ವಿಧಾನಸಭಾ ಚುನಾವಣೆ ಏ.17 ರಂದು ಚುನಾವಣಾ ಆಧಿಸೂಚನೆ ಪ್ರಕಟ ಜಿಲ್ಲಾಧಿಕಾರಿ

Posted on: April 16, 2018

DSC04450
ಮಡಿಕೇರಿ  : ವಿಧಾನಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ 17 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 24 ಕೊನೆಯ ದಿನವಾಗಿದೆ. ಏಪ್ರಿಲ್ 25 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 27 ಕೊನೆಯ ದಿನವಾಗಿದೆ. ಮೇ 12 ರಂದು ಮತದಾನ ನಡೆಯಲಿದೆ. ಮೇ 15 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಏಪ್ರಿಲ್ 17 ರಿಂದ ಏಪ್ರಿಲ್ 24 ರವರಗೆ (ಏಪ್ರಿಲ್ 18 ಮತ್ತು 22 ರಂದು ರಜೆ ದಿನ ಹೊರತುಪಡಿಸಿ) ಅಯಾಯ ದಿನದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರಗೆ ನಾಮಪತ್ರವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಡಿಕೇರಿ ಉಪ ವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಎರಡನೇ ಮಹಡಿ, ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ತಾಲ್ಲೂಕು ತಹಸೀಲ್ದಾರ್ ಕಚೇರಿ, ವಿರಾಜಪೇಟೆಯಲ್ಲಿ ನಾಮಪತ್ರ ಸಲ್ಲಿಸ ಬಹುದಾಗಿದೆ ಎಂದರು.

ನಾಮಪತ್ರಗಳನ್ನು ಸಲ್ಲಿಸಲು ಬೇಕಾದ ಆರ್ಹತೆಗಳು ಮತ್ತು ದಾಖಲೆಗಳ ವಿವರ ಇಂತಿದೆ: ನಾಮಪತ್ರವನ್ನು ನಮೂನೆ 2 ಬಿ ನಲ್ಲಿ ಸಲ್ಲಿಸಬೇಕು. ನಮೂನೆ 26 ರಲ್ಲಿ ಅಫಿಡವಿಟ್ (ರೂ.20 ರ ಛಾಪಾ ಕಾಗದಲ್ಲಿ) ಅಭ್ಯರ್ಥಿಯು ನಾಮಪತ್ರ ಮತ್ತು ಅಫಿಡವೀಟ್‍ನಲ್ಲಿ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು. ಅಫಿಡವೀಟ್‍ನ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿರಬೇಕು. ನೋಟರಿ ಪಬ್ಲಿಕ್‍ರಿಂದ ದೃಢೀಕರಿಸಿರಬೇಕು. ಮತ್ತು ಹೆಚ್ಚುವರಿ ಅಫಿಡವಿಟ್‍ನ್ನು (ಬೇಬಾಕಿ ಬಗ್ಗೆ) ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆಗಳಿಂದ ಬೇಬಾಕಿ ದೃಢೀಕರಣ ಹಾಜರುಪಡಿಸಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ವಿಧಾನಸಭಾ ಮತದಾರರ ಪಟ್ಟಿಯ ದೃಢೀಕೃತ ಪ್ರತಿ ಸಲ್ಲಿಸಬೇಕು. ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ಒಬ್ಬ ಅಭ್ಯರ್ಥಿ 4 ನಾಮಪತ್ರ ಮಾತ್ರ ಸಲ್ಲಿಸಬಹುದಾಗಿದೆ.

ರಾಷ್ಟ್ರೀಯ/ರಾಜ್ಯ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು ಮತ್ತು ನೋಂದಾಯಿತ/ಪಕ್ಷೇತರವಾಗಿದ್ದಲ್ಲಿ 10 ಜನ ಸೂಚಕರು ಮತ್ತು ನೋಂದಾಯಿತ/ ಪಕ್ಷೇತರವಾಗಿದ್ದಲ್ಲಿ 10 ಜನ ಸೂಚಕರ ಸಹಿ ಮಾಡಿರಬೇಕು (ಈ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು).

ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ನಮೂನೆಗಳನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನ ದಿನಾಂಕ 24.04.2018 ರಂದು 3 ಗಂಟೆಯೊಳಗೆ ಸಲ್ಲಿಸಬೇಕು. (ಮೂಲ ಪ್ರತಿ), ಠೇವಣಿ ಹಣ ರೂ.10 ಸಾವಿರ ರೂ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿದ್ದರೆ ರೂ.5 ಸಾವಿರ ಅಭ್ಯರ್ಥಿಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ವಚನ ಸ್ವೀಕರಿಸಬೇಕು. ಚುನಾವಣಾಧಿಕಾರಿಗಳ ಕಚೇರಿಗೆ ಅಭ್ಯರ್ಥಿ ಸೇರಿದಂತೆ 5 ಜನರಿಗೆ ಮಾತ್ರ ಪ್ರವೇಶವಿರುತ್ತದೆ. 2 ಪಾಸ್ ಪೋರ್ಟ್ ಮತ್ತು 2 ಸ್ಟಾಂಪ್ ಸೈಜ್ ಭಾವಚಿತ್ರ. ಚುನಾವಣೆಗಾಗಿ ತೆರದಿರುವ ಬ್ಯಾಂಕ್ ಖಾತೆಯ ಹೊಸ ಪಾಸ್ ಬುಕ್ ಜೆರಾಕ್ಸ್ ಹೊಂದಿರಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು. DSC04443

ಭಾರತದ ಚುನಾವಣಾ ಅಯೋಗವು ಚುನಾವಣಾ ವೀಕ್ಷಕರನ್ನು ನಿಯೋಜಿಸಿದ್ದು, ದೆಹಲಿಯ ಐ.ಎ.ಎಸ್ ಅಧಿಕಾರಿ ಟಿ.ಶ್ರೀಕಾಂತ್ ಅವರು ಸಾಮಾನ್ಯ ವೀಕ್ಷಕರಾಗಿ, ಓರಿಸ್ಸಾದ ಐ.ಪಿ.ಎಸ್ ಅಧಿಕಾರಿ ಡಾ|.ಸತ್ಯಜೀತ್ ನಾಯಕ್ ಅವರು ಪೊಲೀಸ್ ವೀಕ್ಷಕರಾಗಿ, ಮಹಾರಾಷ್ಟ್ರದ ಐ.ಆರ್.ಎಸ್.ಅಧಿಕಾರಿ ಜಯಕುಮಾರ್ ಮೀನಾ ಅವರು ಚುನಾವಣಾ ವೆಚ್ಚ ವೀಕ್ಷಕರಾಗಿ ಅಗಮಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾಹಿತಿ ನೀಡಿದರು.

ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ವೆಚ್ಚ ವೀಕ್ಷಕರಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಪಿ.ಎನ್.ಸುರೇಶ್ ಕುಮಾರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಎಚ್.ಎಸ್.ಪ್ರಕಾಶ್ ಅವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ 2018ರ ಫೆಬ್ರುವರಿ 28 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ಅವಧಿಯಲ್ಲಿ ಏಪ್ರಿಲ್ 14ರ ವರೆಗೆ ಹೊಸದಾಗಿ ನಮೂನೆ-6 ರಡಿ 10,992 ಅರ್ಜಿಗಳು ಸಲ್ಲಿಕೆಯಾಗಿವೆ, ನಮೂನೆ 7ರಡಿ 2377, ನಮೂನೆ 8 ರಡಿ 3421, ಹಾಗೂ ನಮೂನೆ-8 ಎ ರಡಿ 878 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ನಮೂನೆ-6 ರಡಿ 5,074,ನಮೂನೆ- 7ರಡಿ 1,007, ನಮೂನೆ-8 ರಡಿ 1,164 ಮತ್ತು ನಮೂನೆ- 8 ಎ ರಡಿ 601 ಅರ್ಜಿಗಳು ಸಲ್ಲಿಕೆಯಾಗಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-6 ರಡಿ 5,918, ನಮೂನೆ 7ರಡಿ 1,370, ನಮೂನೆ 8 ರಡಿ 2,257 ಮತ್ತು ನಮೂನೆ- 8ಎ ರಡಿ 277 ಅರ್ಜಿಗಳು ಸಲ್ಲಿಕೆಯಾಗಿದೆ.
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ನೋಂದಣಿ ಮಾಡುವ ಬಗ್ಗೆ ಜಿಲ್ಲೆಯ 530 ಮತಗಟ್ಟೆಗಳಲ್ಲಿ ಏಪ್ರಿಲ್ 8 ರಂದು ‘ಮಿಂಚಿನ ನೋಂದಣಿ’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ನಮೂನೆ-6 ರಡಿ 4,407, ನಮೂನೆ -7 ರಡಿ 485, ನಮೂನೆ-8 ರಡಿ 1,161 ಮತ್ತು ನಮೂನೆ- 8ಎ ರಡಿ 170 ಅರ್ಜಿಗಳು ಸಲ್ಲಿಕೆಯಾಗಿವೆ.

ಖಾಸಗಿ ಸಭೆ, ಸಮಾರಂಭಗಳಲ್ಲಿ ಯಾವುದೇ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಗಳ ಕೊಡುಗೆಯನ್ನು ಸ್ವಿಕರಿಸದೇ ಅಥವಾ ರಾಜಕೀಯ ಚಟುವಟಿಕೆಗಳು ಒಳಗೊಳ್ಳದೇ ಇದ್ದಲ್ಲಿ ಹಾಲಿ ಇರುವ ಕಾಯ್ದೆ/ ಮಾರ್ಗಸೂಚಿ ಪ್ರಕಾರ ಮದುವೆ ಇತರೆ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮದ್ಯವನ್ನು ಬಳಸಲು ಅವಕಾಶ ಇದ್ದಲ್ಲಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಕುಗ್ರಾಮಗಳು ಸೇರಿದಂತೆ ಹಾಡಿಗಳಲ್ಲಿ ಮತದಾರರ ಜಾಗೃತಿ ಅಭಿಯಾನ ನಡೆಯುತ್ತಿವೆ. ಹಾಗೆಯೇ 41 ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಏಪ್ರಿಲ್ 27 ವರೆಗೆ ಮತಗಟ್ಟೆ ವ್ಯಾಪ್ತಿಯಲ್ಲಿ ಹಾಗೂ ವಿವಿಧ ಪ್ರದೇಶದಲ್ಲಿ ವಿವಿಪ್ಯಾಟ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಇದುವರೆಗೆ ಎಸ್‍ಎಸ್‍ಟಿ, ಪ್ಲೈಯಿಂಗ್ ಸ್ಕ್ವಾಡ್, ಅಬಕಾರಿ ಹಾಗೂ ಪೊಲೀಸ್ ತಂಡದವರು ಮುಟ್ಟುಗೋಲು ಹಾಕಿರುವ ಪೂರಕ ದಾಖಲೆ ಇಟ್ಟುಕೊಂಡಿರದ ಮದ್ಯ, ನಗದು ಹಾಗೂ ಇತರೆ ಸಾಮಾಗ್ರಿಗಳ ಬಗ್ಗೆ ದಾಖಲಾದ ಪ್ರಕರಣಗಳ ಬಗ್ಗೆ ಇಂತಿದೆ.
ಇದುವರೆಗೆ 6,55,550 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಏಪ್ರಿಲ್ 4 ರಂದು 176 ಸೋಲಾರ್ ಲ್ಯಾಂಪ್‍ಗಳನ್ನು ವಶಪಡಿಕೊಳ್ಳಲಾಗಿದ್ದು 14 ಲಕ್ಷ ರೂ. ಬೆಲೆಬಾಳುವ ಸಾಮಾಗ್ರಿಯಾಗಿದೆ. ಹಾಗೆಯೇ ಇದುವರೆಗೆ 974.42 ಲೀಟರ್ ಮದ್ಯ ವಶವಪಡಿಸಿಕೊಳ್ಳಲಾಗಿದ್ದು, 5,80,347 ರೂ. ಬೆಲೆ ಹೊಂದಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಚುನಾವಣಾ ಶಿರಸ್ತೆದಾರ್ ಪ್ರಕಾಶ್, ಅನಿಲ್ ಕುಮಾರ್ ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *