ನಿರಾಶ್ರಿತರಿಗಾಗಿ ಮೀಸಲಿಟ್ಟಿರುವ ಜಾಗ ಪರಿಶೀಲಿಸಿದ ಶಾಸಕ ಅಪ್ಪಚ್ಚು ರಂಜನ್

Posted on: September 12, 2018

IMG_20180911_110419

ಮಡಿಕೇರಿ: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ನಿರಾಶ್ರಿತರಿಗೆ ಗುರುತಿಸಲಾಗಿರುವ ಕರ್ಣಂಗೇರಿ ಬಳಿಯ 4 ಎಕರೆ ಜಾಗವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಎಂ.ಪಿ.ಅಪ್ಪಚ್ಚುರಂಜನ್ ಅವರು, ಈಗಾಗಲೇ ಕರ್ಣಂಗೇರಿ, ಗಾಳಿಬೀಡು, ಕೆ.ನಿಡುಗಣೆ, ಮದೆ, ಸಂಪಾಜೆ, ಜಂಬೂರು, ಮಾದಪುರ ಹೀಗೆ ನಾನಾ ಕಡೆಗಳಲ್ಲಿ 100 ಎಕರೆಗೂ ಹೆಚ್ಚು ಭೂಮಿ ಗುರುತಿಸಲಾಗಿದ್ದು, ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆದಿವೆ ಎಂದು ಅವರು ತಿಳಿಸಿದರು.

ಸಂತ್ರಸ್ತ ಕುಟುಂಬಗಳಿಗೆ ಮಾದರಿ ಮನೆ ನಿರ್ಮಿಸಲಾಗುವುದು. ಸದ್ಯ ಭೂ ಕುಸಿತದಿಂದ ತೊಂದರೆ ಅನುಭವಿಸುತ್ತಿರುವ ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸುವಂತಾಗಬೇಕು. ಭೂಮಿ ಕಳೆದುಕೊಂಡವರಿಗೆ ಸಿ ಮತ್ತು ಡಿ ಭೂಮಿಯನ್ನು ಒದಗಿಸಬೇಕು ಎಂದು ಅವರು ಹೇಳಿದರು.

ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಅವರು ಮಾತನಾಡಿ, ಪುನರ್ ವಸತಿ ಕಲ್ಪಿಸಲು ಜಾಗದ ಕೊರತೆ ಇಲ್ಲ. ಸದ್ಯ ಮನೆಯನ್ನು ಸಂತ್ರಸ್ತರೇ ನಿರ್ಮಿಸಿಕೊಳ್ಳುತ್ತಾರೆಯೇ, ಜಿಲ್ಲಾಡಳಿತವೇ ಮನೆ ನಿರ್ಮಿಸಿಕೊಡಬೇಕೇ ಎಂದು ಮತ್ತೊಮ್ಮೆ ಎಲ್ಲರಿಂದ ಅಭಿಪ್ರಾಯ ಪಡೆಯಲಾಗುವುದು ಎಂದು ಅವರು ಹೇಳಿದರು.

ರಾಜೀವ್ ಗಾಂಧಿ ವಸತಿ ಯೋಜನೆಗೆ ಸೇರಿದಂತೆ ಮೂರು ಕಂಪನಿಗಳು ಮನೆ ನಿರ್ಮಾಣದ ಮಾದರಿಯನ್ನು ನೀಡಿವೆ. ಒಟ್ಟಾರೆ ಮನೆಯ ಮಾದರಿಯನ್ನು ಪ್ರದರ್ಶಿಸಿ ಸಂತ್ರಸ್ತರ ಅಭಿಪ್ರಾಯ ಪಡೆದು ಮನೆ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದು ಅವರು ತಿಳಿಸಿದರು.

IMG_20180911_105917-1

 IMG_20180911_110225-1
IMG_20180911_110703-1

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *