ಆರೋಗ್ಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅರಿವು ಅಗತ್ಯ ಪ್ರಶಾಂತ್ ಕುಮಾರ್ ಮಿಶ್ರ

Posted on: February 14, 2018

DSC03281
ಮಡಿಕೇರಿ : ಆರೋಗ್ಯದ ಕಡೆ ಪ್ರತಿಯೊಬ್ಬರೂ ಗಮನಹರಿಸುವಂತಾಗಬೇಕು. ಆರೋಗ್ಯವಂತರಾಗಿದ್ದಲ್ಲಿ ಚಟುವಟಿಕೆಯಿಂದ ಇರಲು ಸಾಧ್ಯ. ಆದ್ದರಿಂದ ಆರೋಗ್ಯದ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕು ಎಂದು ಜಿ.ಪಂ.ಸಿ.ಇ.ಓ ಪ್ರಶಾಂತ್ ಕುಮಾರ್ ಮಿಶ್ರ ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವತಿಯಿಂದ ಮಾಹಿತಿ, ಶಿಕ್ಷಣ ಮತ್ತು ಸಹಭಾಗಿತ್ವ ಕಾರ್ಯಕ್ರಮದಡಿ ಅಂತರ ಇಲಾಖಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಕುರಿತು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

DSC03291
ಎಚ್.ಐ.ವಿ ಸೋಂಕಿತರಿಗೆ ಸರಿಯಾದ ಮಾಹಿತಿ ನೀಡಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯ ಬಳಸಿಕೊಳ್ಳುವಂತೆ ತಿಳಿಸಬೇಕು ಎಂದು ಜಿ.ಪಂ.ಸಿ.ಇ.ಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಸಲಹೆ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಜ್ ಅವರು ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯ. ಆರೋಗ್ಯ ಸೇವೆ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಅದ್ದರಿಂದ ಪ್ರಾಥಮಿಕ ಕೇಂದ್ರ, ಗ್ರಾಮಸಭೆ, ತಾಲ್ಲೂಕು ಕೇಂದ್ರಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುತೇವೆ ಎಂದು ಅವರು ತಿಳಿಸಿದರು.

DSC03279

ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ಅವರು ಮಾತನಾಡಿ ಎಚ್‍ಐವಿ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವಂತ ವೈರಾಣು. ಈ ವೈರಾಣು ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಹೆಚ್.ಐ.ವಿ ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದರಿಂದ. ಎಚ್.ಐ.ವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲೂಣಿಸುವ ಮೂಲಕ. ಸಂಸ್ಕರಣೆ ಮಾಡದ ಸೂಜಿ ಸಿರಂಜು ಬಳಸುವುದರಿಂದ ಬರುತ್ತದೆ ಎಂದು ಅವರು ತಿಳಿಸಿದರು.

ಎಚ್.ಐ.ವಿ ಸೋಂಕಿತ ಮಹಿಳೆ ಗರ್ಭಧರಿಸಿದರೆ ಮಗುವಿಗೆ ಸೋಂಕು ತಗಲುವ ಸಾಧ್ಯತೆ ಇದೆ ಪಿಪಿಟಿಸಿಟಿ ಸೇವೆಯಿಂದ, ತಂದೆ, ತಾಯಿಯ ಮೂಲಕ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಹಾಗೆಯೇ ಎಲ್ಲಾ ಗರ್ಭಿಣಿಯರು ತಪ್ಪದೇ ಎಚ್.ಐ.ವಿ ಸೋಂಕಿತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಗರ್ಭವತಿಯಾದ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಕೇಂದ್ರದಲ್ಲಿ ನೋಂದಣೆ ಮಾಡಿಸಿ, ಮೊದಲ ತ್ರೈಮಾಸಿಕ ಅವಧಿಯಲ್ಲಿ ಪರೀಕ್ಷೆ ಮಾಡಿಸಿ ಮಗುವನ್ನು ಎಚ್.ಐ.ವಿ ಯಿಂದ ರಕ್ಷಿಸಿ. ಶೇ.90ರಷ್ಟು ಎಚ್.ಐ.ವಿ ಸೋಂಕಿರುವವರು ತಮ್ಮ ಎಚ್.ಐ.ವಿ ಸ್ಥಿತಿಯನ್ನು ತಿಳಿದಿರಬೇಕು. ಶೇ 90ರಷ್ಟು ಸೋಂಕಿತರು ಎ.ಆರ್.ಟಿ ಚಿಕಿತ್ಸೆ ಪಡೆದಿರಬೇಕು. 90 ರಷ್ಟು ಎ.ಆರ್.ಟಿ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ವೈರಲ್ ಲೋಡ್ ಪ್ರಮಾಣ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು

ಡಾ.ಶಿವಕುಮಾರ್ ಮಾತನಾಡಿ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣಾ ಬಹಳ ಮುಖ್ಯ ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶ ದಿನ ನಿತ್ಯವು ಆಹಾರದಲ್ಲಿ ಆಯೋಡಿನ್‍ಯುಕ್ತ ಉಪ್ಪನ್ನು ಬಳಸುವುದರಿಂದ ಅಯೋಡಿನ್ ಕೊರತೆ ನಿವಾರಣೆ ಸಾಧ್ಯ ಎಂದು ತಿಳಿಸಿದರು.

ಒಂದು ವರ್ಷದೊಳಗಿನ ಮಕ್ಕಳಿಗೆ 50 ಮೈಕ್ರೋಗ್ರಾಂ, ಆರು ವರ್ಷದೊಳಗಿನ ಮಕ್ಕಳಿಗೆ 90 ಮೈಕ್ರೋಗ್ರಾಂ, ಶಾಲಾ ವಯಸ್ಸಿನ ಮಕ್ಕಳಿಗೆ 120 ಮೈಕ್ರೋಗ್ರಾಂ, ಗರ್ಭಿಣಿ ಬಾಣಂತಿಯರಿಗೆ 200 ಮೈಕ್ರೋ ಗ್ರಾಂ, ವಯಸ್ಕರಿಗೆ 150 ಮೈಕ್ರೋಗ್ರಾಂ ಅಯೋಡಿನ್ ಅವಶ್ಯಕ ಎಂದು ತಿಳಿಸಿದರು

ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ನಿಲೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ, ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಾದ ಗೀತಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಜಗನಾಥ್ ಕ್ರೀಡಾ ಇಲಾಖೆಯ ಸಹಾಯಕ ನಿದೇಶಕರಾದ ಜಯಲಕ್ಷ್ಮಿ ಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಮ್ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಜಿಲ್ಲಾ ಏಡ್ಸ್ ಕಾರ್ಯಕ್ರಮ ಮೇಲ್ವಿಚಾರಕರಾದ ಸುನೀತಾ, ಕಮಲ, ಕಿರಣ್ ಇತರರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *