ರೈತರೊಂದಿಗೆ ನಾಟಿ ಮಾಡಿ ಯಾರನ್ನು ಮೆಚ್ಚಿಸುವ ಕೆಲಸ ಮಾಡುತ್ತಿಲ್ಲ ಸಿಎಂ ಕುಮಾರಸ್ವಾಮಿ

Posted on: August 11, 2018

HDK-NATI-1

ಮಂಡ್ಯ : ಸಿಎಂ ಕುಮಾರಸ್ವಾಮಿ ಇಂದು ಅಪ್ಪಟ ರೈತನಾಗಿ ಖುಷಿಪಟ್ಟರು. ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನ ಸೀತಾಪುರ ಗ್ರಾಮದ ಸಮೀಪದ ಜಮೀನಿನಲ್ಲಿ ಜನರ ಜೊತೆಗೂಡಿ ಸಿಎಂ ಭತ್ತದ ನಾಟಿ ಮಾಡಿದರು.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ತಮ್ಮ ನಾಯಕನ ರೈತಾವತಾರವನ್ನು ಕಂಡು ಕಣ್ಣುತುಂಬಿಕೊಂಡರು. ಸೀತಾಪುರಕ್ಕೆ ಬರುವ ಮುನ್ನ ಮುಖ್ಯಮಂತ್ರಿಗಳು ಮೈಸೂರಿನ ಸುತ್ತೂರು ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದರು. ಅದಾದ ನಂತರ ಹೊಳೆಕೆರೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬಳಿಕ ಗದ್ದೆಗೆಳಿದರು. ಮಂಡ್ಯದ ಸಂಸದ ಪುಟ್ಟರಾಜು ಹಾಗೂ ಜಿಲ್ಲೆಯ ಐದಾರು ಶಾಸಕರು ಮತ್ತು ಪ್ರಮುಖ ಜೆಡಿಎಸ್ ಮುಖಂಡರು ಈ ಸಂದರ್ಭದಲ್ಲಿ ಸಾಥ್ ನೀಡಿದರು.

ಮಂಡ್ಯಕ್ಕೆ ಮಾತ್ರ ಸೀಮಿತವಲ್ಲ ::

ನಾಟಿ ಮಾಡಿದ ಬಳಿಕ ವಿಶೇಷ ಅನುಭವವನ್ನು ರೈತರೊಂದಿಗೆ ಹಂಚಿಕೊಂಡ ಮುಖ್ಯಮಂತ್ರಿಗಳು, ತಾನು 25 ವರ್ಷಗಳ ನಂತರ ಗದ್ದೆಗೆ ಇಳಿದು, ಕೆಲಸ ಮಾಡಿದ್ದೇನೆ. ಈಗ ಜನಜಂಗುಳಿಯಿಂದ ಸರಿಯಾಗಿ ಹೊಲ ಉಳಲು ಆಗಲಿಲ್ಲ. ಈ ಮುಂಚೆ ತಾನು ಹೊಲ ಉತ್ತಿದ್ದೇನೆ. ಗೊಬ್ಬರ ಹೊತ್ತಿದ್ದೇನೆ. ಅದೆಲ್ಲವನ್ನೂ ಮಾಡಿಯೇ ಈ ಹಂತಕ್ಕೆ ಬಂದಿದ್ದೇನೆ. ಈಗ ಸ್ವಲ್ಪ ಸೋಂಬೇರಿಯಾಗಿದ್ದೇವೆ. ಆದರೆ, ರೈತರ ಪರಿಶ್ರಮ ತನಗೆ ಚೆನ್ನಾಗಿ ಗೊತ್ತು ಎಂದು ತಿಳಿಸಿದರು.

ತಾನು ಮಂಡ್ಯದಲ್ಲಿ ಭತ್ತದ ನಾಟಿ ಮಾಡಿದಾಕ್ಷಣ ಮಂಡ್ಯಕ್ಕಷ್ಟೇ ತಾನು ಸೀಮಿತವಾಗುವುದಿಲ್ಲ. ಉತ್ತರ ಕರ್ನಾಟಕ ಬೇರೆ ಅಲ್ಲ, ಹಳೆ ಕರ್ನಾಟಕ ಬೇರೆ ಅಲ್ಲ. ಇಡೀ ರಾಜ್ಯದ ಎಲ್ಲಾ 30 ಜಿಲ್ಲೆಗಳ ರೈತರ ಏಳ್ಗೆಯ ಜವಾಬ್ದಾರಿ ತನ್ನದು. ಎಲ್ಲಾ 30 ಜಿಲ್ಲೆಗೂ ತಾನು ಭೇಟಿ ಕೊಡುತ್ತೇನೆ. ತಿಂಗಳಲ್ಲಿ ಒಂದು ದಿನ ಪ್ರತೀ ಜಿಲ್ಲೆಗೂ ಪ್ರವಾಸ ಮಾಡುತ್ತೇನೆ. ರೈತರ ಜೊತೆ ಇರುತ್ತೇನೆ. ಅವರ ಸಮಸ್ಯೆಯನ್ನು ಆಲಿಸುತ್ತೇನೆ, ನೋಡುತ್ತೇನೆ. ರೈತರೊಂದಿಗೆ ಸಮಾಲೋಚನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಈಗಾಗಲೇ ಸಹಕಾರಿ ಬ್ಯಾಂಕಿನ 9,000 ಕೋಟಿ ಹಣವನ್ನು ಸಾಲಮನ್ನಾ ಮಾಡಿ, ಅದಕ್ಕೆ ಹಣ ಬಿಡುಗಡೆ ಮಾಡಿದ್ದೇವೆ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕಿನ ಸಾಲವನ್ನು ಸಹ ಮನ್ನಾ ಮಾಡಲು ನಿರ್ಧಾರ ಮಾಡಲಾಗಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ನೀಡಿದ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದರು.

 

38872354_1796901333691656_6414206796679872512_n-721x600

ಯಾರನ್ನು ಮೆಚ್ಚಿಸಲು  ನಾಟಿ ಮಾಡಿಲ್ಲ ::

ನಾನು ವಿರೋಧ ಪಕ್ಷಗಳನ್ನಾಗಲೀ ಅಥವಾ ಯಾರನ್ನಾಗಲೀ ಮೆಚ್ಚಿಸಲು ಕೆಲಸ ಮಾಡುತ್ತಿಲ್ಲ. ಹೃದಯದಿಂದ ಕೆಲಸ ಮಾಡುತ್ತಿದ್ದೇನೆ. ತನಗೆ ಅಧಿಕಾರ ಸಿಕ್ಕಿ ಇನ್ನೂ 2 ತಿಂಗಳು ಆಗಿಲ್ಲ. ತನಗೆ ಇನ್ನೂ ಸಮಯಾವಕಾಶ ಕೊಡಿ. ಆರೇಳು ತಿಂಗಳು ಟೈಮ್ ಕೊಡಿ. ರೈತರ ಬದುಕನ್ನು ಹಸನು ಮಾಡುವ ಅನೇಕ ಯೋಜನೆಗಳು ತನ್ನಲ್ಲಿವೆ. ಹೊಸ ರೀತಿಯ ಕೃಷಿ ಪದ್ಧತಿ ತರಬೇಕೆಂಬ ಕಲ್ಪನೆ ಇಟ್ಟುಕೊಂಡಿದ್ಧೇನೆ. ಅದರ ನೀಲನಕ್ಷೆ ತಯಾರಿಸಿದ್ಧೇನೆ. ಇಡೀ ರಾಜ್ಯದ 75 ಲಕ್ಷ ರೈತ ಕುಟುಂಬಗಳ ಏಳ್ಗೆ ಮಾಡುವ ಆಸೆ ತನ್ನದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಾಲ ಮನ್ನಾ ಮಾಡಿದ ತತ್ಕ್ಷಣ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ತನಗೆ ಚೆನ್ನಾಗಿ ಗೊತ್ತು. ಸಾಲಗಾರರು ನಿಮ್ಮ ಮನೆಬಾಗಿಲಿಗೆ ಬರದಂತೆ ಮಾಡುತ್ತೇನೆ. ಎಂದು ಹೆಚ್ಡಿಕೆ ಅಭಯಹಸ್ತ ನೀಡಿದರು.

ಮುಂದಿನ ತಿಂಗಳಿನಿಂದಲೇ ಪ್ರತೀ ಜಿಲ್ಲೆಗೂ ಭೇಟಿ ಕೊಡುವ ಕಾರ್ಯಕ್ರಮವನ್ನು ಆರಂಭಿಸುವುದಾಗಿ ತಿಳಿಸಿದ ಅವರು ತಮಿಳುನಾಡಿನಲ್ಲಿ ಕರುಣಾನಿಧಿಯವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿನ ರೈತ ಬಾಂಧವರು ದೇವೇಗೌಡರು ಹಾಗೂ ನನಗೆ ಜಯವಾಗಲಿ ಎಂದು ಜಯಘೋಶ ಹಾಕಿದ್ದಾರೆ. ಇದಕ್ಕೆ ಕಾರಣ ಕಾವೇರಿ ತಾಯಿ. ಕಾವೇರಿ ದಯೆಯಿಂದ ಎರಡು ರಾಜ್ಯದ ರೈತರು ನೆಮ್ಮದಿಯಾಗಿರುವ ಹಾಗೆ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

 

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *