ಕಾಳುಮೆಣಸು ಆಮದು: ರೈತರ ಪ್ರತಿಭಟನೆ

Posted on: October 12, 2017

koddddಮಡಿಕೇರಿ: ವಿಯೆಟ್ನಾಂನಿಂದ ಕಾಳುಮೆಣಸು ಆಮದು ವಿರೋಧಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾಫಿ ಬೆಳೆಗಾರರು  ಪ್ರತಿಭಟನೆ ನಡೆಸಿದರು.

ಗೋಣಿಕೊಪ್ಪಲು ಎಪಿಎಂಸಿಯಲ್ಲಿ ಆದ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಕರಿಮೆಣಸು ಆಮದನ್ನು ತಕ್ಷಣದಿಂದ ನಿಲ್ಲಿಸಿ ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಕರಿಮೆಣಸು ವ್ಯಾಪಾರ ಸಂಬಂಧ ರೋಜ್‌ ಮೇರಿ ಇಂಟರ್ ನ್ಯಾಷನಲ್‌, ಸೌರಭ ಕುಮಾರ್ ಬಂಕ, ಜತ್ತಿನ್ ಷಾ ಸಂಸ್ಥೆಗಳು ಪಡೆದಿರುವ ಪರವಾನಗಿಯನ್ನು ರದ್ದು ಮಾಡಬೇಕು. ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ರಾಜ್ಯದಿಂದಲೇ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.

ಕಾಳುಮೆಣಸು ಆಮದಿನಿಂದ ಆಗಿರುವ ನಷ್ಟಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಜಿಲ್ಲೆಯ ರೈತರಿಗೆ ಪರಿಹಾರ ಘೋಷಣೆ ಮಾಡಬೇಕು. ದೇಶದ ಆಮದು ನೀತಿಯಿಂದ ಜಿಲ್ಲೆಯ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಈ ಹಗರಣಕ್ಕೆ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದ್ದು, ಸದಸ್ಯರ ವಿರುದ್ಧ ಶೀಘ್ರವಾಗಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್‌ ಬೋಪಯ್ಯ ಮಾತನಾಡಿ, ವಿಯೆಟ್ನಾಂನಿಂದ ಬಂದಿರುವ ಕಾಳುಮೆಣಸು ಯಾವ ಮಾರ್ಗವಾಗಿ ಜಿಲ್ಲೆಗೆ ಬರುತ್ತಿದೆ. ಈ ಸಂಬಂಧ ನಡೆದ ಕಲಬೆರಕೆ, ತೆರಿಗೆ ಪಾವತಿಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು.

ಅಂತರರಾಷ್ಟ್ರೀಯ ಮಟ್ಟ ತನಿಖಾ ತಂಡವನ್ನು ರಚಿಸಬೇಕು. ರೈತರು ಬೆಳೆದ ಕಾಳುಮೆಣಸಿಗೆ ₹ 700 ರಿಂದ ₹800 ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಕಳ್ಳಚಂಡ ಧನು, ರೈತ ಮುಖಂಡ ಶಂಕರ್‌ ನಾಚಪ್ಪ ಹಾಜರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *