ರಾಫ್ಟಿಂಗ್ ಗ್ಯಾಂಗಿನ ದೌರ್ಜನ್ಯಕ್ಕೆ ಅಮಾಯಕ ಯುವಕ ಬಲಿ

Posted on: February 17, 2018

dubare death

ಮಡಿಕೇರಿ : ರಾಫ್ಟಿಂಗ್ ಗ್ಯಾಂಗಿನ ದೌರ್ಜನ್ಯಕ್ಕೆ ಹೈದರಾಬಾದ್ ಮೂಲದ ಯುವಕ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದುಬಾರೆಯಲ್ಲಿ ನಡೆದಿದೆ.

ಹೈದರಾಬಾದಿನಿಂದ ಪ್ರವಾಸಕ್ಕೆಂದು ಮೂರು ಬಸ್ಸುಗಳಲ್ಲಿ ಜಿಲ್ಲೆಗೆ ಬಂದ ತಂಡ, ಗುರುವಾರ  ಪ್ರವಾಸಿ ತಾಣವಾದ ದುಬಾರೆಯಲ್ಲಿ ರಾಫ್ಟಿಂಗ್ ನಲ್ಲಿ ತಲ್ಲೀನರಾಗಿದ್ದ ಸಂದರ್ಭ ಚಿಕ್ಕ ವಿಷಯಕ್ಕೆ ಪ್ರವಾಸಿಗರಿಗೆ ಹಾಗೂ ರಾಫ್ಟಿಂಗ್ ಗೈಡಿನ ನಡುವೆ ಜಗಳವಾಗಿದೆ. ಬಳಿಕ ನದಿಯ ದಡದಲ್ಲಿ ಜಗಳವನ್ನು ಇತ್ಯರ್ಥ ಮಾಡಲು ಪ್ರವಾಸಿಗರು ಮುಂದಾಗುತ್ತಿದ್ದಂತೆ, ರಾಫ್ಟಿಂಗ್ ತಂಡದ ದೊಡ್ಡ ಗುಂಪೊಂದು ಕಲ್ಲು, ದೊಣ್ಣೆ ಸೇರಿದಂತೆ ಇತರ ವಸ್ತುಗಳಿಂದ ಪ್ರವಾಸಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಶುಕ್ರವಾರ ಮರಣ ಹೊಂದಿದ್ದಾನೆ.

ಘಟನೆಯ ಬಳಿಕ ಸ್ಥಳದಲ್ಲಿನ ಸಿಸಿಟಿವಿ ಸಹಾಯದಿಂದ ಪೊಲೀಸರು 7 ಜನರನ್ನು ಬಂಧಿಸಿದ್ದು, ಇದು ಅತ್ಯಂತ ಅಮಾನವೀಯ ಘಟನೆ, ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಎಲ್ಲರನ್ನೂ ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿರುವ ಸಾರ್ವಜನಿಕರು, ಕಳೆದ ಹಲವು ವರ್ಷಗಳಿಂದ ಪ್ರವಾಸಿಗರ ಮೇಲೆ ನಿರಂತರವಾಗಿ ಇಲ್ಲಿನ ರಾಫ್ಟಿಂಗ್ ಗ್ಯಾಂಗ್ ದೌರ್ಜನ್ಯ ಎಸಗುತ್ತಿದ್ದು, ಯಾರೂ ಸಹ ಈ ದುಷ್ಟ ಕೂಟದ ವಿರುದ್ಧ ದೂರು ನೀಡದೆ ಇರುವುದರಿಂದ ಇವತ್ತು ಒಬ್ಬ ಅಮಾಯಕನನ್ನು ಬಲಿ ತೆಗೆದುಕೊಂಡಿದೆ.

ಕೂಡಲೇ ಸರಕಾರ ಮೃತ ಯುವಕನ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಹಾಗೂ ಈ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಇದನ್ನು ತಡೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *