ರಾಜ್ಯ ಮಟ್ಟದ ೨೬ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಬಿ.ಎ.ಹರೀಶ್ ಚಾಲನೆ

Posted on: August 12, 2017

DSC_7229 DSC_7257 DSC_7285 DSC_7324
ಮಡಿಕೇರಿ :-ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬರೂ ಒಂದುಗೂಡಲು ಮತ್ತು ಭಾಂದವ್ಯ ಬೆಸೆಯುವುದರ ಜೊತೆಗೆ ಮಾನಸಿಕ ಮತ್ತು ದೈಹಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟೇಲ್ ಅಸೋಷಿಯೇಷನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಗ್ಗೋಡ್ಲು ಗ್ರಾಮದ ದಿ.ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ೨೬ನೇ ವರ್ಷದ ಕೆಸರು ಗದ್ದೆ ಕ್ರೀಡೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭತ್ತ ಬೆಳೆಯುವುದು ಕಡಿಮೆಯಾಗಿದೆ. ಆದ್ದರಿಂದ ಸರ್ಕಾರ ಪ್ರತಿ ಹೆಕ್ಟೇರ್‌ಗೆ ೪ ಸಾವಿರ ರೂ ಸಹಾಯಧನ ನೀಡುತ್ತಿದ್ದು, ಇದನ್ನು ಬಳಸಿಕೊಳ್ಳುವಂತಾಗಬೇಕು, ಈ ಸಹಾಯಧನವನ್ನು ೧೦ ಸಾವಿರ ರೂ. ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿ.ಪಂ.ಅಧ್ಯಕ್ಷರು ಹೇಳಿದರು.’
ಭತ್ತ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭತ್ತಕ್ಕೆ ಇನ್ನಷ್ಟು ಹೆಚ್ಚಿನ ಬೆಂಬಲ ಬೆಲೆ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇಂದಿನ ಯಾಂತ್ರೀಕೃತ ನಾಟಿ ಯಂತ್ರ ಬಳಸಿಕೊಂಡು ಭತ್ತ ಬೆಳೆಯುವಂತಾಗಬೇಕು. ಕೃಷಿ ಪದ್ಧತಿಯನ್ನು ಉಳಿಸಿಕೊಂಡು ಹೋಗಬೇಕಿದೆ. ಗ್ರಾಮೀಣ ಸೊಗಡಿನ ಕೆಸರುಗದ್ದೆ ಕ್ರೀಡಾಕೂಟಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕಿದೆ ಎಂದು ಬಿ.ಎ.ಹರೀಶ್ ಅವರು ತಿಳಿಸಿದರು.
ತಾ.ಪಂ.ಸದಸ್ಯರಾದ ಕುಮುದ ರಶ್ಮಿ ಅವರು ಮಾತನಾಡಿ ಜಿಲ್ಲೆಯ ನಾನಾ ಭಾಗಗಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಏರ್ಪಡಿಸಿ ಗ್ರಾಮೀಣರು ಒಂದೆಡೆ ಸೇರುವಂತಾಗಲು ಅವಕಾಶವಾಗಿದೆ. ಮಳೆಗಾಲದ ಅವಧಿಯಲ್ಲಿ ಗ್ರಾಮೀಣ ಕೆಸರು ಗದ್ದೆ ಕೀಡಾಕೂಟಗಳ ಸಂಭ್ರಮ ಒಂದು ರೀತಿ ಹಬ್ಬವಿದ್ದಂತೆ. ಆ ದಿಸೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ ಎಂದರು.
ಮೇಕೇರಿ ಗ್ರಾ.ಪಂ.ಉಪಾಧ್ಯಕ್ಷರಾದ ಕೆ.ಎಸ್.ಭೀಮಯ್ಯ, ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಕಾಂಗೀರ ಸತೀಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಮಂಡುವಂಡ.ಬಿ.ಜೋಯಪ್ಪ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ, ಮಾಜಿ ಅಧ್ಯಕ್ಷರಾದ ಪಿ.ಪಿ.ಸುಕುಮಾರ್, ಸಾಬಾ ಸುಬ್ರಮಣಿ, ಇಂಧುಮತಿ, ಯುವ ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಭಗವತಿ ಯುವಕ ಸಂಘ, ನಿಸರ್ಗ ಯುವತಿ ಮಂಡಳಿ ಸೇರಿದಂತೆ ವಿವಿಧ ಕ್ರೀಡಾ ಸಂಘಗಳಿಗೆ ೨೦೧೬-೧೭ ನೇ ಸಾಲಿನ ಕ್ರೀಡಾ ಸಾಮಗ್ರಿಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ, ನಾಟಿ ಓಟ ಹೀಗೆ ನಾನಾ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *