ಸ್ಥಳೀಯ ಸಂಸ್ಥೆ ಚುನಾವಣೆ ಆ.10 ರಿಂದ ನಾಮಪತ್ರ ಸಲ್ಲಿಕೆ ಆರಂಭ

Posted on: August 10, 2018

Election_2018
ಮಡಿಕೇರಿ : ಸೋಮವಾರಪೇಟೆ, ಕುಶಾಲನಗರ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕಾ ಪ್ರಕ್ರಿಯೆಯು ಆಗಸ್ಟ್ 10 ರಿಂದ ಆರಂಭವಾಗಲಿದೆ. ಆಗಸ್ಟ್ 10 ರಂದು ಜಿಲ್ಲಾಧಿಕಾರಿಯವರು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ.

ಆಗಸ್ಟ್ 17 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಆಗಸ್ಟ್ 18 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಆಗಸ್ಟ್ 20 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ, ಆಗಸ್ಟ್ 29 ರಂದು ಮತದಾನ ಅವಶ್ಯವಿದ್ದರೆ, ಮತದಾನವು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ. ಆಗಸ್ಟ್ 31 ರಂದು ಮರು ಮತದಾನ ಇದ್ದಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. ಸೆಪ್ಟೆಂಬರ್ 01 ರಂದು ಬೆಳಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ.

ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಸಮಯದಲ್ಲಿ ಅನುಸರಿಸಬೇಕಾದ ಸದಾಚಾರ ಸಂಹಿತೆಗಳಿಗೆ ಚುನಾವಣಾ ಆಯೋಗ ಹಲವು ನಿರ್ದೇಶನ ನೀಡಿದೆ. ವಿವರ ಇಂತಿದೆ.
ಸದಾಚಾರ ಸಂಹಿತೆಯು ಚುನಾವಣೆ ನಡೆಯುತ್ತಿರುವ ನಗರ/ಪಟ್ಟಣ ಪ್ರದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ, ನಗರ ಸ್ಥಳೀಯ ಸಂಸ್ಥೆಗಳು ಚುನಾವಣಾ ಪೂರ್ವದಲ್ಲಿ ಪ್ರಾರಂಭಿಸಿರುವ/ ಜಾರಿಯಲ್ಲಿರುವ ಕಾಮಗಾರಿಗಳನ್ನು ಮುಂದುವರಿಸಲು ಹಾಗೂ ಈ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳು ಹಣವನ್ನು ಪಾವತಿ ಮಾಡಲು ನೀತಿ ಸಂಹಿತೆಯು ಅಡ್ಡಿಯಿರುವುದಿಲ್ಲ.

ಆದರೆ ನಗರ ಸ್ಥಳೀಯ ಸಂಸ್ಥೆಗಳು ಯಾವುದೇ ಹೊಸ ಕಾಮಗಾರಿಗಳನ್ನು ನಿರ್ಧರಿಸಲಾಗಿದೆ ಎಂಬ ಕಾರಣ ನೀಡಿ ಪ್ರಾರಂಭಿಸುವಂತಿಲ್ಲ, ಚುನಾವಣೆ ನಡೆಸುತ್ತಿರುವ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಮಂತ್ರಿಗಳು ಅಥವಾ ಶಾಸಕರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ.ಸಭೆ ಮತ್ತು ಇತರೆ ಸಭೆಗಳನ್ನು ನಡೆಸತಕ್ಕದ್ದಲ್ಲ.
ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರು ಅಥವಾ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಅನುಷ್ಠಾನಗೊಳಿಸಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ.

ಆದರೆ ಅಂತಹ ಯೋಜನೆಯ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಸುವುದನ್ನು ನಿಷೇಧಿಸಲಾಗಿದೆ, ನೆರೆಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ. ಆದರೆ ಈ ಸಂಬಂಧ ಯಾವುದೇ ಸಮಾರಂಭವನ್ನು ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ನಡೆಸುವುದನ್ನು ನಿಷೇಧಿಸಿದೆ.

ಯಾವುದೇ ಸಾಂಸ್ಕತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ನೀತಿ ಸಂಹಿತೆಯು ಅಡ್ಡಿಯಿಲ್ಲ. ಆದರೆ ಇಂತಹ ಸಭೆಯ ಸಮಾರಂಭಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಿ ನೀತಿ ಸಂಹಿತೆಗೆ ಬಾದಕವಾಗುವ ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ ಅಥವಾ ಆಶ್ವಾಸನೆ ನೀಡುವಂತಿಲ್ಲ.
ಯಾವುದೇ ರಾಜಕೀಯ ವ್ಯಕ್ತಿಗಳು ಜಿಲ್ಲಾ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಅವರ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾಗಿರುವ ವಾಹನವನ್ನು ಚುನಾವಣಾ ಪ್ರಚಾರಗಳಿಗೆ ಅಥವಾ ಚುನಾವಣಾ ಸಂಬಂಧದ ಸಭೆಗಳನ್ನು ನಡೆಸಲು ಬಳಸುವಂತಿಲ್ಲ, ನೇಮಕಾತಿ ನಿಯಮಗಳನ್ವಯ ಯಾವುದೇ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದು ಅದನ್ನು ನಿಲ್ಲಿಸುವ ಅಗತ್ಯ ಇರುವುದಿಲ್ಲ ಆದರೆ ಯಾವುದೇ ನೇಮಕಾತಿಯನ್ನು ಈ ಸಮಯದಲ್ಲಿ ಅಂತಿಮಗೊಳಿಸಿ ನೇಮಕಾತಿ ಪಟ್ಟಿಯನ್ನು ಪ್ರಕಟಗೊಳಿಸಬಾರದು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಡಿತರ ಚೀಟಿ ವಿತರಣೆ, ನಗರ, ಪುರ, ಪಟ್ಟಣ ಭಾಗಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ಸಚಿವರು/ ಶಾಸಕರು ಮತ್ತು ಅಧಿಕಾರಿಗಳು ನಡೆಸುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಯಾವುದೇ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿರುವುದಿಲ್ಲ. ಆದರೆ ಯಾವುದಾದರೂ ತುರ್ತು ಸೇವೆಗೆ ನೇಮಕಾತಿ ಅವಶ್ಯಕತೆ ಇದ್ದಲ್ಲಿ ಆಯೋಗದ ಅನುಮೋದನೆ ಪಡೆದು ನೇಮಕಾತಿ ಮಾಡಬಹುದು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಗರ/ಪಟ್ಟಣ ಪ್ರದೇಶದ ಮತದಾರರಿಗೆ ಮಾತ್ರ ಅನ್ವಯವಾಗುವುದರಿಂದ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ವ್ಯಕ್ತಿಗಳು ನಡೆಸುವ ಯಾವುದೇ ಸಭೆ ಸಮಾರಂಭಗಳಿಗೆ ನೀತಿ ಸಂಹಿತೆಯ ಅಡ್ಡಿಯಿಲ್ಲ. ಆದರೆ ಇಂತಹ ಸಭೆ ಸಮಾರಂಭಗಳಲ್ಲಿ ಶಾಸಕರು ಹಾಗೂ ಮಂತ್ರಿಗಳು ಪಟ್ಟಣ/ನಗರ ಪ್ರದೇಶದ ಮತದಾರರನ್ನು ಪ್ರಭಾವಿಸುವಂತಹ ಹೇಳಿಕೆಗಳನ್ನಾಗಲಿ, ಆಶ್ವಾಸನೆಗಳನ್ನಾಗಲಿ ನೀಡತಕ್ಕದ್ದಲ್ಲ.

ನಗರ/ಪುರ/ಪಟ್ಟಣ ಪ್ರದೇಶದಲ್ಲಿ ಮಂತ್ರಿಗಳು ಹಾಗೂ ಶಾಸಕರು ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ, ಯಾವುದೇ ಇಲಾಖೆಯಲ್ಲಿ ಸಾಮಾನ್ಯ ಮುಂಬಡ್ತಿಯನ್ನು ನೀಡಲು ಯಾವುದೇ ಭಾದಕವಿರುವುದಿಲ್ಲ, ಒಟ್ಟಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಯೋಜನೆಯು ನಡೆಯದಂತೆ ನೋಡಿಕೊಳ್ಳತಕ್ಕದ್ದು, ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಸದಾಚಾರ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರವು ಜಿಲ್ಲಾಧಿಕಾರಿಗಳಲ್ಲಿ ನಿಹಿತವಾಗಿದೆ.

Election_2018karnataka open places (prevention of disfigurement) Act  1981 ಇದರಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತಹ ಯಾವುದೇ ತೆರೆದ ಜಾಗದಲ್ಲಿ ಜಾಹೀರಾತನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಪರವಾನಗಿ ಪಡೆಯದೆ ಆ ಸಂಸ್ಥೆಯ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನ ಮಾಡಿದಲ್ಲಿ ಅದು ಸಂಜ್ಞೆಯ ಅಪರಾಧವಾಗುತ್ತದೆ.

ಆದ್ದರಿಂದ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಪ್ರತಿನಿಧಿಸಲ್ಪಡುವ ಅಭ್ಯರ್ಥಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡತಕ್ಕದ್ದು ಹಾಗೂ ಈ ಅಧಿನಿಯಮದ ಕಾನೂನನ್ನು ಉಲ್ಲಂಘಿಸದಂತೆ ಎಚ್ಚರ ವಹಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *