ಕ್ರಿಕೆಟ್‌ನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Posted on: June 18, 2018

Silhouette of a running Player to take a run on creative abstrac
ಬೆಂಗಳೂರು : ಕ್ರಿಕೆಟ್‌ ಆಟದಲ್ಲಿ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಜೆ.ಸಿ.ನಗರದಲ್ಲಿ ನಡೆದಿದೆ.

ಮಣಿಕಂಠ ಅಲಿಯಾಸ್‌ ದೊಡ್ಡಕಾಟು (27) ಕೊಲೆಯಾದ ಯುವಕ. ಶ್ರೀರಾಮನಗರದ ಗೆಳೆಯರ ಬಳಗದ ನಿವಾಸಿಯಾಗಿದ್ದ ಈತ, ಸ್ನೇಹಿತರ ಜತೆ ಕ್ರಿಕೆಟ್‌ ಆಡಲು ಹೋಗಿದ್ದ. ಆಟ ಆಡುವ ವೇಳೆ ಎದುರಾಳಿ ತಂಡದ ಸದಸ್ಯನ ಜತೆ ಜಗಳ ನಡೆದು ಅದು ಹೊಡೆದಾಟಕ್ಕೂ ತಿರುಗಿತ್ತು. ಇದೇ ಸೇಡಿನಿಂದ ಸಂಜೆ ಆರು ಗಂಟೆ ವೇಳೆಗೆ ಗ್ಯಾಂಗ್‌ ಜತೆಗೆ ಬಂದ ದುಷ್ಕರ್ಮಿ ಕೊಲೆ ಮಾಡಿ ಪರಾರಿ ಆಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕ್ರಿಕೆಟ್‌ ಸ್ಕೋರ್‌ ವಿಚಾರಕ್ಕೆ ಭಾನುವಾರ ಜಗಳ ನಡೆದಿತ್ತು. ಜಗಳದ ವೇಳೆ ಮಣಿಕಂಠ ಒಬ್ಬಾತನ ಮೇಲೆ ಹಲ್ಲೆ ನಡೆಸಿದ್ದ. ಆನಂತರ ಜತೆಗಿದ್ದವರೆಲ್ಲಾ ಸೇರಿ ಜಗಳ ಬಿಡಿಸಿ ಕಳುಹಿಸಿದ್ದರು. ಆದರೆ ಸಂಜೆ ಆರು ಗಂಟೆ ವೇಳೆಗೆ ತನ್ನ ಗ್ಯಾಂಗ್‌ ಜತೆ ಬಂದ ಎದುರಾಳಿ ತಂಡದ ಸದಸ್ಯ ಮಣಿಕಂಠನನ್ನು ಜೆ.ಸಿ.ನಗರದ 5ನೇ ತಿರುವಿಗೆ ಬರುವಂತೆ ಕರೆದಿದ್ದ. ತಂಡದೊಂದಿಗೆ ಬಂದಿರುವುದರ ಬಗ್ಗೆ ಮಾಹಿತಿ ಇಲ್ಲದ ಈತ ಅಲ್ಲಿಗೆ ಹೋಗಿದ್ದ. ತಕ್ಷಣ ಎದುರಾಳಿ ಗ್ಯಾಂಗ್‌ ಮಚ್ಚು ಮತ್ತು ಲಾಂಗ್‌ಗಳಿಂದ ಕೊಲೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದರು.

ಈ ಸಂಬಂಧ ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಕೊಲೆ ಮಾಡಿದವರ ಬಗ್ಗೆ ಪ್ರಾಥಮಿಕ ಹಂತದ ಮಾಹಿತಿ ಸಿಕ್ಕಿದೆ. ಅವರೆಲ್ಲ ಎಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಬಗ್ಗೆಯೂ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *