ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Posted on: May 29, 2018
IMG-20180528-WA0005
ಕುಶಾಲನಗರ :  ಕುಶಾಲನಗರದ ಬಿ.ಎಂ ರಸ್ತೆಯ ಮನೆಯೊಂದರ ಶೌಚಾಲಯದಲ್ಲಿ ವ್ಯಕ್ತಿಯೋರ್ವನು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕುಶಾಲನಗರದ ಬಿ.ಎಂ ರಸ್ತೆಯ ಮನೆಯೊಂದರಲ್ಲಿ ಸುಮಾರು ನಾಲ್ಕೈದು ತಿಂಗಳಿನಿಂದ ಇಲ್ಲಿನ ಸಮೀಪದ ವಾಲ್ನೂರು ತ್ಯಾಗತ್ತೂರು ನಿವಾಸಿ ಸೈದಲವಿ ಎಂಬುವವರ ಮಗನಾದ ಸಮದ್(36) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದು, ಈತನು ವಿವಾಹಿತನಾಗಿದ್ದು ವೃತ್ತಿಯಲ್ಲಿ ಟಿಂಬರ್ ವ್ಯಾಪಾರಿ. ತನ್ನ ವ್ಯಾಪಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದ್ದು.
ನಾಲ್ಕೈದು ದಿನಗಳ ಹಿಂದೆಯೇ ಈತನು ತನ್ನ ಬಾಡಿಗೆ ಮನೆಯ ಶೌಚಾಲಯದಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, ಈತನ ಸಾವಿಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಬಹುಷ್ಯ ಶೌಚಾಲಯಕ್ಕೆ ಹೋಗಿದ್ದ ಸಂದರ್ಭ ಹೃದಯಾಘಾತ ವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇಂದು ಬೆಳಗ್ಗೆಯಿಂದಲೇ ಈತನು ವಾಸಿಸುತ್ತಿದ್ದ ಮನೆಯ ಸುತ್ತಮುತ್ತಲಿನಲ್ಲಿ ದುರ್ವಾಸನೆ ಬೀರುತ್ತಿದ್ದುದ್ದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ ಬೆನ್ನಹಿಂದೆಯೇ ಸ್ಥಳಕ್ಕಾಗಮಿಸಿದ ಕುಶಾಲನಗರ ಠಾಣಾಧಿಕಾರಿ ಹೆಚ್.ಕೆ.ಜಗದೀಶ್ ಹಾಗೂ ಸಿಬ್ಬಂದಿಗಳು, ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿ ಇದ್ದದ್ದನ್ನು ಗಮನಿಸಿ ಒಳ ಹೋಗಿ ನೋಡಿದಾಗ ಕೊಳೆತ ಸ್ಥಿತಿ ಹಾಗೂ ಹುಳುಗಳು ತಿನ್ನುವಂತಹ ಸ್ಥಿತಿಯಲ್ಲಿ ಶೌಚಾಲಯದಲ್ಲಿ ಮೃತದೇಹವು ಕಂಡು ಬಂದಿದೆ.
ಇಂತಹ ದುರ್ನಾತದಿಂದಾಗಿ ಸಾರ್ವಜನಿಕರು ಹಾಗೂ ಸಂಬಂಧಿಕರು ಹತ್ತಿರ ಹೋಗಿ ಶವವನ್ನು ವೀಕ್ಷಿಸಲು ಮುಜುಗರ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಠಾಣಾ ಸಹಾಯಕರಾದ ಮುನೀರ್ ಹಾಗೂ ರೆಹಮಾನ್ ಎಂಬುವವರ ಸಹಾಯದಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದು,  ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಖರ ಮಾಹಿತಿ ಲಭ್ಯವಾಗಲಿದೆ. ಈ ಕುರಿತು ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ರವರು ಪ್ರಕರಣವನ್ನು ದಾಖಲಿಸಿ ಮುಂದಿನ ಕಾನೂನು ಕ್ರಮಕ್ಕೆ ಅಣಿಯಾಗಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *