಮೇಲೆ ವರ್ತಿಕಾ ಕಟಿಯಾರ್ ತೆರಳಿದ್ದಾರೆ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಜನವರಿ ೧ರಂದು ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ…
ಎಸ್‌ಪಿ ವರ್ತಿಕಾ ಕಟಿಯಾರ್ ಇಲಾಖೆಯ ಕ್ರೀಡಾಕೂಟವೊಂದರಲ್ಲಿ ಭಾಗವಹಿಸಲು ಕೊಡಗಿನ ಪ್ರತಿನಿಧಿಯಾಗಿ ತೆರಳಿದ್ದನ್ನು ಅಲ್ಲದೆ ಟಿಪ್ಪು ಜಯಂತಿ ದಿನದ ಗಲಭೆ ಪರಿಸ್ಥಿತಿಯನ್ನು ನಿಯಂತ್ರಿಸಿದ್ದನ್ನೂ ಪರಿಗಣಿಸದ ರಾಜ್ಯ ಸರ್ಕಾರ, ಏಕಾಏಕಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿದಲ್ಲದೆ, ತೆರಳಬೇಕಾಗಿರುವ ಸ್ಥಳವನ್ನು ಇನ್ನು ಸೂಚಿಸಿಲ್ಲ. ಇದರಿಂದ ಗೊಂದಲದ ವಾತಾವರಣ ಉಂಟಾಗಿದೆ. ಸರ್ಕಾರದ ಈ ಕ್ರಮಕ್ಕೆ ಜಿಲ್ಲೆಯ ಜನತೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವರ್ತಿಕಾ ಕಟಿಯಾರ್ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ, ಟಿಪ್ಪು ಜಯಂತಿ ಸಂದರ್ಭ ಕೊಡಗಿನ ಪ್ರಭಾರ ಜಿಲ್ಲಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದ ಕೂರ್ಮಾರಾವ್ ಅವರನ್ನೂ ಕೂಡಾ ವರ್ಗ ಮಾಡಲಾಗಿದೆ.
ಮತ್ತೊಂದು ಆತಂಕಕಾರಿ ಅಂಶ ಎಂದರೆ..? ಟಿಪ್ಪು ದಿನಾಚರಣೆಯಂದು ಎಸ್‌ಪಿ ವರ್ತಿಕಾ ಕಟಿಯಾರ್‌ರಂತೆ ಕೊಡಗಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಕೂಡ ರಜೆಯ ಮೇಲೆ ತೆರಳಿದ್ದರು. ಆದರೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ವರ್ತಿಕಾ ಕಟಿಯಾರ್ ಅವರನ್ನು ಮಾತ್ರ ವರ್ಗಾವಣೆ ಮಾಡಿದೆ. ಎಸ್‌ಪಿ ವರ್ತಿಕಾ ಕಟಿಯಾರ್ ಪರಿಸ್ಥಿತಿ ಅರಿತು ಕ್ರೀಡಾಕೂಟ ಬಿಟ್ಟು ಜಿಲ್ಲೆಗೆ ಬಂದು ಕಾರ್ಯ ಮಾಡಿದರು. ಆದರೆ ಜಿಲ್ಲಾಧಿಕಾರಿಗಳು ರಜೆಯಿಂದ ಬರಲೇ ಇಲ್ಲ. ಹಾಗಿದ್ದರೂ ಜಿಲಲಾಧಿಕಾರಿಗಳ ಮೇಲೆ ರಾಜ್ಯ ಸರ್ಕಾರ ಮೃದು ದೋರಣೆ ತಳೆದಿದೆ. ಇದರಿಂದ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ….
ಒಟ್ಟಾರೆ ಎಸ್‌ಪಿ ವರ್ತಿಕಾ ಕಟಿಯಾರ್ ಓರ್ವ ಹೆಣ್ಣು ಮಗಳಾಗಿ ಕೊಡಗಿನ ಕಾವೇರಮ್ಮನ ಮಡಿಲಲ್ಲಿ ಮಾಡಿದ ಕಾರ್ಯ, ಸಲ್ಲಿಸಿದ ಸೇವೆ ಎಲ್ಲರ ಮನದಲ್ಲೂ ಅಚ್ಚಳಿಯದೇ ಉಳಿದಿದೆ.

One thought on “ಟಿಪ್ಪು ದಿನಾಚರಣೆ :ಎಸ್‌ಪಿ ವರ್ಗಾವಣೆಗೆ ವಿರೋಧ

  1. Siddaramayaravrige alpasakyatharannu olisalu e krama thegedukondidare & MLC electionnalli cong. sothiddu saha ondu karana.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *