ಯೋಗದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ…?

Posted on: June 21, 2018

Yoga nw
“ಯೋಗ” ಭಾರತವು ವಿಶ್ವಕ್ಕೆ ನೀಡಿರುವ ಒಂದು ಅಮೂಲ್ಯವಾದ ಕೊಡುಗೆ ಎಂದು ಹೇಳಿದರೆ ತಪ್ಪಾಗಲಾರದು. ಈಗ ಇದು ವಿಶ್ವ ಪಾರಂಪರಿಕ ಕಲೆಯಾಗಿ ಪರಿಗಣಿಸಲ್ಪಟ್ಟಿದೆ. 2015 ನೇ ಇಸವಿಯ ಜೂನ್ 21 ಅನ್ನು ವಿಶ್ವ ಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದ್ದು ಭಾರತೀಯ ಇತಿಹಾಸದಲ್ಲಿಯೇ ಅತ್ಯಂತ ಹೆಮ್ಮೆಯ ವಿಷಯವಾಗಿ ದಾಖಲಾಯಿತು. ಯೋಗದ ಪ್ರಯೋಜನಗಳನ್ನು ವಿಶ್ವದಾದ್ಯಂತ ಇರುವ ಜನರು ಪಡೆದುಕೊಳ್ಳಬೇಕು ಮತ್ತು ಅವರಿಗೂ ಯೋಗ ದೊರೆಯಬೇಕು ಎಂಬ ಉದ್ದೇಶದಿಂದ ಇದನ್ನು ಜೂನ್ 21 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ.

ಯೋಗವು 6,000 ವರ್ಷಗಳಷ್ಟು ಹಳೆಯದಾದ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕತೆಯನ್ನು ತನ್ನಲ್ಲಿ ಒಳಗೊಂಡಿರುವ ಒಂದು ವಿಶಿಷ್ಟ ವ್ಯಾಯಾಮವಾಗಿದೆ. ಮಹಾಮುನಿ ಪತಂಜಲಿಯನ್ನು ಯೋಗದ ಪಿತಾಮಹ ಎಂದು ಕರೆಯುತ್ತಾರೆ. ಕ್ರಿ.ಪೂ.5 ನೇ ಶತಮಾನದಲ್ಲಿ ಈ ಮುನಿ ಬದುಕಿದ್ದನು ಎಂದು ಊಹಿಸಲಾಗಿದೆ. ಈತನು “ಯೋಗ ಸೂತ್ರಗಳು” ಎಂಬ ಪುಸ್ತಕವನ್ನು ಬರೆದಿದ್ದನು – ಇದು ಯೋಗದ ಕುರಿತಾದ ಸೂತ್ರಗಳು, ಆಸನದ ಮಾಡುವ ಬಗೆ ಮತ್ತು ಪ್ರಯೋಜನಗಳ ಕುರಿತಾಗಿ ತಿಳಿಸಿಕೊಡುತ್ತದೆ.surya namaskar

’ಯೋಗ’ ಎಂಬ ಪದವು ಸಂಸ್ಕೃತದ ’ಯುಜ್’ ಎಂಬ ಪದದಿಂದ ರೂಪುಗೊಂಡಿದೆ. ಇಲ್ಲಿ ’ಯುಜ್’ ಎಂದರೆ ’ಸೇರು/ಕೂಡು’ ಎಂದರ್ಥ. ಆಧ್ಯಾತ್ಮಿಕದಲ್ಲಿ ಇದನ್ನು “ಲೀನವಾಗು” ಎಂದರೆ ಆತ್ಮ ಪ್ರಜ್ಞೆಯನ್ನು ವಿಶ್ವದ ಪ್ರಜ್ಞೆಯೊಂದಿಗೆ ಲೀನಗೊಳಿಸು ಎಂಬರ್ಥದಲ್ಲಿ ಬಳಸಲಾಗುತ್ತದೆ. ಪ್ರಾಯೋಗಿಕವಾಗಿ ಯೋಗ ಎಂದರೆ ಮನಸ್ಸು, ದೇಹ ಮತ್ತು ಭಾವನೆಗಳನ್ನು ಆಸನ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಮಾಡುವ ಮೂಲಕ ’ಸಮತೋಲನ’ದಲ್ಲಿಡುವುದು ಎಂದು ಸೂಚಿಸುತ್ತದೆ. ಬಹುತೇಕ ಮಂದಿ ಯೋಗ ಎಂದರೆ ದೈಹಿಕ ವ್ಯಾಯಾಮ ಅಥವಾ ಉಸಿರಾಟವನ್ನು ನಿಯಂತ್ರಿಸುವ ಕ್ರಿಯೆ ಮತ್ತು ಅಲೌಕಿಕ ಶಕ್ತಿಗಳನ್ನು ಮಾಡಿ ತೋರಿಸುವ ಕಲೆಯೆಂದು ತಿಳಿದುಕೊಂಡಿದ್ದಾರೆ. ಆದರೆ ಯೋಗ ಎಂಬುದು “ಒಂದು ಜೀವನ ಮಾರ್ಗ”, ’ಆರೋಗ್ಯ ಮತ್ತು ಯೋಗಕ್ಷೇವನ್ನು ಕಾಪಾಡಲು ವ್ಯಕ್ತಿಯೊಬ್ಬ ಮಾಡುವ ಕ್ರಿಯೆ ಮತ್ತು ’ ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಜ್ಞಾನ ಪಡೆದುಕೊಳ್ಳುವ ಮಾರ್ಗ ಸಹ ಇದಾಗಿದೆ”.

pranayama

ಯೋಗವು ಈ ಕೆಳಕಂಡ ಕಾರಣಗಳಿಗಾಗಿ ಜನಪ್ರಿಯಗೊಂಡಿದೆ.

ಶಿಕ್ಷಣ : ಯೋಗವು ವ್ಯಕ್ತಿಗೆ ಶಾಂತತೆಯನ್ನು, ಏಕಾಗ್ರತೆಯನ್ನು ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಹಾಗು ಮಕ್ಕಳಿಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಲವಾರು ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಯೋಗವನ್ನು ತಮ್ಮ ದೈನಂದಿನ ಪಠ್ಯಕ್ರಮಗಳ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ.

ಆರೋಗ್ಯ : ಯೋಗವು ಮನಸ್ಸು ಮತ್ತು ದೇಹಗಳಿಗೆ ಔಷಧವನ್ನು ನೀಡುವ ಒಂದು ಅಭೂತಪೂರ್ವವಾದ ಕ್ರಿಯೆಯಾಗಿರುತ್ತದೆ. ಆದ್ದರಿಂದ ಹಲವಾರು ಆಸ್ಪತ್ರೆಗಳು ಯೋಗವನ್ನು ತಮ್ಮ ವೈದ್ಯಕೀಯ ಉಪಚಾರದ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ವೈದ್ಯರು ಸಹ ಯೋಗವನ್ನು ಮಾಡಲು ರೋಗಿಗಳಿಗೆ ಸಲಹೆಯನ್ನು ನೀಡುತ್ತಾರೆ.

ಒತ್ತಡವನ್ನು ನಿವಾರಿಸುತ್ತದೆ : ಆಧುನಿಕ ಜೀವನವು ಹಲವಾರು ಸವಲತ್ತುಗಳ ಜೊತೆಗೆ ಆತಂಕ ಮತ್ತು ಉದ್ವೇಗಗಳನ್ನು ಸಹ ನೀಡಿದೆ. ಇವುಗಳು ವ್ಯಕ್ತಿಯ ಜೀವನವನ್ನು ಹಾಳು ಮಾಡಿಬಿಡುತ್ತವೆ. ಇವುಗಳು ಒತ್ತಡವನ್ನುಂಟು ಮಾಡಿ, ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಿಂದ ಹೊರಬರಲು ಯೋಗವು ಉತ್ತಮ ಸಾಧನವಾಗಿರುತ್ತದೆ.

ನಿಸ್ವಾರ್ಥತೆ : ಇಂದಿನ ಕಾಲದಲ್ಲಿ ವ್ಯಕ್ತಿಗಳು ಹಣ, ಲೋಭ ಮತ್ತು ಸ್ವಾರ್ಥದ ಹಿಂದೆ ಸಾಗುತ್ತಾರೆ. ಯೋಗವು ಇವುಗಳ ವಿರೋಧಿಯಾಗಿದ್ದು, ಮನುಷ್ಯನನ್ನು ಇದರಿಂದ ವಿಮುಖರನ್ನಾಗಿಸುತ್ತದೆ. ಯೋಗವು ತೃಪ್ತಿಯನ್ನು ನೀಡುತ್ತದೆ ಮತ್ತು ವಿಶ್ವವನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಹೀಗೆ ನಾವು ಸಮಾಜದಲ್ಲಿ ಇತರರನ್ನು ಅರ್ಥ ಮಾಡಿಕೊಳ್ಳಲು ಯೋಗವು ನಮಗೆ ಸಹಕರಿಸುತ್ತದೆ.

ಯೋಗ ಈಗ ಕೇವಲ ಭಾರತೀಯರಿಗೆ ಮಾತ್ರ ಸ್ವಂತವಲ್ಲ, ಇದು ಭಾರತದ ಗಡಿಯನ್ನು ದಾಟಿ ವಿಶ್ವದೆಲ್ಲೆಡೆ ತನ್ನ ಪರಿಮಳವನ್ನು ಮತ್ತಷ್ಟು ಪಸರಿಸುತ್ತಾ ಸಾಗುತ್ತಿದೆ. ಒಂದು ದಿನ ಯೋಗ ಮಾಡಿದರೆ ಲವಲವಿಕೆ ಬರುತ್ತದೆ, ಅದೇ ಒಂದು ವಾರ ಮಾಡಿದರೆ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಕಾಣಿಸಿಕೊಳ್ಳುತ್ತದೆ, ಒಂದು ತಿಂಗಳು ಮಾಡಿದರೆ ನಿಮಗೆ ಇರುವ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ದಿನ ನಿತ್ಯ ಮಾಡಿದರೆ ನಿಮ್ಮ ಆಯುಸ್ಸು ನಿಸ್ಸಂಶಯವಾಗಿ ಹೆಚ್ಚಾಗುವುದರ ಜೊತೆಗೆ ನಿಮ್ಮ ಬಳಿಗೆ ರೋಗಗಳು ಬರಲು ಹಿಂದೇಟು ಹಾಕುವಂತಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳು ಇರುವ ಯೋಗವನ್ನು ಮಾಡಲು ಸಕಾಲಕ್ಕಾಗಿ ಎದುರು ನೋಡುತ್ತಾ ಕೂರಬೇಡಿ. ಇಂದೇ ಯೋಗ ಮಾಡಲು ಆರಂಭಿಸಿ, ಯೋಗ ಮಾಡುತ್ತಿದ್ದಲ್ಲಿ ಒಂದು ನಾಲ್ಕು ಜನಕ್ಕೆ ಹೇಳಿ ಕೊಡಿ. ಅವರು ಸಹ ಕಲಿತು ಇತರರಿಗೆ ಹೇಳಿ ಕೊಡಲಿ.
ಸರ್ವರಿಗೂ “ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು”yoga-for-women

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *