ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಿತೂರಿ ಸಂಘಟನಾ ಕಾರ್ಯದರ್ಶಿ ಧರ್ಮಪ್ಪ ಆರೋಪ

Posted on: June 19, 2018

JDS_flag
ಮಡಿಕೇರಿ  : ದಕ್ಷ ಹಾಗೂ ಪ್ರಮಾಣಿಕವಾಗಿ ಪಕ್ಷವನ್ನು ಬೆಳೆಸುತ್ತಾ ಬರುತ್ತಿರುವ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಮೇರಿಯಂಡ ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಕೆಲವರು ತೆರೆಯ ಮರೆಯಲ್ಲಿ ಒತ್ತಡ ಹೇರುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಬಿ.ಎಂ.ಧರ್ಮಪ್ಪ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪಕ್ಷದೊಳಗಿನ ಕೆಲವು ಸ್ವಾರ್ಥಸಾಧಕರು ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೈಬಿಡುವಂತೆ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಲ್ಲಿ ಒತ್ತಡ ಹೇರುತ್ತಿರುವುದು ತನ್ನ ಗಮನಕ್ಕೆ ಬಂದಿದ್ದು, ಈ ರೀತಿಯ ಷಡ್ಯಂತರವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

ಸಂಕೇತ್ ಪೂವಯ್ಯ ಅವರ ಶ್ರಮದ ಫಲವಾಗಿ ಕೊಡಗಿನಲ್ಲಿ ಜೆಡಿಎಸ್ ಮತದಾರರ ಸಂಖ್ಯೆಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಜಿಲ್ಲೆಯ ಯಾವುದೇ ಪ್ರದೇಶಗಳಲ್ಲಿ ರೈತರು, ಆದಿವಾಸಿಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿದಾಗ ಸ್ಥಳಕ್ಕೆ ತೆರಳಿ ತಮ್ಮ ಸ್ವಂತ ಹಣದಿಂದ ಪರಿಹಾರ ನೀಡುವ ಸಂಕೇತ್ ಪೂವಯ್ಯ ಪಕ್ಷಕ್ಕೆ ಅನಿವಾರ್ಯವಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬಾರದು ಎಂದು ಧರ್ಮಪ್ಪ ಒತ್ತಾಯಿಸಿದ್ದಾರೆ.

ಡಿ.ವೈ.ಎಸ್.ಪಿ ಗಣಪತಿ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಸಂಕೇತ್ ಪೂವಯ್ಯ ಮುಂಚೂಣಿಯಲ್ಲಿದ್ದು, ಶಕ್ತಿಮೀರಿ ಶ್ರಮಿಸಿದ್ದಾರೆ. ಅಲ್ಲದೆ ಜಿಲ್ಲೆಯ ಎಲ್ಲಾ ಜನಾಂಗ ಬಾಂಧವರೊಂದಿಗೆ ಸೌಹಾರ್ದತೆಯಿಂದ ವರ್ತಿಸುವ ಜನಾನುರಾಗಿ ವ್ಯಕ್ತಿತ್ವದ ಸಂಕೇತ್ ಅವರ ಸೇವೆ ಪಕ್ಷಕ್ಕೆ ಅನಿವಾರ್ಯವಾಗಿದೆ ಎಂದರು.

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿ ಅಭ್ಯರ್ಥಿ ಬಿ.ಎ.ಜೀವಿಜಯ ಅವರಿಂದ ಹಣ ಪಡೆದುಕೊಂಡು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಕೆಲವರು ಅವರ ಸೋಲಿಗೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿರುವ ಧರ್ಮಪ್ಪ, ಎಲ್ಲವನ್ನೂ ತಾವು ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸುವುದಾಗಿ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *