ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,33,846 ಮಂದಿ ಮತದಾರರು

Posted on: May 5, 2018

IMG-20180504-WA0004
ಮಡಿಕೇರಿ : ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ 4,33,846 ಮಂದಿ ಮತದಾರರು ಇದ್ದಾರೆ. ಇವರಲ್ಲಿ 2,16,112 ಮಂದಿ ಪುರುಷರು ಮತ್ತು 2,17,717 ಮಂದಿ ಮಹಿಳಾ ಮತದಾರರು, ಹಾಗೆಯೇ 17 ಮಂದಿ ಇತರೆ ಮತದಾರರು ಇದ್ದಾರೆ. ಹೊಸ ಮತದಾರರು 8,823 ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,937 ಮಂದಿ ಮತದಾರರು ಇದ್ದು, ಇವರಲ್ಲಿ 1,07,532 ಮಂದಿ ಪುರುಷ ಮತದಾರರು ಹಾಗೂ 1,09,399 ಮಂದಿ ಮಹಿಳಾ ಮತದಾರರು, ಹಾಗೆಯೇ 6 ಮಂದಿ ಇತರೆ ಮತದಾರರು ಇದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,16,909 ಮಂದಿ ಮತದಾರರು ಇದ್ದು, 1,08,580 ಮಂದಿ ಪುರುಷ ಮತ್ತು 1,08,318 ಮಹಿಳಾ ಮತದಾರರು, ಹಾಗೆಯೇ 11 ಮಂದಿ ಇತರೆ ಮತದಾರರು ಇದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಗುರುತಿನ ಚೀಟಿ ಇಲ್ಲದೇ ಇದ್ದರೆ, ಮಾನ್ಯತೆ ಪಡೆದ 12 ಬಗೆಯ ಯಾವುದಾರೂ ಒಂದು ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. IMG-20180504-WA0003

ಪಾಸ್‍ಪೋರ್ಟ್, ಚಾಲನಾ ಪರವಾನಗಿ ಪತ್ರ, ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯು ವಿತರಿಸಿರುವ ಭಾವಚಿತ್ರವಿರುವ ಪಾಸ್‍ಬುಕ್, ಪಾನ್‍ಕಾರ್ಡ್, ನರೇಗಾ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಆರೋಗ್ಯ ವಿಮಾ ಚೀಟಿ, ಆರ್‍ಜಿಐ ವತಿಯಿಂದ ನೀಡಿರುವ ಚೀಟಿ, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಚುನುವಾಣೆ ಆಯೋಗ ನೀಡುವ ವೋಟರ್ ಸ್ಲಿಪ್, ಎಂಪಿ, ಎಂಎಲ್‍ಎ ಮತ್ತು ಎಂಎಲ್‍ಸಿ ಗಳಿಗೆ ನೀಡಿರುವ ಕಾರ್ಡ್‍ಗಳು ಮತ್ತು ಆಧಾರ್ ಕಾರ್ಡ್ ಹೀಗೆ 12 ರೀತಿಯ ಕಾರ್ಡ್‍ಗಳಲ್ಲಿ ಯಾವುದರೂ ಒಂದನ್ನು ತೋರಿಸಿ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ. IMG-20180504-WA0008

ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ:-ಭಾರತ ಚುನಾವಣಾ ಆಯೋಗವು ವಿದ್ಯುನ್ಮಾನ ಮತ ಯಂತ್ರದಲ್ಲಿನ ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ಜೊತೆಗೆ ಈ ಬಾರಿ ವಿವಿಪ್ಯಾಟ್‍ನ್ನು ಪರಿಚಯಿಸುತ್ತಿದೆ.

ಮತದಾರರು ತಾವು ಮತವನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ನಾನಾ ಮತಗಟ್ಟೆಗಳ ವ್ಯಾಪ್ತಿಗೆ ನಿಯೋಜಿಸಿರುವ ಸೆಕ್ಟರ್ ಅಧಿಕಾರಿಗಳು ವಿವಿಪ್ಯಾಟ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸುತ್ತಿರುವುದು ವಿಶೇಷವಾಗಿದೆ.
ಮತ ಖಾತ್ರಿಗೆ ವಿವಿಪ್ಯಾಟ್: ಚುನಾವಣಾ ಪ್ರಕ್ರಿಯೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ವ್ಯವಸ್ಥಿತ ಮತ್ತು ಜಾಗೃತಿ ಸಮಿತಿ(ಸ್ವೀಪ್) ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆಗಳು ನಡೆಯುತ್ತಿವೆ.

ಮತದಾರ ಮತದಾನ ಮಾಡುವ ಸಂದರ್ಭದಲ್ಲಿ ತಾನು ಮತ ಚಲಾಯಿಸಬೇಕೆಂದಿರುವ ಚಿಹ್ನೆ ಮತ್ತು ಹೆಸರಿನ ಪಕ್ಕದಲ್ಲಿರುವ ನೀಲಿ ಬಣ್ಣ ಬಟನ್ ಒತ್ತಿದ ಕೂಡಲೇ ಕೆಂಪು ದೀಪ ಬೆಳಗುತ್ತದೆ. ಇವಿಎಂಗೆ ಅಳವಡಿಸಿರುವ ವಿವಿಪ್ಯಾಟ್ ಯಂತ್ರದ ಪರದೆಯಲ್ಲಿ ಮತದಾರನು ತಾನು ಮತ ಚಲಾಯಿಸಿರುವ ಚಿಹ್ನೆ ಮತ್ತು ಹೆಸರಿನ ವಿವರವುಳ್ಳ ಚೀಟಿಯನ್ನು 7 ಕ್ಷಣಗಳ ಕಾಲ ಡಿಸ್‍ಪ್ಲೇ ಸೆಕ್ಷನ್‍ನಲ್ಲಿ ವೀಕ್ಷಿಸಬಹುದು. ತದನಂತರ ಆ ಚೀಟಿಯು ಡ್ರಾಪ್ ಬಾಕ್ಸ್ ಒಳಗೆ ತುಂಡಾಗಿ ಬೀಳುತ್ತದೆ (ಈ ಚೀಟಿಯನ್ನು ಮತದಾರ ಪಡೆಯುವಂತಿಲ್ಲ). IMG-20180504-WA0007

ಮತದಾರ, ತಾನು ಆರಿಸಬೇಕೆಂದಿರುವ ವ್ಯಕ್ತಿ/ಪಕ್ಷಕ್ಕೆ ಮತ ಚಲಾವಣೆಯಾಗಿರುವುದನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆ. ಬ್ಯಾಲೆಟ್ ಚೀಟಿ ಕಾಣಿಸದಿದ್ದರೆ ಹಾಗೂ ಬೀಪ್ ಶಬ್ದ ಕೇಳಿಸದಿದ್ದರೆ ಮತದಾರನು ಮತಗಟ್ಟೆಯ ಅಧ್ಯಕ್ಷಾಧಿಕಾರಿಯನ್ನು ಸಂಪರ್ಕಿಸಬಹುದು.

ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮತದಾರರ ಜಾಗೃತಿಗೆ ಎಲ್ಲ ಕ್ರಮಗಳನ್ನು ಸ್ವೀಪ್ ಮೂಲಕ ಚುನಾವಣಾ ಆಯೋಗ ಕೈಗೊಂಡಿದೆ. ಚುನಾವಣಾ ಆಯೋಗವು ಸ್ವೀಪ್ ಮುಖಾಂತರ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಔಚಿತ್ಯಪೂರ್ಣ ಮತ್ತು ನ್ಯಾಯೋಚಿತ ಮತದಾನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಮಿಶ್ರ ಅವರು ತಿಳಿಸಿದ್ದಾರೆ.
ಮತದಾನಕ್ಕೆ 08 ದಿನ ಮಾತ್ರ ಬಾಕಿ(ಮತದಾನಕ್ಕೆ ಕೌಂಟ್‍ಡೌನ್-08):-ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೌಂಟ್‍ಡೌನ್ ಶುರುವಾಗಿದೆ. ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ 8 ದಿನ ಮಾತ್ರ ಬಾಕಿ ಇದೆ.

ಈ ಸಂಬಂಧ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಆ ದಿಸೆಯಲ್ಲಿ ಗುರುವಾರ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ನಗರದ ಗೌಳಿಬೀದಿ, ಹೊಸ ಬಡಾವಣೆ, ಕೊಹಿನೂರು ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಕೋರಿದರು.

ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕು. ಹಾಗಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಶೇಕಡವಾರು ಮತದಾನವಾಗಲು ತಪ್ಪದೇ ಅರ್ಹರೆಲ್ಲರೂ ಮತ ಚಲಾಯಿಸಬೇಕಿದೆ ಎಂದು ಜಿ.ಪಂ.ಸಿಇಒ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಮತದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನದ ಜಾಗೃತಿ ಅಭಿಯಾನದಲ್ಲಿ ದಿಶಾ ಸಂಸ್ಥೆಯ ಸಂಯೋಜಕರಾದ ಹೇಮಂತ್ ಇತರರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *