ಗಾಳಿಬೀಡು ಶಿಕ್ಷಕರಿಗೆ ಸನ್ಮಾನ  ಸರಕಾರಿ ಶಾಲೆಗಳ ಸಾಧನೆಗೆ ಶಿಕ್ಷಕರ ಪರಿಶ್ರಮವೇ ಕಾರಣ ಲೆಕ್ಕಪರಿಶೋದಕ ಟಿ.ಕೆ.ಸುಧೀರ್ ಅಭಿಪ್ರಾಯ

Posted on: June 19, 2018

Z SANMANA 1 (2)
ಮಡಿಕೇರಿ  : ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರಕಾರಿ ಶಾಲೆಗಳು ಶೇ. 100 ರಷ್ಟು ಫಲಿತಾಂಶ ನೀಡುವ ಮೂಲಕ ಸ್ಪರ್ಧೆಯೊಡ್ಡುತ್ತಿರುವುದು ಶ್ಲಾಘನೀಯವೆಂದು ಅತ್ತೂರಿನ ಜ್ಞಾನಗಂಗಾ ಶಾಲೆಯ ಧರ್ಮದರ್ಶಿಗಳೂ ಹಾಗೂ ಖ್ಯಾತ ಲೆಕ್ಕಪರಿಶೋದಕರಾದ ಟಿ.ಕೆ.ಸುಧೀರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸಿದ ಗಾಳಿಬೀಡಿನ ಸರಕಾರಿ ಪ್ರೌಢಶಾಲೆಯ ಸಾಧನೆಗೆ ಕಾರಣಕರ್ತರಾದ ಶಿಕ್ಷಕ ವೃಂದವನ್ನು ಸನ್ಮಾನಿಸುವ ಕಾರ್ಯಕ್ರಮ ಎಸ್.ಎನ್.ಡಿ.ಪಿ ಮಡಿಕೇರಿ ತಾಲ್ಲೂಕು ಘಟಕದ ವತಿಯಿಂದ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಟಿ.ಕೆ.ಸುಧೀರ್ ಶೈಕ್ಷಣಿಕ ಸಾಧನೆಗೆ ಪರಿಶ್ರಮ ಮುಖ್ಯವೆಂದರು. ಇಂದಿನ ಸರ್ಕಾರಿ ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ಬರಲು ಶಾಲೆಯ ಶಿಕ್ಷಕರ ಶ್ರಮವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಶಿಕ್ಷಕರ ಕಾರ್ಯವನ್ನು ಸ್ಮರಿಸಿ ಸನ್ಮಾನಿಸುವ ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ನಿತ್ಯ ನಡೆಯಬೇಕೆಂದರು.
ನಗರಸಭಾ ಸದಸ್ಯರಾದ ಕೆ.ಎಸ್.ರಮೇಶ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಶಿಕ್ಷಕರ ಪರಿಶ್ರಮವನ್ನು ಸಂಘ, ಸಂಸ್ಥೆಗಳು ಹಾಗೂ ಪೋಷಕರು ಗೌರವದಿಂದ ಕಾಣಬೇಕೆಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ಮಾತನಾಡಿ ದಸಂಸ ಯು ಕಳೆದ ಅನೇಕ ವರ್ಷಗಳಿಂದ ಶಿಕ್ಷಕರನ್ನು ಸನ್ಮಾನಿಸುತ್ತಾ, ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು. ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಮತ್ತು ಉನ್ನತ ಹುದ್ದೆಯಲ್ಲಿರುವ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಋಣ ತೀರಿಸುವ ಕಾರ್ಯ ಮಾಡಿದಾಗ ಶಾಲೆಗಳ ಉದ್ಧಾರ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಅತಿಥಿಗಳು ಶಿಕ್ಷಕ ವೃಂದವನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಎಸ್.ಎನ್.ಡಿ.ಪಿ. ಉಪಾಧ್ಯಕ್ಷರಾದ ಮಾದವನ್, ಕಾರ್ಯದರ್ಶಿ ಸುಜಾತ, ಶಿವಾರಾಮ ಮತ್ತಿತರರು ಪಾಲ್ಗೊಂಡಿದ್ದರು. ಎಸ್.ಎನ್.ಡಿ.ಪಿ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ವಾಸುದೇವ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *