3rd ಕ್ಲಾಸ್‌

Posted on: December 1, 2017

file6xrjr6bguaw51itsmf1‘3rd ಕ್ಲಾಸ್‌’ ಸಿನಿಮಾ ಬಗ್ಗೆ ಹೇಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಚಿತ್ರದ ಶೀರ್ಷಿಕೆ ನೋಡಿ ಜನರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುತ್ತಾರೆಯೇ? ಎಂಬ ಪ್ರಶ್ನೆ ಚಿತ್ರತಂಡಕ್ಕೆ ಎದುರಾಯಿತು. ‘ನನಗೊಂದು ಐಡೆಂಟಿಟಿ ಬೇಕಿದೆ. ಅದಕ್ಕಾಗಿ ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ. ಚಿತ್ರವನ್ನು ಕುಟುಂಬದ ಸದಸ್ಯರು ಕೂಡ ನೋಡಬಹುದು’ ಎಂದು ಸಮಜಾಯಿಷಿ ನೀಡಿದರು ಜಗದೀಶ್‌ ಪವಾರ್.

ಚಿತ್ರದ ನಾಯಕ ಮತ್ತು ಮೂವರು ಸ್ನೇಹಿತರು ಅನಾಥರಾಗಿರುತ್ತಾರೆ. ಕಾರ್‌ ಗ್ಯಾರೇಜ್‌ ಮಾಲೀಕ ಚಾಚಾನೇ ಇವರ ಬದುಕಿಗೆ ಆಸರೆ. ನಾಯಕಿ ಗೃಹ ಸಚಿವನ ಪುತ್ರಿ. ಬಿಂದಾಸ್‌ ಹುಡುಗಿಯಾದ ನಾಯಕಿಗೆ ಸಂಗೀತವೆಂದರೆ ಪಂಚಪ್ರಾಣ. ಸಚಿವನ ಕಾರು ಚಾಲಕನ ಮಗಳು ಮಧ್ಯಮ ವರ್ಗಕ್ಕೆ ಸೇರಿರುತ್ತಾಳೆ. ಅವಳಿಗೆ ಆಡಂಬರದ ಜೀವನ ನಡೆಸುವ ಆಸೆ. ಮೂರು ಸಂಸಾರಗಳ ಮಧ್ಯೆ ನಡೆಯುವ ತ್ರಿಕೋನ ಪ್ರೇಮ ಕಥೆಯೇ ಈ ಚಿತ್ರದ ಕಥಾವಸ್ತು.

ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಅಶೋಕ್‌ ದೇವ್‌ ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ‘ಚಿತ್ರದ ಮಾತಿನ ಭಾಗ ಮುಗಿದಿದೆ. ಡಬ್ಬಿಂಗ್‌ ಕಾರ್ಯ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದರು ಅಶೋಕ್‌ ದೇವ್.

ನಾಯಕಿ ರೂಪಿಕಾ, ‘ನನ್ನದು ಚಿತ್ರದಲ್ಲಿ ಗೃಹ ಸಚಿವರ ಪುತ್ರಿಯ ಪಾತ್ರ. ತಂದೆ, ತಾಯಿಯ ಮುದ್ದಿನ ಮಗಳು. ಚಿತ್ರದ ಶೀರ್ಷಿಕೆ ಭಿನ್ನವಾಗಿ ಇದ್ದರೂ ಸಿನಿಮಾ ಮಾತ್ರ ಫಸ್ಟ್‌ ಕ್ಲಾಸ್‌ ಆಗಿದೆ’ ಎಂದು ನಕ್ಕರು.

‘ನನ್ನ ನಗಿಸುವ ಕೆಲಸ ಈ ಚಿತ್ರದಲ್ಲಿಯೂ ಮುಂದುವರಿದಿದೆ’ ಎಂದರು ಹಾಸ್ಯ ನಟ ಪವನ್‌ಕುಮಾರ್‌. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಜಸ್ಸಿಗಿಫ್ಟ್‌ ಸಂಗೀತ ಸಂಯೋಜಿಸಿದ್ದಾರೆ. ಶಾಮ್‌ ರಾಜ್ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಶಶಿನಾಯ್ಕ ಮತ್ತು ಎಲ್. ಚಂದ್ರಕಲಾಬಾಯಿ ಬಂಡವಾಳ ಹೂಡಿದ್ದಾರೆ. ದಿವ್ಯಾ ರಾವ್‌, ಅವಿನಾಶ್‌, ಸಂಗೀತಾ, ರಮೇಶ್‌ ಭಟ್‌, ಗಿರೀಶ್‌ ಜತ್ತಿ, ಶಶಿಕಲಾ, ರಾಜ್‌ ಉದಯ್‌ ತಾರಾಬಳಗದಲ್ಲಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *