ಪ್ರೇಮ ಸೌಧ ತಾಜ್ ಮಹಲ್ ವೀಕ್ಷಣೆ ಇನ್ನು ಮುಂದೆ ದುಬಾರಿ

Posted on: February 14, 2018

TAJ

ನವದೆಹಲಿ :  ವಿಶ್ವದ 7 ವಿಸ್ಮಯಗಳಲ್ಲಿ ಒಂದಾದ ಪ್ರೇಮ ಸೌಧ ತಾಜ್ ಮಹಲ್ ಭೇಟಿ ಇನ್ನು ಮುಂದೆ ದುಬಾರಿ ಆಗಿದೆ. ತಾಜ್ ಮಹಲ್ ಆವರಣ ಪ್ರವೇಶಕ್ಕೆ 50 ರೂ. ಶುಲ್ಕವಾದರೆ, 16ನೇ ಶತಮಾನದ ಪ್ರಧಾನ ಸಮಾಧಿ ಮತ್ತು ನೆಲಮಹಡಿಯಲ್ಲಿರುವ ಗೋರಿ ವೀಕ್ಷಿಸಲು ಹೆಚ್ಚುವರಿಯಾಗಿ 200 ರೂಪಾಯಿ ತೆರಬೇಕಾಗಿದೆ.

ತಾಜ್ ಮಹಲ್ ವೀಕ್ಷಣೆಗೆ ಭಾರತೀಯ ಪ್ರವಾಸಿಗರು ಇನ್ನು ಮುಂದೆ ಒಟ್ಟು 250 ರೂಪಾಯಿ ಶುಲ್ಕ ಕೊಡಬೇಕಾಗಿದೆ. ಈ ಪರಿಷ್ಕೃತ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ತಾಜ್ ಮಹಲ್ ವೀಕ್ಷಣೆಗೆ ದಿನನಿತ್ಯ ಸುಮಾರು 40 ರಿಂದ 50 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಒಂದೂವರೆ ಲಕ್ಷದವರೆಗೆ ಪ್ರವಾಸಿಗಳು ಭೇಟಿ ನೀಡುತ್ತಾರೆ.

TAJ MA

ಪ್ರವಾಸಿಗರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರಕ್ಕೆ ಬಂದಿದೆ. ಪ್ರವೇಶ ಚೀಟಿಗೆ ಕೇವಲ 3 ಗಂಟೆ ಸಮಯ ನಿಗದಿ ಪಡಿಸಲಾಗಿದೆ. 3 ಗಂಟೆ ಮೀರಿದರೆ ಮತ್ತೊಂದು ಪ್ರವೇಶ ಚೀಟಿ ಪಡೆಯಬೇಕಾಗುತ್ತದೆ.

ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಸಲಹೆಯಂತೆ ಜನದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ರಾಜ್ಯದ ಸಂಸ್ಕೃತಿ ಸಚಿವ ಮಹೇಶ ಶರ್ಮ ತಿಳಿಸಿದ್ದಾರೆ.

ತಾಜ್ ಮಹಲ್ ಪ್ರವೇಶಕ್ಕಿದ್ದ 40 ರೂ ಶುಲ್ಕವನ್ನು 50 ರೂಪಾಯಿಗೆ ಏರಿಸಲಾಗಿದ್ದು, ಹೆಚ್ಚುವರಿಯಾಗಿ, ಸಮಾಧಿ ವೀಕ್ಷಣೆಗೆ ಪ್ರವೇಶ ಪಡೆಯಲು 200 ರೂಪಾಯಿ ಹೆಚ್ಚಿಸಲು ಸಚಿವಾಲಯ ನಿರ್ಧರಿಸಿದ್ದು, ವಿದೇಶಿ ಪ್ರವಾಸಿಗರಿಗೆ ಈ ಹಿಂದೆ ಇದ್ದ 1250 ರೂ.ಗಳನ್ನೇ ಮುಂದುವರೆಸಲಾಗಿದೆ.
ಉತ್ತರ ಪ್ರದೇಶಕ್ಕೆ ಬರುವ ವಿದೇಶಿ ಪ್ರವಾಸಿಗರ ರಕ್ಷಣೆ ಕುರಿತು ಸಂಸ್ಕೃತಿ ಸಚಿವಾಲಯ, ವಿಮಾನಯಾನ ಮತ್ತು ರಸ್ತೆ ಸಾರಿಗೆ ಸಚಿವರು ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *