ವ್ಯಕ್ತಿ ಸಾವು: ಕಾಡುಪ್ರಾಣಿ ದಾಳಿ

Posted on: December 5, 2017

kodಸೋಮವಾರಪೇಟೆ: ಸಮೀಪದ ನಗರೂರು ಕಾಫಿ ತೋಟದ ಕಾರ್ಮಿ ಕರ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಸಾವನ್ನಪ್ಪಿದ್ದು, ಕಾಡುಪ್ರಾಣಿಯೊಂದು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಕಲ್ಲುಬಂಗ್ಲೆ ನಿವಾಸಿ ತಿಮ್ಮಪ್ಪ (67) ಮೃತಪಟ್ಟವರು.

ಸಂತೋಷ್ ಅವರಿಗೆ ಸೇರಿದ ನಗರೂರು ಕಾಫಿ ತೋಟದಲ್ಲಿ ತಿಮ್ಮಪ್ಪ ಕಾವಲುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.  ಕಾರ್ಮಿಕರು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ವೇಳೆ ಸಾವನ್ನಪ್ಪಿರುವುರು ಗೊತ್ತಾಗಿದೆ.

ಸೂಕ್ತ ಪರಿಹಾರಕ್ಕಾಗಿ ಸುತ್ತಮುತ್ತಲ ಕಾರ್ಮಿಕರು ಹಾಗೂ ಸಾರ್ವಜನಿಕರು ರಸ್ತೆತಡೆ ನಡೆಸಿದರು. ನಂತರ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಸೂಚನೆ ಮೇರೆಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ಮೃತರ ಕುಟುಂಬಕ್ಕೆ ₹ 5ಲಕ್ಷ ಪರಿಹಾರ ಘೋಷಿಸಿ, ಸ್ಥಳದಲ್ಲಿ ₹ 2 ಲಕ್ಷದ ಚೆಕ್ ವಿತರಿಸಿದರು.

ಮನೆ ಮುಂದೆ ಬಿದ್ದಿದ್ದ ಮೃತದೇಹದ ಮುಖ, ಕುತ್ತಿಗೆ ಹಾಗೂ ಎಡಗೈ ಹಸ್ತವನ್ನು ಪ್ರಾಣಿ ತಿಂದಿದೆ. ಚಿರತೆ ದಾಳಿ ಮಾಡಿ ಹತ್ಯೆ ಮಾಡಿರುವುದಾಗಿ ಆರೋಪಿಸಿ, ಮೃತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಡಿಎಫ್ಒ ಸೂರ್ಯಸೇನ್, ಎಸಿಎಫ್ ಚಿಣ್ಣಪ್ಪ, ಆರ್ಎಫ್ಒ ಲಕ್ಷ್ಮೀಕಾಂತ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಕಾಫಿ ತೋಟದಲ್ಲಿ ಹುಟುಕಾಟ ನಡೆಸಿದರೂ ಚಿರತೆ ಎಂಬುದಕ್ಕೆ ಯಾವುದೇ ಕುರುಹು ಲಭಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ನಾಯಿ ದಾಳಿಯ ಬಗ್ಗೆ ಸಂಶಯವಿದೆ. ಸೂಕ್ತ ತನಿಖೆಯ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಎಫ್ಒ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮಾನವೀಯ ದೃಷ್ಟಿಯಿಂದ ಪರಿಹಾರ ಘೋಷಿಸಲಾಗಿದೆ. ₹2 ಲಕ್ಷ ನೀಡಲಾಗುವುದು. ಉಳಿದ ₹3 ಲಕ್ಷ ಮೃತರ ಸಂಬಂಧಿಕರ ಖಾತೆ ಜಮೆಯಾಗಲಿದೆ ಎಂದರು. ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ಎಂ. ಸೋಮಪ್ಪ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾಂಗ್ರೆಸ್‌ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಕೆ.ಎ. ಯಾಕುಬ್ ಅವರುಗಳು ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್, ಪ್ರಮುಖರಾದ ಹಾನಗಲ್ ಮಿಥುನ್, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಸುರೇಶ್ ಶೆಟ್ಟಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ದೀಪಕ್, ರಾಶಿ, ಹಸನಬ್ಬ ಮತ್ತಿತರರು ಸ್ಥಳದಲ್ಲಿದ್ದರು. ವೃತ್ತ ನಿರೀಕ್ಷಕ ನಂಜುಂಡೇಗೌಡ, ಪಿಎಸ್‌ಐ ಶಿವಣ್ಣ ಸ್ಥಳ ಪರಿಶೀಲನೆ ನಡೆಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *