ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸ್ಥಗಿತಕ್ಕೆ ಸುನಿಲ್ ಸುಬ್ರಮಣಿ ಒತ್ತಾಯ

Posted on: July 11, 2018

34-2
ಮಡಿಕೇರಿ : ಕೊಡಗು ಜಿಲ್ಲೆಯ ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ಕಂಡುಬಂದಿದ್ದು, ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆದ ಬೆನ್ನಲ್ಲೆ ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಸರ್ವೆ ಕಾರ್ಯ ಕೈಗೆತ್ತಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಯೋಜನೆಯ ಸರ್ವೆ ಕಾರ್ಯ ದಕ್ಷಿಣ ಕೊಡಗಿನ ಕುಟ್ಟ, ಕೆ.ಬಾಡಗ ಮತ್ತು ಶ್ರೀಮಂಗಲ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಗೆ ಖಾಸಗಿ ಜಾಗದಲ್ಲಿ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಗುತ್ತಿಗೆ ಆಧಾರದಲ್ಲಿ ಈ ಸರ್ವೇ ಕಾರ್ಯಕ್ಕೆ ಅಧಿಕಾರಿ ಸಿಬ್ಬಂಧಿಗಳನ್ನು ನೇಮಕ ಮಾಡಿದ್ದು, ಪರಿಕರಗಳೊಂದಿಗೆ ಸರ್ವೇ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ.

ಈ ಸಿಬ್ಬಂದಿ ಹೊಂದಿರುವ ಸರ್ವೇ ಮಾಹಿತಿಯ ನಕಾಶೆಯಂತೆ ಈಗಾಗಲೇ ಯೋಜನೆಯ ಮಾರ್ಗವನ್ನು ಗುರುತಿಸಲಾಗಿದ್ದು, ಜಿಲ್ಲೆಯ ತಿತಿಮತಿ ಮೂಲಕ ಜಿಲ್ಲೆಗೆ ಪ್ರವೇಶಿಸುವ ಈ ಮಾರ್ಗವು ಹಲವೆಡೆ ಸುರಂಗಗಳ ಮೂಲಕ ಹಾದು ಹೋಗುವುದನ್ನು ಗುರುತಿಸಲಾಗಿದ್ದು, ಜಿಲ್ಲೆಯ ಕುಟ್ಟದ ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸುವುದನ್ನು ಗುರುತಿಸಲಾಗಿದೆ.

ದಕ್ಷಿಣ ಕೊಡಗಿನ ಮೂಲಕ ರೈಲ್ವೆ ಯೋಜನೆಗೆ ಅವಕಾಶ ನೀಡಿದರೆ ಜಿಲ್ಲೆಯ ಅಸ್ತಿತ್ವ ಕಾಫಿ ತೋಟಗಳಿಗೆ, ಜಿಲ್ಲೆಯ ಜನಜೀವನಕ್ಕೆ ಹಾಗೂ ಮೇಲಾಗಿ ಕಾವೇರಿ ನದಿಯ ಅಸ್ಥಿತ್ವಕ್ಕೆ ದಕ್ಕೆ ಉಂಟಾಗುವುದೆಂದು ಪರಿಸರವಾದಿಗಳ ಅಭಿಪ್ರಾಯವಾಗಿದ್ದು, ಈ ಸರ್ವೇ ಕಾರ್ಯದ ಕುರಿತಾಗಿ ಸರ್ಕಾರದ ನಿಲುವೇನು ಈ ಸರ್ವೇಕಾರ್ಯಕ್ಕೆ ರಾಜ್ಯದಿಂದ ಅನುಮತಿ ನೀಡಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಈ ಮೂಲಕ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂಬ ಪ್ರಶ್ನೆಗೆ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಹಂತದಲ್ಲಿ 02 ಸಭೆಗಳು ನಡೆದಿದ್ದು, ಈ ಸಭೆಯಲ್ಲಿ ಮೈಸೂರು-ತಲಚೇರಿ ರೈಲು ಮಾರ್ಗವು ಆನೆಗಳ ಕಾರಿಡಾರ್ ಮೂಲಕ ಹಾದು ಹೋಗುವುದರಿಂದ ಆ ಭಾಗದಲ್ಲಿ ಮನುಷ್ಯರ ಮತ್ತು ಆನೆಗಳ ಮಧ್ಯದ ಸಂಘರ್ಷವು ಹೆಚ್ಚಾಗುವುದೆಂದು ಕರ್ನಾಟಕ ಸರ್ಕಾರವು ಸಭೆಯಲ್ಲಿ ತಿಳಿಸಿದೆ.

ಕೇರಳ ಸರ್ಕಾರವು ಈ ಮಾರ್ಗಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಲು ಅನುಮತಿಯನ್ನು ನೀಡುವಂತೆ ಕೋರಿದ್ದು, ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಕರ್ನಾಟಕ ಸರ್ಕಾರವು ತಿಳಿಸಿದೆಯೇ ಹೊರತು ರಾಜ್ಯ ಸರ್ಕಾರದ ವತಿಯಿಂದ ಸರ್ವೆ ನಡೆಸಲು ಯಾವುದೇ ಅನುಮತಿ ನೀಡಲಾಗಿರುವುದಿಲ್ಲ. ದಿನಾಂಕ; 18-06-2018 ರಂದು ಮಾನ್ಯ ಕಂದಾಯ ಸಚಿವರು ಮಡಿಕೇರಿಗೆ ಮಳೆಹಾನಿಗೆ ಸಂಬಂಧಿಸಿದಂತೆ ಭೇಟಿ ನೀಡಿದಾಗ ಮಡಿಕೇರಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಅಲ್ಲಿರುವ ಸ್ಥಳೀಯ ನಾಗರಿಕರಿಗೆ ಈ ಯೋಜನೆಯ ಸರ್ವೆ ಕಾರ್ಯ ಮಾಡಲು ಸರ್ಕಾರದಿಂದ ಯಾವುದೇ ಅನುಮತಿ ನೀಡಿರುವುದಿಲ್ಲ ಎಂದು ಸಹ ತಿಳಿಸಿರುತ್ತಾರೆ.

ಈ ಯೋಜನೆಯ ಅನುಷ್ಠಾನದ ಬಗ್ಗೆ ಸ್ಥಳೀಯರ ಭಾವನೆ, ಯೋಜನೆ ಅನುಷ್ಠಾನದಿಂದ ವನ್ಯಜೀವಿ ಹಾಗೂ ಪರಿಸರದ ಮೇಲಾಗುವ ಪರಿಣಾಮ ಮತ್ತು ರಾಜ್ಯ ಸರ್ಕಾರದ ಮೇಲಾಗುವ ಆರ್ಥಿಕ ಪರಿಣಾಮ ಮತ್ತಿತರ ಪ್ರಮುಖವಾದ ಅಂಶಗಳನ್ನು ಪರಿಗಣಿಸಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *