ಬೆಂಕಿ ಫಾಲ್ಸ್

Posted on: November 29, 2017

kd4ಮಳೆಗಾಲವೆಂದರೆ ಸಂಭ್ರಮ. ಎಲ್ಲೆಲ್ಲೂ ಹಸಿರ ಐಸಿರಿ. ಉಕ್ಕಿ ಹರಿಯುವ ನದಿ-ತೊರೆಗಳ ನಿನಾದ. ಜಲಧಾರೆಗಳಿಗೋ ಜೀವಕಳೆ. ಪ್ರವಾಸಿಗರಿಗೆ ಜಲಸಿರಿ ಕಣ್ತುಂಬಿಕೊಳ್ಳುವ ತವಕ. ಆದರೆ, ಅದೆಷ್ಟೋ ಜಲಧಾರೆಗಳು ಇಂದಿಗೂ ಚಿತ್ರಾಕ್ಷರಗಳಲ್ಲಿ ಮಿನುಗದೆ ಎಲೆಮರೆಕಾಯಿಯಂತೆ ಜನರಿಂದ ದೂರವೇ ಉಳಿದಿವೆ. ಅಂತಹ ಜಲಪಾತಗಳ ಪೈಕಿ ‘ಬೆಂಕಿ ಫಾಲ್ಸ್’ ಒಂದು.

ಬೆಂಕಿ ಫಾಲ್ಸ್, ಗಾಣಾಳು ಫಾಲ್ಸ್, ಶಿಂಷಾ ಫಾಲ್ಸ್ ಎಂಬ ನಾನಾ ಹೆಸರುಗಳಿಂದ ಕರೆಯಲಾಗುವ ಈ ಜಲಧಾರೆ ಸ್ಥಳೀಯರ ಬಾಯಲ್ಲಿ ‘ಬೆಂಕಿ ಫಾಲ್ಸ್’ ಎಂದೇ ಹೆಚ್ಚು ಪ್ರಸಿದ್ಧಿ! ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪ (ಮುತ್ತತ್ತಿ ಮಾರ್ಗ) ಈ ಜಲಪಾತವಿದೆ. ಕಾವೇರಿ ನದಿಯ ಉಪನದಿ ಆಗಿರುವ ಶಿಂಷಾ ನದಿ ಸೃಷ್ಟಿಸುವ ಮನಮೋಹಕ ಜಲಧಾರೆ ಇದು.

‘ಬೆಂಕಿ ಫಾಲ್ಸ್’ ಎಂದ ಮಾತ್ರಕ್ಕೆ ಬೆಂಕಿಯೇ ಧರೆಗಿಳಿಯುತ್ತದೆ ಎಂದು ಭಾವಿಸಬೇಕಿಲ್ಲ. ವಿಸ್ತಾರವಾಗಿ ಹರಡಿರುವ ಕಲ್ಲಬಂಡೆಯನ್ನು ಸೀಳಿ ಮೇಲಿಂದ ಇಳಿಯುವುದು ಜಲಲ ಜಲಲ ಜಲಧಾರೆಯೇ..! ‘ಬೆಂಕಿ ಫಾಲ್ಸ್’ ಎಂಬ ಹೆಸರು ಹೇಗೆ ಬಂತು ಎಂಬುವುದು ಸ್ಥಳೀಯರಿಗೆ ತಿಳಿದಿಲ್ಲ.

ಮೌನ ತಬ್ಬಿದ, ಹಸಿರ ಕಾನನ ಮಧ್ಯೆ ವಿಸ್ತಾರವಾಗಿ ಮೈಚಾಚಿರುವ ಕಲ್ಲುಬಂಡೆ ಮೇಲಿಂದ ಕೆಳಗಿಳಿಯುವ ಜಲಧಾರೆಯ ದೃಶ್ಯ ಚೇತೋಹಾರಿ. ನಂತರ, ಹಸಿರು ಕಣಿವೆ ಮೂಲಕ ಮೌನವಾಗಿ ಸಾಗುವ ‘ಶಿಂಷೆ’ ಮುಂದೆ ‘ಕಾವೇರಿ’ ನದಿಯ ಒಡಲು ಸೇರುತ್ತಾಳೆ. ಅಲ್ಲಲ್ಲಿ ಕಾಣುವ ಸಣ್ಣ ಸಣ್ಣ ಝರಿಗಳು, ಹಸಿರ ಸಿರಿ, ಬಂಡೆಗಲ್ಲಿನಲ್ಲಿ ಮೂಡಿರುವ ಚಿತ್ತಾರದ ಸೌಂದರ್ಯ ಮನಸ್ಸಿನ ಪುಟದಲ್ಲಿ ಅಚ್ಚೊತ್ತುತ್ತದೆ. ಮಳೆಗಾಲವಿದ್ದರೂ ಶಿಂಷೆ ಉಕ್ಕಿಹರಿದರಷ್ಟೇ ಈ ಜಲಪಾತದ ಸೊಗಸು ಕಣ್ತುಂಬಿಕೊಳ್ಳಲು ಸಾಧ್ಯ.

ಎಚ್ಚರಿಕೆ ಇರಲಿ: ಜಲಧಾರೆ ಸಮೀಪ ತೆರಳಬೇಕೆಂದರೆ ಭಯ ಮೂಡಿಸುವಷ್ಟು ಇಳಿಜಾರಿದೆ. ಸೌಕರ್ಯ ಇಲ್ಲದಿರುವ ಕಾರಣ ಕಾಲುದಾರಿಯಲ್ಲಿಯೇ ಕೆಳಗಿಳಿಯಬೇಕು. ಸ್ವಲ್ಪ ಮೈಮರೆತರೂ ಅನಾಹುತ ಗ್ಯಾರಂಟಿ. ಜಲಧಾರೆ ಸಮೀಪ ತಲುಪಿದಾಗ ರಭಸದಿಂದ ಕೆಳಗಿಳಿಯುವ ನೀರು ಎಬ್ಬಿಸುವ ತುಂತುರು ಆಹ್ಲಾದಕರ ಅನುಭೂತಿ ನೀಡುತ್ತದೆ. ಪ್ರಕೃತಿ ಉಪಾಸಕರಿಗೆ ಹೇಳಿ ಮಾಡಿಸಿದ ಸ್ಥಳವಿದು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *