ವಿದ್ವತ್ ಮೇಲೆ ಹಲ್ಲೆ ಪ್ರಕರಣ – ಆರೋಪಿ ನಲಪಾಡ್ ಗೆ ಷರತ್ತುಬದ್ದ ಜಾಮೀನು ಮಂಜೂರು

Posted on: June 14, 2018

mohmad nalapad

ಬೆಂಗಳೂರು: ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಹಾಗೂ ಆರೋಪಿ ಮೊಹಮ್ಮದ್‌ ನಲಪಾಡ್ ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಇಬ್ಬರು ವ್ಯಕ್ತಿಗಳು ಹಾಗೂ ಎರಡು ಲಕ್ಷ ರು. ಮೌಲ್ಯದ ಬಾಂಡ್ ಭದ್ರತೆ ಪಡೆದು ಆರೋಪಿಗೆ ಜಾಮೀನು ನೀಡಲಾಗಿದೆ. ಅದೇ ರೀತಿ, ನ್ಯಾಯಾಲಯದ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ ಮತ್ತು ನ್ಯಾಯಾಲಯದ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂಬ ಎರಡು ಷರತ್ತುಗಳನ್ನು ಕೋರ್ಟ್ ವಿಧಿಸಿದೆ.

ಫೆಬ್ರವರಿ 17 ರ ರಾತ್ರಿ 11 ಗಂಟೆಗೆ ಬೆಂಬಲಿಗರ ಜತೆ ಸೇರಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ನಲಪಾಡ್ ಕಳೆದ 116 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಆರೋಪಿ‌ ನಲಪಾಡ್ ಪ್ರಭಾವಿ ಎಂಬ ಕಾರಣಕ್ಕೆ ಸೆಷನ್ಸ್ ಕೋರ್ಟ್ ಎರಡು ಬಾರಿ ಜಾಮೀನು ತಿರಸ್ಕರಿಸಿತ್ತು. ಎರಡನೇ ಬಾರಿ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ನಲಪಾಡ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಿದ್ದರು. ಜೂ.13 ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಜಾನ್ ಮೈಕೆಲ್ ಡಿ.ಕುನ್ಹ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ದೋಷಾರೋಪಣೆ ಸಲ್ಲಿಸಿದ್ದಾರೆ. ಹೀಗಾಗಿ, ಜಾಮೀನು ಮಂಜೂರು ಮಾಡಬಹುದಲ್ಲವೇ ಎಂದು ಪ್ರಾಸಿಕ್ಯೂಷನ್ ಪರ ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಅವರಲ್ಲಿ ಕೇಳಿದ್ದರು.

ಫರ್ಜಿ ಕೆಫೆಯಲ್ಲಿ ನಲಪಾಡ್ ಮತ್ತು ಬೆಂಬಲಿಗರು ವಿದ್ವತ್ ಮೇಲೆ ಹಲ್ಲೆ ಮಾಡಿದ ನಂತರ ಗುಂಪಿನ ಸದಸ್ಯರಲ್ಲಿ ಓರ್ವನಾದ ಅರುಣ್ ಎಂಬಾತನ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿದ್ವತ್ ವಿರುದ್ಧವೇ ಪ್ರಕರಣ ದಾಖಲಿಸಿ ದ್ದರು. ನಲಪಾಡ್ ಗೆ ಜಾಮೀನು ಕೊಡಿಸಲು ಟಾಮಿ ಸೆಬಾಸ್ಟಿಯನ್, ಸಿ.ವಿ.ನಾಗೇಶ್‌ರಂತಹ ಹೆಸರಾಂತ ಕ್ರಿಮಿನಲ್ ವಕೀಲರು ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.

ಆದರೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಗರದ ಏಳನೇ ಎಸಿಎಂಎಂ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣೆ ಸಲ್ಲಿಕೆಯಾಗುವವರೆಗೂ ಜಾಮೀನು ಮಂಜೂರಾಗದಂತೆ ಸರಕಾರಿ ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಪ್ರಬಲ ವಾದ ಮಂಡಿಸಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *