ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಚಾಲನೆ

Posted on: December 6, 2017

houseಬೆಂಗಳೂರು: ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ವಸತಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಇದು ನಿರಂತರ ಯೋಜನೆ. ಒಂದು ಲಕ್ಷ ವಸತಿ ನಿರ್ಮಾಣ ಪೂರ್ಣಗೊಂಡ ಬಳಿಕವೂ ಇನ್ನಷ್ಟು ಮನೆಗಳ ನಿರ್ಮಾಣ ಮುಂದುವರಿಯಲಿದೆ’ ಎಂದರು.

ಬೆಂಗಳೂರಿನಲ್ಲಿ ಒತ್ತುವರಿ ತೆರವುಗೊಳಿಸಿ ವಶಕ್ಕೆ ತೆಗೆದುಕೊಂಡ ಸಾಕಷ್ಟು ಜಮೀನು ಇದೆ. ಅಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಒಂದೇ ಕಡೆ ನಿರ್ಮಾಣ ಆಗುತ್ತಿಲ್ಲ. ನಗರದ ಬೇರೆ ಬೇರೆ ಭಾಗಗಳಲ್ಲಿ ನಿರ್ಮಿಸಲಾಗುತ್ತದೆ. ವಾರ್ಷಿಕ ಆದಾಯ ₹ 87,600 ಕ್ಕಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಅರ್ಜಿ ಸಲ್ಲಿಸಲು ಇರುವ ನಿಬಂಧನೆ ಅತ್ಯಂತ ಸರಳವಾಗಿದೆ. ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಹೊಂದಿರಬೇಕು. ಬೆಂಗಳೂರಿನಲ್ಲಿ ಕನಿಷ್ಠ ಐದು ವರ್ಷ ನೆಲೆಸಿರಬೇಕು. ಸರ್ಕಾರದ ಬೇರೆ ವಸತಿ ಯೋಜನೆಯಲ್ಲಿ ಮನೆ ಪಡೆದಿರಬಾರದು. ಇಂತಹವರು ಅರ್ಜಿ ಸಲ್ಲಿಸಲು ಅರ್ಹರು. ತಪ್ಪು ಮಾಹಿತಿ ಕೊಟ್ಟು ಮನೆ ಪಡೆಯಲು ಯತ್ನಿಸಿದರೆ, ಶಿಕ್ಷೆಗೆ ಒಳಗಾಗುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವಸತಿ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 30, ಪರಿಶಿಷ್ಟ ಪಂಗಡಕ್ಕೆ ಶೇ 10, ಅಲ್ಪಸಂಖ್ಯಾತರಿಗೆ ಶೇ 10 ರಷ್ಟು ಮೀಸಲು ಇದೆ. ಉಳಿದ ಶೇ  50 ಮನೆಗಳನ್ನು ಸಾಮಾನ್ಯ ವರ್ಗಕ್ಕೆ ಹಂಚಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ₹ 3.50 ಲಕ್ಷ ಹಾಗೂ ಸಾಮಾನ್ಯ ವರ್ಗಕ್ಕೆ ₹ 2.70 ಲಕ್ಷ ಸಹಾಯ ಧನ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್‌ನಿಂದ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಆನ್‌ ಲೈನ್‌ ಪೋರ್ಟಲ್ ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಸತಿ ಸಚಿವ ಕೃಷ್ಣಪ್ಪ, ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *