ಜಿಲ್ಲಾಧಿಕಾರಿ ಶ್ರೀವಿದ್ಯಾರನ್ನು ವರ್ಗಾವಣೆಗೊಳಿಸಬಾರದು  ಮಡಿಕೇರಿ ನಗರ ಕಾಂಗ್ರೆಸ್ ಆಗ್ರಹ

Posted on: September 14, 2018

Z K.U.ABDUL RAZAK 2 (1)
ಮಡಿಕೇರಿ  : ದಕ್ಷ ಮಹಿಳಾ ಅಧಿಕಾರಿ ಶ್ರೀವಿದ್ಯಾ ಅವರನ್ನು ಯಾವುದೇ ಕಾರಣಕ್ಕೂ ಕೊಡಗು ಜಿಲ್ಲೆಯಿಂದ ವರ್ಗಾವಣೆಗೊಳಿಸಬಾರದು ಎಂದು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ವರ್ಗಾವಣೆಗೊಳಿಸಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ವರ್ಗಾವಣೆಗೆ ಅವಕಾಶ ನೀಡದಂತೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಕೊಡಗು ಜಿಲ್ಲೆ ಕಂಡ ಕೆಲವೇ ಕೆಲವು ಪ್ರಾಮಾಣಿಕ ಜಿಲ್ಲಾಧಿಕಾರಿಗಳಲ್ಲಿ ಶ್ರೀವಿದ್ಯಾ ಅವರು ಕೂಡ ಒಬ್ಬರಾಗಿದ್ದು, ಇವರ ಕಾರ್ಯದಕ್ಷತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇವರ ಸೇವೆ ಇನ್ನೂ ಎರಡು ವರ್ಷಗಳ ಕಾಲ ಕೊಡಗು ಜಿಲ್ಲೆಗೆ ಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾರನ್ನು ವರ್ಗಾವಣೆಗೊಳಿಸಲು ಪ್ರಯತ್ನಗಳು ನಡೆಯುತ್ತಿರುವುದು ನಿಜವಾಗಿದ್ದರೆ ಅದನ್ನು ಜನಬೆಂಬಲದೊಂದಿಗೆ ವಿರೋಧಿಸುವುದಾಗಿ ಕೆ.ಯು.ಅಬ್ದುಲ್ ರಜಾಕ್ ತಿಳಿಸಿದ್ದಾರೆ.

ಶ್ರೀವಿದ್ಯಾ ಅವರು ಈ ಹಿಂದೆ ಕೊಡಗು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಧಿಕಾರಿಗಳಾಗಿ ಕಾರ್ಯಾರಂಭ ಮಾಡಿದ ಕೆಲವೇ ತಿಂಗಳುಗಳಲ್ಲಿ ನಿಯಮ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ವಿಧಾನಸಭಾ ಚುನಾವಣೆಯನ್ನು ಕೂಡ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಈ ನಡುವೆ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಒಬ್ಬ ಮಹಿಳಾ ಅಧಿಕಾರಿಯಾಗಿದ್ದರೂ ಜಿಲ್ಲೆಯ ಪ್ರತಿಯೊಂದು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಅನೇಕ ಗ್ರಾಮಗಳು ಕೆಸರಿನಾರ್ಭಟಕ್ಕೆ ಕಳೆದು ಹೋಗಿ ಸಾವಿರಾರು ಗ್ರಾಮಸ್ಥರು ನಿರಾಶ್ರಿತರಾದಾಗ ಧೈರ್ಯಗೆಡದ ಜಿಲ್ಲಾಧಿಕಾರಿಗಳು ರಾತ್ರಿ, ಹಗಲೆನ್ನದೆ ತಮ್ಮ ಸೇವೆಯನ್ನು ಸಲ್ಲಿಸುವ ಮೂಲಕ ನೊಂದವರ ಕಣ್ಣೀರಿಗೆ ಸ್ಪಂದಿಸಿದ್ದಾರೆ. ಪರಿಹಾರ ಕೇಂದ್ರಗಳ ನಿರ್ವಹಣೆ ಹಾಗೂ ಪರಿಹಾರ ಸಾಮಾಗ್ರಿಗಳ ವಿತರಣೆಯಲ್ಲಿ ಅವರು ಯಶಸ್ವಿಯಾಗಿದ್ದಾರೆ. ಖಡಕ್ ಆದೇಶಗಳ ಮೂಲಕ ಅಧಿಕಾರಿಗಳನ್ನೂ ಚುರುಕುಗೊಳಿಸಿದ್ದಾರೆ.

ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಪ್ರತಿಯೊಂದು ಕುಗ್ರಾಮಗಳಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯ ಕಷ್ಟ, ನಷ್ಟಗಳ ಸಂಪೂರ್ಣ ಅರಿವು ಶ್ರೀವಿದ್ಯಾ ಅವರಿಗಿದೆ. ಅಲ್ಲದೆ ಇವರೇ ಜಿಲ್ಲಾಧಿಕಾರಿಗಳಾಗಿ ಮುಂದುವರಿಯಬೇಕೆನ್ನುವ ಒತ್ತಾಯ ಕೂಡ ಜನರಿಂದ ಕೇಳಿ ಬಂದಿದೆ. ಜಿಲ್ಲೆಯ ಕ್ಲಿಷ್ಟಕರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಯಾವುದೇ ಕಾರಣಕ್ಕೂ ಎರಡು ವರ್ಷಗಳ ಮಟ್ಟಿಗೆ ಕೊಡಗಿನಿಂದ ವರ್ಗಾವಣೆಗೊಳಿಸಬಾರದೆಂದು ಸರಕಾರವನ್ನು ಒತ್ತಾಯಿಸುವುದಾಗಿ ಕೆ.ಯು.ಅಬ್ದುಲ್ ರಜಾಕ್ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *