ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಲೆಗೈದ ಪತ್ನಿ

Posted on: January 4, 2018

murder11

ಮಡಿಕೇರಿ: ಇತ್ತೀಚೆಗೆ ಮಾದಾಪುರದ ಇಗ್ಗೊಡ್ಲು ಗ್ರಾಮದಲ್ಲಿ ನಡೆದ ರಂಜು ಪೂವಯ್ಯ ಎಂಬುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ಹತ್ಯೆಗೈಯಲ್ಪಟ್ಟ ವ್ಯಕ್ತಿಯ ಪತ್ನಿ, ಇಗ್ಗೋಡ್ಲು ಗ್ರಾಮದ ಕಾಳಚಂಡ ಶಾಂತಿ ಪೂವಯ್ಯ(36), ಚೆಂಬೆಬೆಳ್ಳೂರು ಗ್ರಾಮದ ಮಂಡೇಪಂಡ ರಾಜೇಶ(40) ಹಾಗೂ ಅದೇ ಗ್ರಾಮದ ಮಂಡೇಪಂಡ ಅಶೋಕ(44) ಎಂಬುವವರೆ ಬಂಧಿತ ಆರೋಪಿಗಳು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರಪ್ರಸಾದ್ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹತ್ಯೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು.

2017 ಡಿಸೆಂಬರ್ 23 ರಂದು ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಇಗ್ಗೋಡ್ಲುವಿನ ಬಾಡಿಗೆ ಮನೆ ಸಮೀಪ ಕಾಳಚಂಡ ರಂಜು ಪೂವಯ್ಯ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಡಿಸಿಐಬಿ ತಂಡ ಮೂವರು ಆರೋಪಿಗಳನ್ನು ಬಂಧಿಸಿದರು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಶಾಂತಿ ಪೂವಯ್ಯ ಹಾಗೂ ಮತ್ತೊಬ್ಬ ಆರೋಪಿ ರಾಜೇಶ್ ನಡುವೆ ಇದ್ದ ಪ್ರೀತಿಯೇ ಗಂಡ ರಂಜು ಪೂವಯ್ಯ ಕೊಲೆಗೆ ಕಾರಣವೆಂದು ತಿಳಿದು ಬಂದಿದೆ.

ಶಾಂತಿ ಪೂವಯ್ಯರಿಗೆ ಫೇಸ್ ಬುಕ್ ಮೂಲಕ ರಾಜೇಶ್ ಎಂಬಾತನ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ತನ್ನ ಪತಿ ಪ್ರತಿದಿನ ಮದ್ಯಪಾನ ಮಾಡಿ ತನಗೆ ಹಾಗೂ ತನ್ನ ಮಕ್ಕಳಿಗೆ ಹಿಂಸೆ ನೀಡುತ್ತಿದ್ದು, ಆತನನ್ನು ಹತ್ಯೆ ಮಾಡಿಸುವಂತೆ ರಾಜೇಶನ ಬಳಿ ಕೇಳಿಕೊಂಡಿದ್ದಳು ಎನ್ನಲಾಗಿದೆ. ಕೊಲೆ ಮಾಡಿಸಲು ಹಣ ಖರ್ಚಗುವುದಾಗಿ ತಿಳಿಸಿದ ರಾಜೇಶ, ತನ್ನ ಕುಟುಂಬದವನೇ ಆದ ಮಂಡೇಪಂಡ ಅಶೋಕನಿಗೆ, ರಂಜು ಪೂವಯ್ಯ ಅವರನ್ನು ಕೊಲೆ ಮಾಡಿದರೆ 1.50 ಲಕ್ಷ ರೂ. ನೀಡುವುದಾಗಿ ತಿಳಿಸುತ್ತಾನೆ. ಇದೇ ಪ್ರಕಾರವಾಗಿ ಡಿಸೆಂಬರ್ 23 ರಂದು ಬೆಳಗ್ಗಿನ ಜಾವ ಮಂಡೇಪಂಡ ರಾಜೇಶ್ ಹಾಗೂ ಅಶೋಕ ವೀರಾಜಪೇಟೆಯಿಂದ ಸ್ನೇಹಿತನ ಬೈಕ್ ನಲ್ಲಿ ಹೊರಟು ಇಗ್ಗೋಡ್ಲು ಗ್ರಾಮಕ್ಕೆ ತಲುಪುತ್ತಾರೆ. ಕಾಳಚಂಡ ರಂಜು ಪೂವಯ್ಯ ಅವರು ಮನೆಯಿಂದ ಕೆಳಕ್ಕಿಳಿದು ಬರುವುದನ್ನೆ ಕಾಯುತ್ತಿದ್ದ ಆರೋಪಿಗಳಲ್ಲಿ ಒಬ್ಬನಾದ ಅಶೋಕ ತನ್ನ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು.

ರಂಜು ಪೂವಯ್ಯ ಅವರ ಹತ್ಯೆಗೆ ಬಳಸಿದ ದ್ವಿಚಕ್ರ ವಾಹನ, ಎಸ್ಬಿಬಿಎಲ್ ಕೋವಿ ಹಾಗೂ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ರಾಜೇಶ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಎರಡು ಕೊಲೆ ಪ್ರಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಅಶೋಕ 2010 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೊಲೆ ಬೆದರಿಕೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಅಪರಾಧ ಪತ್ತೆದಳದ ನಿರೀಕ್ಷಕರಾದ ಎಂ.ಮಹೇಶ್ ನೇತೃತ್ವದಲ್ಲಿ ಎಎಸ್ಐಗಳಾದ ಕೆ.ವೈ.ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್, ವಿ.ಜಿ.ವೆಂಕಟೇಶ್, ಕೆ.ಆರ್. ವಸಂತ, ಎಂ.ಬಿ. ಸುಮತಿ , ಯು.ಎ. ಮಹೇಶ್, ಸಿ.ಕೆ. ರಾಜೇಶ್, ಎಂ.ಎ.ಗಿರೀಶ್, ಚಾಲಕರುಗಳಾದ ಕೆ.ಎಸ್.ಶಶಿ ಕುಮಾರ್ ಹಾಗೂ ಶೇಷಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಘಟನೆ ನಡೆದ ಕೇವಲ ಹತ್ತು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿಗಳಾದ ರಾಜೇಂದ್ರ ಪ್ರಸಾದ್ ಅವರು ನಗದು ಬಹುಮಾನ ಘೋಷಿಸಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *