ಮಳೆ ಕೊರತೆ : ಕೊಡಗಿನಲ್ಲಿ ಸಾಂಕ್ರಾಮಿಕ ರೋಗ ಭೀತಿ

Posted on: August 12, 2017

imagesಮಡಿಕೇರಿ: ರಾಜ್ಯದೆಲ್ಲೆಡೆ ಬರದ ಛಾಯೆ ಮೂಡಿರುವಂತೆ ಕಾವೇರಿ ನಾಡು ಕೊಡಗು ಜಿಲ್ಲೆಯಲ್ಲೂ ಮಳೆ ಕೊರತೆ ಎದುರಾಗಿದ್ದು, ನಿರೀಕ್ಷಿತ ಮುಂಗಾರಿನ ಆಗಮನವಾಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿಯೂ ಕಾಡುತ್ತಿದೆ.

ಡೆಂಗ್ಯೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ವೈರಾಣುವಿನಿಂದ ಬರುವ ಕಾಯಿಲೆಗಳಾಗಿದ್ದು, ಇವುಗಳು ಈಡಿಸ್‌ ಜಾತಿಯ ಸೊಳ್ಳೆಗಳಿಂದ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ. ಕೊಡಗಿನಲ್ಲಿ ವಾಡಿಕೆಯಂತೆ ಧಾರಾಕಾರ ಮಳೆಯಾಗಿದ್ದರೆ ಅಶುಚಿತ್ವದ ವಾತಾವರಣಕ್ಕೆ ಅವಕಾಶವಿರುತ್ತಿರಲಿಲ್ಲ. ಅಲ್ಲದೆ ಕೊಳಚೆ ನೀರು ಕೊಚ್ಚಿ ಹೋಗುವುದರಿಂದ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿರಲಿಲ್ಲ.

ಆದರೆ, ಕಳೆದ ವರ್ಷದಂತೆ ಈ ಬಾರಿಯೂ ಮಳೆಯ ಕೊರತೆ ಉಂಟಾಗಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಕಸ ವಿಲೇವಾರಿಯ ಸಮಸ್ಯೆಯೂ ಕಾಡುತ್ತಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರ ಪ್ರದೇಶದಲ್ಲಿ ಅಲ್ಲಲ್ಲಿ ಅಶುಚಿತ್ವದ ವಾತಾವರಣ ಕಂಡು ಬಂದಿದೆ. ಕೊಳೆತು ನಾರುತ್ತಿರುವ ತ್ಯಾಜ್ಯದಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದು ಮತ್ತು ಬಿಸಿಲಿನ ವಾತಾವರಣ ಸೊಳ್ಳೆಗಳ ವಂಶಾಭಿವೃದ್ಧಿಗೆ ಸಹಕಾರಿಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಕಂಡು ಬರಲು ಕಾರಣವಾಗಿದೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *