ವಿಶ್ವ ಸ್ತನ್ಯಪಾನ ದಿನಾಚರಣೆ – ತಾಯಿ ಆರೋಗ್ಯ ಮತ್ತು ಮಗು ಬೆಳವಣಿಗೆಗೆ ತಾಯಿಯ ಎದೆ ಹಾಲು ಅತಿ ಅಗತ್ಯ ಡಾ.ಜಗದೀಶ್

Posted on: August 10, 2018

Z-SAPTHAHA-1
ಮಡಿಕೇರಿ : ಮಗುವಿನ ಬೆಳವಣಿಗೆಗೆ ತಾಯಿಯ ಹಾಲು ಅತಿ ಅವಶ್ಯಕ ಹಾಗೂ ತಾಯಂದಿರಿಗೆ ಸ್ತನ್ಯಪಾನದಿಂದ ಉತ್ತಮ ಆರೋಗ್ಯವನ್ನು ನೀಡುತ್ತದೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಜಗದೀಶ್ ಅವರು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋಧಕ ಆಸ್ಪತ್ರೆ, ಮಕ್ಕಳ ವಿಭಾಗ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ತಜ್ಞರಾದ ಡಾ.ಕೃಷ್ಣಾನಂದ ಅವರು ಮಾತನಾಡಿ ನವಜಾತ ಶಿಶುವಿಗೆ ತಾಯಿಯ ಹಾಲು ಅಮೃತವಿದ್ದಂತೆ. ಮಗುವಿನ ಜನನದ ಸಮಯದಲ್ಲಿ ಉತ್ಪತ್ತಿಯಾಗುವ ತಾಯಿಯ ಹಾಲಿನ ಸ್ತನ್ಯಪಾನ ಮಾಡಿಸುವುದರಿಂದ ಮಗು ಯಾವುದೇ ಖಾಯಿಲೆಗೆ ತುತ್ತಾಗದಂತೆ ತಡೆಯುತ್ತದೆ ಹಾಗೂ ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ಖಾಯಿಲೆಗಳಿಂದ ಮಗುವನ್ನು ರಕ್ಷಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ನೀಲೇಶ್ ಅವರು ಮಾತನಾಡಿ ನವಜಾತ ಶಿಶು ಹುಟ್ಟಿದ ಒಂದು ಗಂಟೆಯೊಳಗೆ ತಪ್ಪದೇ ಸ್ತನ್ಯಪಾನ ಮಾಡಿಸಬೇಕು ಹಾಗೂ ತಾಯಿಯ ಹಾಲಿಗಿಂತ ಮಿಗಿಲಾದ ಆಹಾರ ನವಜಾತ ಶಿಶುವಿಗೆ ಮತ್ತೊಂದಿಲ್ಲ. ಮಗುವಿಗೆ ಆರು ತಿಂಗಳವರೆಗೆ ತಾಯಿಯ ಹಾಲನ್ನು ಬಿಟ್ಟು ಬೇರೆ ಯಾವುದೇ ಹಾಲನ್ನು ನೀಡಬಾರದು. ಇಂದಿನ ದಿನಗಳಲ್ಲಿ ಸ್ತನ್ಯಪಾನವನ್ನು ಸಮರ್ಪಕವಾಗಿ ಮಾಡಿಸದೇ ಇರುವುದು ಆಘಾತಕಾರಿ ವಿಷಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ ಶೇ.40 ರಷ್ಟು ತಾಯಂದಿರು ಮಾತ್ರ 6 ತಿಂಗಳವರೆಗೆ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವುದು ತಿಳಿದು ಬಂದಿದೆ ಎಂದರು.

ಸಭೆಯಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ್, ತಾಯಂದಿರು ತಪ್ಪದೇ ಕನಿಷ್ಠ ಒಂದು ವರ್ಷದವರೆಗೆ ಮಗುವಿಗೆ ಸ್ತನ್ಯಪಾನ ಮಾಡಿಸಬೇಕು ಎಂದು ಅವರು ತಿಳಿಸಿದರು. ಮಕ್ಕಳ ತಜ್ಞರಾದ ಡಾ.ಮಂಜುನಾಥ್, ಡಾ.ರಾಮಚಂದ್ರ ಕಾಮತ್, ಶ್ರುಶ್ರೂಷಕಿಯರ ವಿಭಾಗದ ಮುಖ್ಯಸ್ಥರಾದ ಮೀನಾಕ್ಷಿ ಇತರರು ಇದ್ದರು. ಮಕ್ಕಳ ತಜ್ಞರಾದ ಡಾ.ಮಾಲತೇಶ್ ಅವರು ಸ್ವಾಗತಿಸಿ, ನಿರೂಪಿಸಿದರು.

ಇನ್ನಷ್ಟು ಮಾಹಿತಿ : ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಪ್ರತಿ ವರ್ಷ ಆಗಸ್ಟ್ ಒಂದರಿಂದ ಏಳನೆಯ ತಾರೀಖಿನವರೆಗೆ ಆಚರಿಸಲಾಗುತ್ತದೆ. ಸುಮಾರು 120 ರಾಷ್ಟ್ರಗಳು ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಚರಿಸುತ್ತವೆ. 1992 ರಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಆಚರಿಸಲಾಯಿತು. ಈ ಬಾರಿ ಎದೆ ಹಾಲುಣಿಸುವಿಕೆ ಜೀವನದ ಬುನಾದಿ ಎಂಬ ಘೋಷಣೆ ವಾಕ್ಯದೊಂದಿಗೆ ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ 01 ರಿಂದ ಆಗಸ್ಟ್ 07 ರವರೆಗೆ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದ್ದು, ಎದೆಹಾಲಿನ ಮಹತ್ವವನ್ನು ಸಾರ್ವಜನಿಕರಿಗೆ, ಗರ್ಬಿಣಿಯರಿಗೆ ಮತ್ತು ಬಾಣಂತಿಯರಿಗೆ ಅರಿವು ಮೂಡಿಸುವುದು ಈ ಸಪ್ತಾಹದ ಮುಖ್ಯ ಉದ್ದೇಶವಾಗಿರುತ್ತದೆ.

ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ದೇಶಗಳು:-ಶಿಶುಗಳಿಗೆ ಎದೆ ಹಾಲುಣಿಸುವುದರಿಂದ ಪೌಷ್ಠಿಕ ಅಂಶದ ಪೂರೈಕೆ, ಆಹಾರ ಭದ್ರತೆ ಮತ್ತು ಬಡತನ ನಿರ್ಮೂಲನೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು, ಸಂಪೂರ್ಣ ಎದೆ ಹಾಲುಣಿಸುವಿಕೆಯು ಜೀವನದ ಬುನಾದಿ ಎಂಬುದಾಗಿ ನಿರ್ದೇಶಿಸುವುದು, ದೇಶದ ಎಲ್ಲಾ ಸಂಸ್ಥೆಯು ಎದೆ ಹಾಲುಣಿಸುವಿಕೆಯ ಮಹತ್ವ ಕುರಿತಂತೆ ಅರಿವನ್ನು ಮೂಡಿಸಲು ಸಹಭಾಗಿತ್ವ ವಹಿಸುವುದು, ಎದೆಹಾಲುಣಿಸುವಿಕೆಯ ಮಹತ್ವವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರ್ಯಕ್ರಮ ಕೈಗೊಳ್ಳುವುದು.

ಮಗುವಿಗೆ ತಾಯಿಯ ಹಾಲು ಸರ್ವಶ್ರೇಷ್ಠ : ತಾಯಿಯ ಹಾಲು ವಿಶೇಷವಾಗಿ ಶಿಶುವಿನ ಸಲುವಾಗಿಯೇ ಉತ್ಪಾದಿತವಾಗಿದೆ. ಶಿಶುವಿನ ಸರ್ವತೋಮುಖ ಬೆಳವಣಿಗೆಗೆ ಇದುವೇ ಸಮರ್ಪಕ ಆಹಾರ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಅನೇಕ ರೋಗ ನಿರೋಧಕ ಅಂಶಗಳನ್ನು ಒಳಗೊಂಡಿದೆ.

ಎದೆಹಾಲು ಕುಡಿಯುವುದರಿಂದ ಶಿಶುವಿಗೆ ಆಗುವ ಲಾಭಗಳು : ಎದೆಹಾಲಿನಲ್ಲಿ ಸಾಕಷ್ಟು ಕ್ಯಾಲೋರಿಗಳನ್ನು ಹೊಂದಿದ್ದು ಶಿಶುವಿಗೆ ಅಗತ್ಯವಾದ ಪ್ರೋಟೀನ್, ಲ್ಯಾಕ್ಟೋಸ್, ಕೊಬ್ಬು, ಜೀವಸತ್ವ, ಲವಣಾಂಶ, ನೀರು ಹಾಗೂ ಖನಿಜಾಂಶಗಳನ್ನು ಹೊಂದಿದೆ, ಎದೆಹಾಲುವಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚಿನ ಕಬ್ಬಿಣಾಂಶ, ಸುಲಭವಾಗಿ ನೀರಿನಲ್ಲಿ ಕರುಗುವಂತಹ ವಿಟಮಿನ್ ಬಿ ಮತ್ತು ಸಿ ದೊರೆಯುತ್ತದೆ, ಹಾಗೂ ಕೊಬ್ಬಿನಲ್ಲಿ ವಿಟಮಿನ್ ಎ,ಡಿ ಮತ್ತು ಇ ದೊರೆಯುತ್ತದೆ, ಎದೆಹಾಲು ಶುದ್ಧವಾಗಿದ್ದು ಬ್ಯಾಕ್ಟೀರಿಯಾ ಹಾಗೂ ರೋಗ ಹರಡುವ ವೈರಾಣುಗಳಿಂದ ಮುಕ್ತವಾಗಿದೆ. ಎದೆಹಾಲು ಕರುಳಿನಲ್ಲಿ ಬೆಳೆದು ಭೇದಿ ಉಂಟುಮಾಡುವಂತಹ ಹಾನಿಕಾರಕ ರೋಗಾಣುಗಳು ಬೆಳೆಯುವುದನ್ನು ತಡೆಗಟ್ಟುವ ಅಂಶವನ್ನು ಹೊಂದಿದೆ, ಮಗುವಿಗೆ ಸುಲಭವಾಗಿ ಬೇಕಾದಾಗಲೆಲ್ಲ ಕೊಡಬಹುದು ಇದನ್ನು ತಯಾರಿಸುವ ಅಗತ್ಯವಿಲ್ಲ ಮತ್ತು ಸರಿಯಾದ ಉಷ್ಣತೆಯಲ್ಲಿ ದೊರೆಯುತ್ತದೆ. ಇದು ಕಲಬೆರಕೆಯಿಂದ ಮುಕ್ತವಾಗಿದ್ದು ಖರ್ಚಿನ ಅಗತ್ಯವಿಲ್ಲದ್ದಾಗಿದೆ, ಸ್ತನ್ಯಪಾನವು ತಾಯಿ ಹಾಗೂ ಮಗುವಿನ ಮಧ್ಯೆ ಸುಮಧುರ ಬಾಂಧವ್ಯ ಬೆಳೆಸುತ್ತದೆ. ಪ್ರೀತಿ ಮತ್ತು ಮಮತೆಯನ್ನು ತರುತ್ತದೆ. ಆಹಾರಕ್ಕಿಂತ ಇದು ಹೆಚ್ಚಿನದ್ದಾಗಿದೆ, ಸ್ತನ್ಯಪಾನವು ಮಗುವನ್ನು ಅನೇಕ ರೋಗಗಳಿಂದ ವಿಶೇಷವಾಗಿ ಅತಿಸಾರ ಮತ್ತು ಶ್ವಾಸಕೋಶ ತೊಂದರೆಗಳಿಂದ ರಕ್ಷಿಸುತ್ತದೆ, ಸ್ತನ್ಯಪಾನ ಮಾಡಿಸಿದ ಮಕ್ಕಳಲ್ಲಿ ಮಧುಮೇಹ, ಹೃದ್ರೋಗ, ಎಗ್ಜಿಮಾ, ಅಸ್ತಮಾ ಮತ್ತು ಇತರೆ ಅಲರ್ಜಿಗಳು ಬರುವ ಸಾಧ್ಯತೆಗಳು ಕಡಿಮೆ ಇರುತ್ತದೆ, ಇಂತಹ ಮಕ್ಕಳು ಉಳಿದ ಮಕ್ಕಳಿಗಿಂತ ಹೆಚ್ಚಿನ ಬುದ್ಧಿಶಕ್ತಿ ಉಳ್ಳವರು ಆಗಿರುತ್ತಾರೆ. ಸ್ತನ್ಯಪಾನವು ಮೆದುಳಿನ ಬೆಳವಣಿಗೆಗೆ ಸಹಾಯಕವಾಗಿದೆ. ಇಂತಹ ಮಕ್ಕಳಲ್ಲಿ ದೃಷ್ಟಿ ಉತ್ತಮವಾಗಿದ್ದು ಕಲಿಯಲು ಉತ್ಸುಕರಾಗಿರುತ್ತಾರೆ.

ಸ್ತನ್ಯಪಾನದಿಂದ ತಾಯಿಗೆ ಆಗುವ ಲಾಭಗಳು :- ಹೆರಿಗೆಯ ನಂತರ ರಕ್ತಸ್ರಾವವನ್ನು ಕಡಿಮೆಗೊಳಿಸಿ ರಕ್ತಹೀನತೆಯನ್ನು ತಪ್ಪಿಸುತ್ತದೆ, ಇದು ಗರ್ಭನಿರೋಧಕವಾಗಿಯೂ ಕೆಲಸ ಮಾಡುತ್ತದೆ, ಇದರಿಂದ ಅಂಡಾಶಯ ಮತ್ತು ಸ್ತನಗಳ ಕ್ಯಾನ್ಸರಿನ ವಿರುದ್ಧ ರಕ್ಷಣೆ ದೊರೆಯುತ್ತದೆ.

ಎದೆಹಾಲು ಕುಡಿಸುವುದರಿಂದ ಸಮಾಜಕ್ಕೆ ಆಗುವ ಲಾಭಗಳು :- ಸ್ತನ್ಯಪಾನವು ಆರೋಗ್ಯ ರಕ್ಷಣೆಯ ಖರ್ಚುಗಳನ್ನು ಕಡಿಮೆಗೊಳಿಸುತ್ತದೆ. ಐದು ವರ್ಷದ ಒಳಗಿನ ಮಕ್ಕಳ ಮರಣದ ಸಂಖ್ಯೆಯನ್ನು ತಗ್ಗಿಸುತ್ತದೆ. ಕುಟುಂಬದ ಹಣಕಾಸಿನ ಸ್ಥಿತಿಯ ಮೇಲಿನ ಒತ್ತಡವನ್ನು ತಗ್ಗಿಸುತ್ತದೆ, ಎದೆಹಾಲು ಕುಡಿಯುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಇಂತಹ ಮಕ್ಕಳ ತಾಯಂದಿರು ಮಕ್ಕಳ ಅನಾರೋಗ್ಯದ ಕಾರಣ ಕೆಲಸಕ್ಕೆ ಗೈರು ಹಾಜರಾಗುವುದನ್ನು ತಪ್ಪಿಸುತ್ತದೆ.
DSC05861

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *