ಕಾವೇರಿ ತಾಲ್ಲೂಕು ರಚನೆಗಾಗಿ ಒಕ್ಕೊರಲ ಧ್ವನಿ

Posted on: December 11, 2017

kkಕುಶಾಲನಗರ: ಕುಶಾಲನಗರ ಪಟ್ಟಣವನ್ನು ಕೇಂದ್ರವಾಗಿರಿಸಿ ‘ಕಾವೇರಿ ತಾಲ್ಲೂಕು’ ರಚನೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ  ಕರೆ ನೀಡಿದ್ದ ಬಂದ್ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಯಶಸ್ವಿಯಾಯಿತು.

ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಬಸ್ಸುಗಳ ಸಂಚಾರ, ಆಟೊರಿಕ್ಷಾ ಮತ್ತು ಮ್ಯಾಕ್ಸಿಕ್ಯಾಬುಗಳ ಸಂಚಾರ, ಟ್ಯಾಕ್ಸಿಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಸಿನಿಮಾ ಮಂದಿರ, ಹೋಟೆಲುಗಳು ಬಂದ್ ಆಗಿದ್ದವು. ಔಷಧಿ ಅಂಗಡಿ, ಹಾಲಿನ ಅಂಗಡಿಗಳಿಗೆ ಮಾತ್ರ ವಿನಾಯತಿ ನೀಡಲಾಗಿತ್ತು.

ಬಂದ್ ಹಿನ್ನೆಲೆಯಲ್ಲಿ ಜನಸಂಚಾರ ಕೂಡ ವಿರಳವಾಗಿತ್ತು. ಬಸ್ಸುಗಳ ಸಂಚಾರವಿಲ್ಲದ ಕಾರಣ ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಾಗಿದ್ದರು. ಬ್ಯಾಂಕುಗಳು ಬಾಗಿಲು ಮುಚ್ಚಿಕೊಂಡು ಕಾರ್ಯ ನಿರ್ವಹಿಸಿದವು. ಪಟ್ಟಣದಲ್ಲಿ ಹೋಟೆಲುಗಳು ಸಂಪೂರ್ಣ ಮುಚ್ಚಿದ್ದರಿಂದ ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಹಾಗೂ ಪ್ರವಾಸಿಗರು ಊಟ, ತಿಂಡಿಗಾಗಿ ಪರದಾಡಿದರು.

ಕಾವೇರಿ ನಿಸರ್ಗಧಾಮ, ದುಬಾರೆ, ಹಾರಂಗಿ ಮತ್ತಿತರ ಕಡೆಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತು. ಉದ್ದೇಶಿತ ತಾಲ್ಲೂಕು ವ್ಯಾಪ್ತಿಯ 19 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘ–ಸಂಸ್ಥೆಗಳು ಸೇರಿದಂತೆ ಸ್ಥಾನೀಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ವಿವಿಧ ಗ್ರಾಮಗಳಲ್ಲಿ ಹೆಬ್ಬಾಲೆ ಗ್ರಾಮದಲ್ಲಿ ಜಿ.ಪಂ ಕೃಷಿ ಸ್ಥಾನೀಯ ಸಮಿತಿ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ, ತೊರೆನೂರು ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷ ದೇವರಾಜ್, ಕೃಷ್ಣೇಗೌಡ, ಟಿ.ಕೆ.ಪಾಂಡುಗಂಗ, ಟಿ.ಬಿ.ಜಗದೀಶ್ ನೇತೃತ್ವದಲ್ಲಿ, ಶಿರಂಗಾಂಲ ಗ್ರಾಮದಲ್ಲಿ ತಾ.ಪಂ ಸದಸ್ಯ ಜಯಣ್ಣ , ಎಸ್.ಎಸ್.ಚಂದ್ರಶೇಖರ್, ಶ್ರೀನಿವಾಸ್, ಗಣೇಶ್ ನೇತೃತ್ವದಲ್ಲಿ, ಗುಡ್ಡೆಹೊಸೂರು ಗ್ರಾಮದಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಪೂವಯ್ಯ, ಗ್ರಾ.ಪಂ ಅಧ್ಯಕ್ಷೆ ಭಾರತಿ ಹಾಗೂ ನಂಜರಾಯಪಟ್ಟಣದಲ್ಲಿ ತಾ.ಪಂ ಮಾಜಿ ಸದಸ್ಯ ಸಿ.ಎಲ್.ವಿಶ್ವ, ಜೈನಭ, ನವೀನ್, ಲೋಕನಾಥ್, ತಾ.ಪಂ ಸದಸ್ಯ ಚಂಗಪ್ಪ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಲಾಯಿತು.

ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಮುರಳೀಧರ್, ಸಿಪಿಐ ಕ್ಯಾತೇಗೌಡ, ಎಸ್ಐ ಜಗದೀಶ್, ಮಹೇಶ್, ಅಪ್ಪಾಜಿ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *