ಸಧ್ಯದಲ್ಲಿಯೇ ಕೊಡಗಿಗೆ ಭೇಟಿ ಕೊಡವ ಸಾಹಿತ್ಯ ಅಕಾಡೆಮಿ ನಿಯೋಗಕ್ಕೆ ಸಿಎಂ ಭರವಸೆ

Posted on: July 11, 2018

Z KODAVA AKADEMI
ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವೆ ಜಯಾಮಾಲ, ಕಂದಾಯ ಸಚಿವ ಆರ್.ವಿ.ದೇಶ್‍ಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ‘ಬೆಳ್ಳಿಹಬ್ಬ’ ಆಚರಣೆಗೆ ವಿಶೇಷ ಅನುದಾನ ಬಿಡುಗಡೆಗೆ ಮಾಡುವಂತೆ ಮನವಿ ಸಲ್ಲಿಸಿತು.

ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ನೇತೃತ್ವದ ನಿಯೋಗ ಅಕಾಡೆಮಿಯ ಅಭ್ಯುದಯ ಮತ್ತು ಕೊಡಗಿನ ಸಮಸ್ಯೆಗಳ ಬಗ್ಗೆ ಪ್ರಮುಖರೊಂದಿಗೆ ಚರ್ಚಿಸಿತು.

ಕೊಡವ ಸಾಹಿತ್ಯ ಅಕೆಡೆಮಿಗೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಅಗತ್ಯ ನೆರವು ನೀಡುವಂತೆ ಪ್ರಮುಖರು ಕೋರಿದರು. ಕಳೆದ ಎರಡು ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗು ಜಿಲ್ಲೆ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದೆ.

ಮಳೆಯಿಂದ ರಸ್ತೆಗಳು ಸಂಪೂರ್ಣವಾಗಿ ಹದಗಟ್ಟಿದ್ದು, ವಿಶೇಷ ಪ್ಯಾಕೇಜ್‍ನ ಅಗತ್ಯವಿದೆ. ಕಾಡಾನೆ, ಹುಲಿಗಳು ಸೇರಿದಂತೆ ವನ್ಯಜೀವಿಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು, ರೈತರು ಕಂಗಲಾಗಿದ್ದಾರೆ ಎಂದು ಪ್ರಮುಖರು ಮುಖ್ಯಮಂತ್ರಿಗಳ ಗಮನ ಸೆಳೆದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕಾವೇರಿ ಮಾತೆಯ ಆಶೀರ್ವಾದ ಸರ್ಕಾರದ ಮೇಲಿದೆ. ಕೊಡಗಿನಲ್ಲಿ ಮಳೆಯಿಂದ ಆದ ಕಷ್ಟ-ನಷ್ಟಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಶೀಘ್ರದಲ್ಲೆ ಕೊಡಗಿಗೆ ಭೇಟಿ ನೀಡಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಒಂದು ದಿನ ವಾಸ್ತವ್ಯ ಹೂಡಿ ಕೊಡಗಿನ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

ಟಾಟು ಮೊಣ್ಣಪ್ಪ, ಉಮೇಶ್ ಕೇಚಮಯ್ಯ, ಹಂಚೆಟ್ಟೀರ ಪ್ಯಾನ್ಸಿ ಮುತ್ತಣ್ಣ, ಕುಡಿಯರ ಶಾರದ, ಅಮ್ಮಣಿಚಂಡ ಪ್ರವೀಣ್, ಸುಳ್ಳಿಮಾಡ ಭವಾನಿ ಕಾವೇರಪ್ಪ, ಚಂಗುಲಂಡ ಸೂರಜ್, ಪುಟ್ಟ ಬೆಳ್ಯಪ್ಪ, ಮನು ಮುದ್ದಪ್ಪ, ಅಜ್ಜಮಾಡ ಪಿ.ಕುಶಾಲಪ್ಪ ನಿಯೋಗದಲ್ಲಿದ್ದರು. ಫೋಟೋ :: ಕೊಡವ ಅಕಾಡೆಮಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *