ನಿಲುವಾಗಿಲು ಗ್ರಾಮಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಪಿ.ಐ.ಶ್ರೀವಿದ್ಯಾ ಸೂಚನೆ

Posted on: July 10, 2018

DSC05399
ಮಡಿಕೇರಿ : ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಗ್ರಾಮ ಸ್ವರಾಜ್ ಅಭಿಯಾನದಡಿ ಬೆಸ್ಸೂರು ಗ್ರಾ.ಪಂ.ವ್ಯಾಪ್ತಿಯ ‘ನಿಲುವಾಗಿಲು’ ಗ್ರಾಮ ಆಯ್ಕೆಯಾಗಿದ್ದು, ಈ ಗ್ರಾಮದ ಕುಟುಂಬಗಳಿಗೆ ಅಡುಗೆ ಅನಿಲ ಹಾಗೂ ವಿದ್ಯುತ್ ಸಂಪರ್ಕ, ಜನಧನ ಯೋಜನೆಯಡಿ ಪ್ರತೀ ಕುಟುಂಬವು ಬ್ಯಾಂಕ್ ಖಾತೆ ಹೊಂದುವುದು, ಹೀಗೆ ಹಲವು ಕಾರ್ಯಕ್ರಮಗಳನ್ನು ಈ ತಿಂಗಳ ಅಂತ್ಯದೊಳಗೆ ಒದಗಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಲುವಾಗಿಲು ಗ್ರಾಮಕ್ಕೆ ಸರ್ಕಾರದ ಹಲವು ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿದರು.

ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಕೊಡಗು ಜಿಲ್ಲೆಯ ‘ನಿಲುವಾಗಿಲು’ ಗ್ರಾಮ ಆಯ್ಕೆಯಾಗಿದ್ದು, ಈ ಗ್ರಾಮದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ, ಸೌಭಾಗ್ಯ, ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಕ್ಷಾ ಭೀಮಾ ಯೋಜನೆ, ಇಂದ್ರ ಧನುಷ್, ಕಿಶನ್ ಕೌಸಲ್ಯ ಯೋಜನೆ, ಸ್ವಚ್ಛ ಭಾರತ ಅಭಿಯಾನ ಹೀಗೆ ನಾನಾ ಕಾರ್ಯಕ್ರಮಗಳನ್ನು ತಲುಪಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಈ ತಿಂಗಳ ಅಂತ್ಯದವರೆಗೆ ‘ನಿಲುವಾಗಿಲು’ ಗ್ರಾಮದ ಕುಟುಂಬದಲ್ಲಿ ಅಡುಗೆ ಅನಿಲ ಹಾಗೂ ವಿದ್ಯುತ್ ಸಂಪರ್ಕ ಇಲ್ಲ ಎಂಬ ದೂರುಗಳು ಕೇಳಿ ಬರಬಾರದು ಎಂದು ಅವರು ಸೂಚಿಸಿದರು.
ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾತನಾಡಿ ನಿಲುವಾಗಿಲು ಗ್ರಾಮದಲ್ಲಿ ಎಷ್ಟು ಕುಟುಂಬಗಳಿವೆ, ಜನಸಂಖ್ಯೆ ಎಷ್ಟು, ಮಹಿಳೆಯರು ಮತ್ತು ಪುರುಷರ ಸಂಖ್ಯೆ. ಈಗಾಗಲೇ ನೀಡಲಾಗಿರುವ ಫಲಾನುಭವಿಗಳ ಪಟ್ಟಿ, ಮುಂದೆ ಸೌಲಭ್ಯ ಕಲ್ಪಿಸಬೇಕಿರುವ ಫಲಾನುಭವಿಗಳ ಪಟ್ಟಿಯನ್ನು ಜುಲೈ, 25 ರೊಳಗೆ ತಲುಪಿಸುವಂತೆ ಬೆಸ್ಸೂರು ಗ್ರಾ.ಪಂ.ಪಿಡಿಒಗೆ ಸೂಚನೆ ನೀಡಿದರು.
DSC05400

ಗ್ರಾಮ ವಿಕಾಸ್ ಯೋಜನೆಯಡಿ ಸೌಲಭ್ಯ ಕಲ್ಪಿಸುವ ಸಂಬಂಧ ಈಗಾಗಲೇ ಸರ್ವೆ ಕಾರ್ಯ ನಡೆದಿದ್ದು, ಈ ಸಂಬಂಧ ಮತ್ತೊಮ್ಮೆ ಪರಿಶೀಲಿಸಿ ವರದಿ ನೀಡುವಂತೆ ಪಿಡಿಓಗೆ ಜಿ.ಪಂ.ಸಿಇಓ ಅವರು ನಿರ್ದೇಶನ ನೀಡಿದರು.

ಭಾರತ ಸರ್ಕಾರದ ಕಾರ್ಯಕ್ರಮಗಳ ಜಿಲ್ಲಾ ನೋಡೆಲ್ ಅಧಿಕಾರಿ ಪದ್ಮನಾಭನ್ ಅವರು ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಸಂಬಂಧ ಈಗಾಗಲೇ ಸೌಲಭ್ಯಗಳನ್ನು ಒದಗಿಸಲಾಗಿರುವ ಫಲಾನುಭವಿಗಳ ಪಟ್ಟಿ ಹಾಗೂ ಮುಂದೆ ಸೌಲಭ್ಯ ಒದಗಿಸಬೇಕಿರುವ ಫಲಾನುಭವಿಗಳ ಪಟ್ಟಿ ಒದಗಿಸುವಂತೆ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಸಾಮಾನ್ಯ ವರ್ಗದ ಬಡವರಿಗೂ ಅನಿಲ ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಪದ್ಮನಾಭನ್ ಅವರು ಸಲಹೆ ಮಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಅವರು ಉಜ್ವಲ ಯೋಜನೆಯಡಿ ನಿಲುವಾಗಿಲು ಗ್ರಾಮದ ಎಲ್ಲಾ ಕುಟುಂಬಗಳಿಗೂ ಅನಿಲ ಸಂಪರ್ಕ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್ ಅವರು ಸೌಭಾಗ್ಯ ಯೋಜನೆಯಡಿ ನಿಲುವಾಗಿಲು ಗ್ರಾಮದ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ ಅವರು ನಿಲುವಾಗಿಲು ಗ್ರಾಮದ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವ ಸಂಬಂಧ ಇಂದ್ರಧನುಷ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಂಗಾರು ಗುಪ್ತಾಜೀ ಅವರು ಜನಧನ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮಾಹಿತಿ ಬಗ್ಗೆ ಮಾಹಿತಿ ನೀಡಿದರು.

ಬೆಸ್ಸೂರು ಗ್ರಾ.ಪಂ.ಪಿಡಿಒ ಯಾದವ ಅವರು ಗ್ರಾಮ ವಿಕಾಸ್ ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಗ್ರಾಮಸಭೆ ನಡೆಸಲಾಗಿದೆ. ಜೊತೆಗೆ ಸರ್ವೆ ಕಾರ್ಯವು ನಡೆದಿದೆ. ನಿಲುವಾಗಿಲು, ಅಗಳಿ, ಚಿಕ್ಕಭಂಡಾರ ವ್ಯಾಪ್ತಿಯಲ್ಲಿ 545 ಕುಟುಂಬಗಳಿದ್ದು, ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್. ಅಧಿಕಾರಿ ಡಾ.ನಿಲೇಶ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಇತರರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *