೦೧ಭ್ರಷ್ಟಾಚಾರವನ್ನು ಬೆಂಬಲಿಸಲಿಲ್ಲವೆಂದು ರಾಜಿನಾಮೆ ಕೇಳುತ್ತಿದ್ದಾರೆ : ಕಾವೇರಮ್ಮ ಸೋಮಣ್ಣ ಆರೋಪ

Posted on: October 12, 2017

Z CAVERAMMA SOMANNAಮಡಿಕೇರಿ :- ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಇರುವುದನ್ನು ಸಹಿಸದ ಬಿಜೆಪಿಯ ಕೆಲವು ಸದಸ್ಯರು ನನ್ನ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ನಗರಸಭಾ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ನಗರಸಭಾ ಅಧ್ಯಕ್ಷಳಾದ ನಂತರ ನಿಯಮ ಬಾಹಿರ ಕ್ರಮಗಳಿಗೆ ಮತ್ತು ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಬಿದ್ದಿದೆ. ಇದನ್ನು ಸಹಿಸದ ಉಪಾಧ್ಯಕ್ಷರು ಹಾಗೂ ಕೆಲವು ಸದಸ್ಯರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದಕ್ಕೆ ತಾಂತ್ರಿಕ ಅಡಚಣೆಗಳು ಕಾರಣವಾಗಿದೆ. ಸರ್ಕಾರದ ಮಾರ್ಗಸೂಚಿ ಮತ್ತು ಮೀಸಲು ನೀತಿ(ರಾಜ್ಯ ಹಣಕಾಸು ಸೆಕ್ರೆಟಿಯೆಟ್ ನೋಟಿಫಿಕೇಶನ್ ಪ್ರಕಾರ ಸಂಖ್ಯೆ ಈಆ ೩೭೬ ಇಘಿP ೧೨/೨೦೧೭ ಬೆಂಗಳೂರು, ದಿನಾಂಕ ೧೫/೦೯/೨೦೧೭) ಆದೇಶ ಇದಕ್ಕೆ ಸಾಕ್ಷಿಯಾಗಿದೆ ಹೊರತು ನನ್ನ ಸಹಿ ಕಾರಣವಲ್ಲವೆಂದು ಕಾವೇರಮ್ಮ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಉಪಾಧ್ಯಕ್ಷರು ಸಹಿ ಮಾಡಿದ್ದಾರೆ, ಅಧ್ಯಕ್ಷರು ಮಾಡಿಲ್ಲ ಎಂದು ಆರೋಪಿಸಲಾಗಿದೆ. ಆದರೆ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಸಹಿ ಮಾಡಬಹುದು ಹೊರತು ಅಧ್ಯಕ್ಷರ ಉಪಸ್ಥಿತಿಯಲ್ಲಿ ಅಲ್ಲ ಎನ್ನುವ ಕನಿಷ್ಠ ಜ್ಞಾನ ಕೂಡ ಸದಸ್ಯರಿಗೆ ಇಲ್ಲದಿರುವುದು ವಿಷಾದನೀಯವೆಂದು ಕಾವೇರಮ್ಮ ಸೋಮಣ್ಣ ಟೀಕಿಸಿದ್ದಾರೆ.
ಯುಜಿಡಿ ಕಾಮಗಾರಿಯನ್ನು ನೇರವಾಗಿ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀನದಲ್ಲಿ ನಡೆಯುತ್ತಿದ್ದು ಈ ಯೋಜನೆ ಕೇಂದ್ರ ಸರ್ಕಾರದ ಕಡ್ಡಾಯವಾಗಿ ಜಾರಿಯಾಗಬೇಕಾದ ಯೋಜನೆಯಾಗಿದೆ. ಈಗ ಆರೋಪ ಮಾಡುತ್ತಿರುವ ಸದಸ್ಯರುಗಳೇ ಹಿಂದೆ ಒಪ್ಪಿಗೆ ಸೂಚಿಸುವಾಗಲೂ ನಗರಸಭಾ ಸದಸ್ಯರಾಗಿದ್ದರು. ಆದರೆ ಇದೀಗ ಜನರ ಹಾದಿ ತಪ್ಪಿಸುವ ಉದ್ದೇಶದಿಂದ ಆರೋಪ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿ ೬ ತಿಂಗಳು ಕಳೆದಿದ್ದು, ಮೂರು ತಿಂಗಳುಗಳ ಕಾಲ ಎಡೆಬಿಡದೆ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಮಾಹಿತಿ ಎಲ್ಲರಿಗೂ ಇದೆ ಎಂದು ಸಮರ್ಥಿಸಿಕೊಂಡಿರುವ ಕಾವೇರಮ್ಮ ಸೋಮಣ್ಣ, ಡಿಸೆಂಬರ್ ಅಂತ್ಯದಲ್ಲಿ ಖಾಸಗಿ ಬಸ್ ನಿಲ್ದಾಣ ಯೋಜನೆ ಪೂರ್ಣಗೊಳ್ಳಿದೆ ಎಂದು ಹೇಳಿದ್ದಾರೆ.
ಸ್ವಚ್ಛತೆಯಲ್ಲಿ ಮಡಿಕೇರಿ ನಗರ ಕರ್ನಾಟಕ ರಾಜ್ಯದಲ್ಲೇ ೪ನೇ ಸ್ಥಾನದಲ್ಲಿದೆ. ಹೀಗಿರುವಾಗ ನಗರ ಅಶುಚಿತ್ವದಿಂದ ಕೂಡಿದೆ ಎಂದು ಬಿಜೆಪಿ ಸದಸ್ಯರು ಮಾಡುತ್ತಿರುವ ಆರೋಪದ ಹಿಂದೆ ದುರುದ್ದೇಶ ಅಡಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *