ಬೆಳಗಾವಿಯಲ್ಲಿ ಅನಾವರಣವಾಯ್ತು ದೇಶದ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ

Posted on: March 12, 2018

National-Flag

ಬೆಳಗಾವಿ : ನಗರದ ಪ್ರಸಿದ್ಧ ಕೋಟೆ ಕೆರೆದಡದಲ್ಲಿ ನಿರ್ಮಿಸಿರುವ ದೇಶದ ಅತಿ ಎತ್ತರದ ರಾಷ್ಟ್ರಧ್ವಜಸ್ತಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‍ಜಾರಕಿಹೊಳಿ ಅವರು ಇಂದು ಲೋಕಾರ್ಪಣೆಗೊಳಿಸಿದರು. ಪ್ರಸ್ತುತ ಪಂಜಾಬ್‍ನ ವಾಘಾ ಗಡಿಯಲ್ಲಿ 355 ಅಡಿ ಎತ್ತರದ ರಾಷ್ಟ್ರಧ್ವಜಸ್ತಂಭವಿದ್ದು, ಬೆಳಗಾವಿಯಲ್ಲಿ 360 ಅಡಿ ಎತ್ತರದ ಧ್ವಜಸ್ತಂಭವನ್ನು ನಿರ್ಮಿಸಲಾಗಿದ್ದು, ಉಸ್ತುವಾರಿ ಸಚಿವರು ಅನಾವರಣಗೊಳಿಸಿದರು.

ಧ್ವಜಸ್ತಂಭದ ತುದಿಯಲ್ಲಿ ತ್ರಿವರ್ಣ ಧ್ವಜ 24 ಗಂಟೆ ಹಾಗೂ ವರ್ಷದ 365 ದಿನ ಹಾರಾಡಲಿದೆ. ರಾತ್ರಿಯೂ ಸಾರ್ವಜನಿಕರ ವೀಕ್ಷಣೆಗೆ ಫೋಕಸ್ ಲೈಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಈ ಧ್ವಜಸ್ತಂಭ ನಿರ್ಮಾಣಕ್ಕೆ 1.62 ಕೋಟಿ ರೂ. ನೀಡಲಾಗಿದೆ. 110 ಮೀಟರ್ ಎತ್ತರದ ಈ ಸ್ತಂಭದಲ್ಲಿ 12್ಡ080 ವಿಸ್ತೀರ್ಣದಲ್ಲಿರುವ ರಾಷ್ಟ್ರಧ್ವಜ ವಿದ್ಯುನ್ಮಾನ ಯಂತ್ರದ ಸಹಾಯದಿಂದ ಹಾರಾಡಲಿದೆ.  1.9ಮೀಟರ್ ಡೈಮೇನ್ಷನ್ ಹಾಗೂ 14ಮಿ.ಮೀ. ದಪ್ಪ ಇರುವ ಧ್ವಜಕ್ಕೆ 3.5 ಎಚ್‍ಪಿ ಮೋಟಾರ್ ಅಳವಡಿಸಲಾಗಿದೆ. ಡೆನಿಯರ್ ಪಾಲಿಸ್ಟಾರ್ ಬಟ್ಟೆಯಿಂದ ಧ್ವಜ ಸಿದ್ದಪಡಿಸಲಾಗಿದೆ. ರೋಪ್‍ನ ದಪ್ಪ 8 ಮಿ.ಮೀ. ಹೊಂದಿದ್ದು, 36 ಟನ್ ತೂಕವನ್ನು ಧ್ವಜಸ್ತಂಭ ಹೊಂದಿದೆ. ಪುಣೆ ಮೂಲದ ಬಜಾಜ್ ಸಂಸ್ಥೆ ರಾಷ್ಟ್ರಧ್ವಜ ನಿರ್ಮಾಣದ ಕಾರ್ಯ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಪಿರೋಜ್‍ಸೇಠ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದರ ಉದ್ಘಾಟನೆ ಮಾಡಬೇಕಿತ್ತು. ಆದರೆ, ಅವರು ಚುನಾವಣೆ ಸಿದ್ದತೆಯಲ್ಲಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರೇ ಈ ಕಾರ್ಯ ನೆರವೇರಿಸಿದ್ದಾರೆ ಎಂದು ಅವರು ತಿಳಿಸಿದರು.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *