2018-19ನೇ ಸಾಲಿಗೆ 5 ಸಾವಿರ ಕೋಟಿ ರೂ.ಸಾಲ ಯೋಜನೆ ಬಿಡುಗಡೆ

Posted on: July 9, 2018

IMG-20180709-WA0028
ಮಡಿಕೇರಿ : ಲೀಡ್‍ಬ್ಯಾಂಕ್ ವತಿಯಿಂದ 2018-19 ನೇ ಸಾಲಿಗೆ ತಯಾರಿಸಲಾದ 5 ಸಾವಿರ ಕೋಟಿ ರೂ.ಗಳ ಸಾಲ ಯೋಜನೆಯನ್ನು ಇತ್ತೀಚೆಗೆ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಬಿಡುಗಡೆ ಮಾಡಿದರು.

ನಗರದ ಲೀಡ್‍ಬ್ಯಾಂಕ್ ಕಾರ್ಪೊರೇಷನ್ ಬ್ಯಾಂಕ್‍ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ತಯಾರಿಸಲಾದ 2018-19 ನೇ ಸಾಲಿನ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಯಿತು.

ಬಳಿಕ ಮಾತನಾಡಿದ ಪ್ರಶಾಂತ್ ಕುಮಾರ್ ಮಿಶ್ರ ಅವರು ಸಣ್ಣ ಮತ್ತು ಅತೀ ಸಣ್ಣ ಉದ್ಯಮಗಳಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಈ ಕ್ಷೇತ್ರಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಸಕಾಲದಲ್ಲಿ ದೊರೆಯುವಂತಾಗಬೇಕು ಎಂದರು.

ಸಾಲ ಯೋಜನೆ ಸಂಬಂಧಿಸಿದಂತೆ ಜನವರಿಯಲ್ಲಿ ತರಾತುರಿಯಲ್ಲಿ ಸಾಲ ನೀಡುವುದಲ್ಲ. ಈಗಿನಿಂದಲೇ ಸಾಲ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ರೈತರು, ಕಾರ್ಮಿಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಹೀಗೆ ಎಲ್ಲರಿಗೂ ಸಾಲ ನೀಡಲು ಬ್ಯಾಂಕುಗಳು ಸಹಕರಿಸಬೇಕು ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಟಾಂಡ್‍ಅಪ್ ಇಂಡಿಯಾ, ಸ್ಟಾರ್ಟ್‍ಅಪ್ ಇಂಡಿಯಾ ಹಾಗೂ ಇತರ ಸರ್ಕಾರಿ ಪ್ರಯೋಜಿತ ಯೋಜನೆಗಳು ಜನರನ್ನು ತಲುಪುವಂತಾಗಬೇಕು. ಜೊತೆಗೆ ಪ್ರತಿಯೊಬ್ಬರಲ್ಲೂ ಸ್ವಾವಲಂಬನೆ ಬದುಕು ಕಾಣುವಂತಾಗಲು ಸಾಲವನ್ನು ನೀಡಿ ಸಹಕರಿಸಬೇಕು ಎಂದು ಅವರು ಸಲಹೆ ಮಾಡಿದರು.

ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜನರ ಜೊತೆ ಸ್ನೇಹಿತರಂತೆ ವರ್ತಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು. ಜೊತೆಗೆ ಸಾರ್ವಜನಿಕ ಸಂಪರ್ಕ ಸಾಧಿಸಬೇಕು ಎಂದು ಅವರು ಸಲಹೆ ಮಾಡಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್)ನ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ ಅವರು ಮಾತನಾಡಿ ರೈತರಿಗೆ ವಿಶೇಷವಾಗಿ ಬೆಳೆಸಾಲ ಮತ್ತು ಕೃಷಿಗೆ ಸಂಬಂಧಿಸಿದ ಅವಧಿ ಸಾಲವನ್ನು ಸೂಕ್ತವಾದ ಸಮಯದಲ್ಲಿ ನೀಡಬೇಕು. ಜೊತೆಗೆ ಬ್ಯಾಂಕುಗಳು ರೈತ ಸ್ನೇಹಿಯಾಗಿ ದುಡಿಯಬೇಕು ಎಂದು ಅವರು ಸಲಹೆ ಮಾಡಿದರು.

ಈಗಾಗಲೇ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಮಹತ್ತರವಾಗಿದೆ ಎಂದು ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕರು ತಿಳಿಸಿದರು.
ಕೃಷಿ, ಕೈಗಾರಿಕೆ, ಸಣ್ಣ ಉದ್ಯಮ, ಹೀಗೆ ಆದ್ಯತಾ ವಲಯಕ್ಕೆ ಸೇರಿದಂತೆ 5 ಸಾವಿರ ಕೋಟಿ ರೂ.ಗಳ ಸಾಲ ಯೋಜನೆಯನ್ನು ಪ್ರಸಕ್ತ ಸಾಲಿಗೆ ತಯಾರಿಸಲಾಗಿದ್ದು, ಬ್ಯಾಂಕ್ ವ್ಯವಸ್ಥಾಪಕರು ಪ್ರಗತಿ ಸಾಧಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದು ಅವರು ಕೋರಿದರು.

ಕಾರ್ಪೋರೇಷನ್ ಬ್ಯಾಂಕಿನ ಮೈಸೂರು ವಲಯದ ಉಪ ಮಹಾ ಪ್ರಬಂಧಕರಾದ ಎಸ್.ಎಲ್.ಗಣಪತಿ ಅವರು ಮಾತನಾಡಿ ಬ್ಯಾಂಕ್‍ಗಳ ವ್ಯವಸ್ಥಾಪಕರು ಸಮಯಕ್ಕೆ ಸರಿಯಾಗಿ ಸಾಲವನ್ನು ನೀಡಿ ಉದ್ಯಮಿಗಳು, ಕೃಷಿಕರು, ವ್ಯಾಪಾರಿ ಉದ್ಯಮಿಗಳು ಮತ್ತಿತರರಿಗೆ ಉತ್ತೇಜನ ನೀಡುವಂತಾಗಬೇಕು. ಉದ್ಯಮಿಗಳು, ವ್ಯಾಪಾರಿ ಉದ್ಯಮಿಗಳು, ಕೃಷಿಕರು ಮತ್ತಿತರರ ಜೊತೆ ಸಮನ್ವಯತೆ ಸಾಧಿಸಿ ಸಾಲ ಯೋಜನೆ ತಲುಪಿಸಲು ಮುಂದಾಗಬೇಕು ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಂಗಾರು ಗುಪ್ತಾಜೀ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ವ್ಯಾಪಾರ, ವಾಣಿಜ್ಯ ಹೀಗೆ ಇತರೆ ಕ್ಷೇತ್ರಗಳಿಗೆ ಸಾಲವನ್ನು ನೀಡುವಂತಾಗಬೇಕು ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಸರಳೀಕರಣದತ್ತ ಹೆಜ್ಜೆ ಇಡಲಾಗಿದೆ. ಆ ದಿಸೆಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಅವರು ಸಲಹೆ ಮಾಡಿದರು.

ಜಿಲ್ಲೆಯ 2018-19ನೇ ಸಾಲಿನ ಸಮಗ್ರ ಸಾಲ ಯೋಜನೆ ಬಿಡುಗಡೆಯ ಮಾಹಿತಿಯನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಂಗಾರು ಗುಪ್ತಾಜೀ ಅವರು ನೀಡಿದರು.
ವಿವರ ಇಂತಿದೆ:-ಜಿಲ್ಲೆಯ ಲೀಡ್‍ಬ್ಯಾಂಕ್ ವತಿಯಿಂದ ತಯಾರಿಸಲಾದ 2018-19ನೇ ಸಾಲಿನ ಸಮಗ್ರ ರೂ. 5 ಸಾವಿರ ಕೋಟಿ ಗುರಿಯು ಕಳೆದ ವರ್ಷಕ್ಕಿಂತ ಶೇ.14 ರಷ್ಟು ಹೆಚ್ಚಳವಾಗಿದ್ದು, ಇದರಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.

ಬೆಳೆಸಾಲಕ್ಕೆ ರೂ. 2,520 ಕೋಟಿ ರೂ., ಅವಧಿ ಸಾಲಕ್ಕೆ 790 ಕೋಟಿ ರೂ., ಕೃಷಿಗೆ ಸಂಬಂಧಿಸಿದ ಮೂಲ ಸೌಕರ್ಯ ಒದಗಿಸಲು 160 ಕೋಟಿ ರೂ, ಹೀಗೆ ಒಟ್ಟು ಕೃಷಿ ಕ್ಷೇತ್ರಕ್ಕಾಗಿ 3470 ಕೋಟಿ ರೂ ಗುರಿಯನ್ನು ನಿಗಧಿಪಡಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮ, ಶೈಕ್ಷಣಿಕ ಸಾಲ, ರಫ್ತು, ಗೃಹ ನಿರ್ಮಾಣ, ಸಾಮಾಜಿಕ ಮೂಲ ಸೌಕರ್ಯ, ನವೀಕೃತ ಇಂಧನ ಹೀಗೆ ಇತರ ಆದ್ಯತಾ ವಲಯಕ್ಕೆ 730 ಕೋಟಿ ರೂ.ವನ್ನು ನಿಗದಿಪಡಿಸಲಾಗಿದೆ. ಆದ್ಯತಾ ವಲಯವಲ್ಲದ ಕ್ಷೇತ್ರಕ್ಕೆ 800 ಕೋಟಿ ರೂ ನಿಗಧಿಪಡಿಸಲಾಗಿದ್ದು, ಒಟ್ಟಾರೆ 5 ಸಾವಿರ ಕೋಟಿ ರೂ. ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕಾರ್ಪೋರೇಷನ್ ಬ್ಯಾಂಕಿನ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ಸುರೇಶ್, ಜಿಲ್ಲೆಯ ವಿವಿಧ ಬ್ಯಾಂಕುಗಳ ಪ್ರತಿನಿಧಿಗಳು ಮತ್ತು ಶಾಖಾ ವ್ಯವಸ್ಥಾಪಕರು ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *