ಮತದಾರರ ಜಾಗೃತಿ ಕಾರ್ಯಕ್ರಮ; ಇನ್ನಷ್ಟು ಚುರುಕುಗೊಳಿಸಲು ಮಿಶ್ರ ಸೂಚನೆ

Posted on: April 21, 2018

DSC04484ಮಡಿಕೇರಿ : ವಿಧಾನಸಭೆ ಚುನಾವಣೆ ಮತದಾನವು ಮೇ 12 ರಂದು ನಡೆಯಲಿದ್ದು, ಈ ಹಿನ್ನಲೆ ಜಿಲ್ಲೆಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸುವಂತೆ ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸ್ವೀಪ್ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಗರಸಭೆ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶೇಕಡವಾರು ಮತದಾನದ ಪ್ರಮಾಣ ಕಡಿಮೆಯಾಗಿದ್ದು, ಇಂತಹ ಪ್ರದೇಶಗಳಲ್ಲಿ ಹೆಚ್ಚಿನ ಮತದಾನವಾಗಲು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಅವರು ನಿರ್ದೇಶನ ನೀಡಿದರು.DSC04482

ಯುವ ಮತದಾರರಲ್ಲಿ ಜಾಗೃತಿ ಮೂಡಿಸುವುದು, ಆಶುಭಾಷಣ ಸ್ಪರ್ಧೆ ಏರ್ಪಡಿಸುವುದು, ಜಾಥ ಕೈಗೊಳ್ಳುವುದು, ಮನೆ ಮನೆಗೆ ಭೇಟಿ ನೀಡಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡುವುದು, ವಿಚಾರ ಸಂಕಿರಣ ಆಯೋಜಿಸುವುದು, ಸಹಿ ಸಂಗ್ರಹ ಮಾಡುವುದು, ವಿಕಲಚೇತನರಿಂದ ತ್ರಿಚಕ್ರವಾಹನದ ಮೂಲಕ ಬೈಕ್ ರ್ಯಾಲಿ ಏರ್ಪಡಿಸುವುದು, ಜಿಲ್ಲೆಯಲ್ಲಿರುವ ಕೈಗಾರಿಕ ಪ್ರದೇಶಗಳಲ್ಲಿ ಅರಿವು ಮೂಡಿಸುವುದು, ಕಾರ್ಮಿಕರಿಗೆ ಮತದಾನದ ಬಗ್ಗೆ ಮಾಹಿತಿ ನೀಡುವುದು.

ರೇಡಿಯೊ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಬಸ್ ನಿಲ್ದಾಣದಲ್ಲಿ ಮಾಹಿತಿ ನೀಡುವುದು. ಚುನಾವಣಾ ಆಯೋಗ ನೀಡಿರುವ ಮತದಾನದ ಮಹತ್ವ ಕುರಿತ ಸಂದೇಶಗಳನ್ನು ಜಿಲ್ಲೆಯಲ್ಲಿರುವ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಮಾಡಲು ಕ್ರಮವಹಿಸುವುದು, ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪ್ರಶಾಂತ್ ಕುಮಾರ್ ಮಿಶ್ರ ಅವರು ನಿರ್ದೇಶನ ನೀಡಿದರು.

ವಿವಿಧ ಇಲಾಖೆಗಳಿಂದ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಪ್ರತಿನಿತ್ಯ ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿ ಶೇಕಡವಾರು ಮತದಾನ ಹೆಚ್ಚಳಕ್ಕೆ ನಾನಾ ಇಲಾಖೆ ಅಧಿಕಾರಿಗಳು ಕೈಜೋಡಿಸಿ ಕಾರ್ಯಕ್ರಮ ಆಯೋಜಿಸುವಂತೆ ಜಿ.ಪಂ.ಸಿಇಒ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀಕಂಠಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರಾದ ಮಂಜುಳಾ, ಪದವಿ ಪೂರ್ವ ಶಿಕ್ಷಣ ಉಪ ನಿರ್ದೇಶಕರಾದ ಜಯದೇವಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯದೇವಿ ಗಲಗಲಿ, ಪೌರಾಯುಕ್ತರಾದ ಬಿ.ಶುಭ, ತಾ.ಪಂ.ಇಒ ಚೆಟ್ಟಿಯಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್, ಹಿರಿಯ ನಾಗರಿಕರ ಮತ್ತು ವಿಕಚೇತನರ ಕಲ್ಯಾಣ ಅಧಿಕಾರಿ ದೇವರಾಜು, ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸಬೀರ್ ಬಾಷ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ನಗರಸಭೆಯ ಹಿರಿಯ ಆರೋಗ್ಯ ನೀರಿಕ್ಷಕರಾದ ಎಚ್.ಆರ್ ರಮೇಶ್, ಜಿ.ಪಂ.ಸಹಾಯಕ ಸಾಂಖ್ಯಿಕ ಅಧಿಕಾರಿ ನವೀನ್, ಸ್ವೀಪ್ ಕಾರ್ಯಕ್ರಮ ಸಂಯೋಜಕರಾದ ಸೂರಜ್, ಪೆಮ್ಮಯ್ಯ ಅವರು ಮತದಾನ ಮಹತ್ವ ಕುರಿತು ಇದುವರೆಗೆ ಆಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *