ಕೊಡಗಿನ ಎಲ್ಲಾ ಮನೆಗಳಿಗೆ ಕೇಂದ್ರದ ಯೋಜನೆ ತಲುಪಿಲ್ಲ ತೆನ್ನಿರ ಮೈನಾ ಟೀಕೆ

Posted on: May 5, 2018

Z-MYNA.1
ಮಡಿಕೇರಿ : ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕೊಡಗಿನ ಇಬ್ಬರು ಬಿಜೆಪಿ ಶಾಸಕರು ಪ್ರಧಾನಿ ಮೋದಿ ಸರ್ಕಾರದ ಯೋಜನೆಗಳಿಂದ ಮತಯಾಚನೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕೊಡಗಿನಲ್ಲಿ 1,42,716 ಕುಟುಂಬಗಳಿದ್ದು, ಇವುಗಳಲ್ಲಿ ಒಂದು ಕುಟುಂಬಕ್ಕಾದರೂ ಕೇಂದ್ರದ ಯೋಜನೆಗಳು ಸರಿಯಾಗಿ ತಲುಪಿವೆಯೇ ಎಂಬುವುದನ್ನು ಸ್ಪಷ್ಟಪಡಿಸಲಿ ಎಂದು ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರಾ ಮೈನಾ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಸುದೀರ್ಘ ಅವಧಿಯವರೆಗೆ ಶಾಸಕರಾಗಿದ್ದು, ಏನನ್ನೂ ಮಾಡಲಾಗದೆ ಇದೀಗ ಮೋದಿ ಜಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಜಿಲ್ಲೆಯ ಮತದಾರರು ಯಾವ ಕಾರಣಕ್ಕಾಗಿ ಇವರನ್ನು ಪುನರಾಯ್ಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕೊಡಗು ಜಿಲ್ಲೆಯ ಎಲ್ಲಾ ಕುಟುಂಬಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಫಲಾನುಭವಿಗಳೇ ಆಗಿದ್ದಾರೆ. ಸುಮಾರು 33,963 ಕುಟುಂಬಗಳು ಸಾಲಮನ್ನಾದ ಪ್ರಯೋಜನ ಪಡೆದುಕೊಂಡಿದ್ದಾರೆ.

ಅನ್ನಭಾಗ್ಯದ ಫಲಾನುಭವಿಗಳು 91,422 ಕುಟುಂಬಗಳು, ವಿದ್ಯಾರ್ಥಿ ವೇತನ 1,30,438 ವಿದ್ಯಾರ್ಥಿಗಳು, ರಾಜೀವ್ ಗಾಂಧಿ ವಿದ್ಯುತ್‍ಚ್ಛಕ್ತಿ ಯೋಜನೆ 229 ಗ್ರಾಮದ ಕುಟುಂಬಗಳು, ಗ್ರಾಮೀಣ ವಸತಿ ಯೋಜನೆಯಡಿ ಮನೆ ಪಡೆದ 8,971 ಕುಟುಂಬಗಳು, ಅಕ್ರಮ ಸಕ್ರಮ ಯೋಜನೆಯಲ್ಲಿ ಜಾಗದ ಹಕ್ಕು ಪಡೆದ 18,285 ಕುಟುಂಬಗಳು, 94.ಸಿ ಮತ್ತು 94 ಸಿಸಿ ಯೋಜನೆಯಲ್ಲಿ ಮನೆಹಕ್ಕು ಪಡೆದ 13,364 ಕುಟುಂಬಗಳು, 104 ಬಾಪೂಜಿ ಸೇವಾ ಕೇಂದ್ರದಲ್ಲಿ ಪ್ರತಿದಿನ 100ಕ್ಕೂ ಹೆಚ್ಚು ಸೇವೆಗಳನ್ನು ಪಡೆಯುತ್ತಿರುವ ಕುಟುಂಬಗಳು ಸೇರಿದಂತೆ ಸರ್ವ ಜನರು ಸಿದ್ದರಾಮಯ್ಯ ಅವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದು ತೆನ್ನಿರ ಮೈನಾ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳು ಕೂಡ ಅಭಿವೃದ್ಧಿಯನ್ನು ಕಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಸೌಲಭ್ಯವನ್ನು ಪಡೆಯದ ಒಂದು ಮನೆಯನ್ನಾದರೂ ಇಬ್ಬರು ಬಿಜೆಪಿ ಶಾಸಕರು ಹುಡುಕಿ ಕೊಡಲಿ ಎಂದು ತೆನ್ನಿರಾ ಮೈನಾ ಒತ್ತಾಯಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *