ನಿಸರ್ಗಧಾಮದಲ್ಲಿ ಎರಡನೇ ವರ್ಷದ ಗಣೇಶೋತ್ಸವ

Posted on: September 14, 2018
IMG-20180913-WA0031
ಕುಶಾಲನಗರ : ಧರ್ಮ, ಜಾತಿ ಎಂದು ಕಿತ್ತಾಡುತ್ತಿರುವ ಈ ಕಾಲಗಟ್ಡದಲ್ಲಿ ಜಾತಿ, ಭೇದ ಮರೆತು ಒಗ್ಗಟ್ಟಿನಿಂದ ಹಾಗೂ ಸಹಬಾಳ್ವೆಯಿಂದ ಬದುಕಬೇಕು ಎಂಬ ಉದ್ದೇಶದಿಂದ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರಿನಲ್ಲಿ ಎರಡನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು.
ಸತತ ಎರಡು ವರ್ಷಗಳಿಂದ ಕುಶಾಲನಗರದ ನಿಸರ್ಗಧಾಮದಲ್ಲಿ   ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದ್ದು, ಇಲ್ಲಿ ಜಾತಿ, ಭೇದ ಮರೆತು ವರ್ಷಂಪ್ರತೀ ಎಲ್ಲಾ ಧರ್ಮದ ಹಬ್ಬಗಳ ಆಚರಣೆಯನ್ನು ಮಾಡುತ್ತಾ ಬಂದಿದ್ದಾರೆ. ಮುಸಲ್ಮಾನರ ರಂಜಾನ್, ಬಕ್ರೀದ್ ಕ್ರೈಸ್ತರ ಕ್ರಿಸ್ ಮಸ್ ಹಾಗೂ ಹಿಂದೂ ಬಾಂಧವರ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಾ ಬಂದಿದ್ದಾರೆ.
ನಿಸರ್ಗಧಾಮದ ಮಾಲೀಕರಾದ ಅಬ್ದುಲ್ ಸಲಾಮ್ ರಾವತರ್ರವರು ಬಡವರ ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ನೀಡುವ ಉದ್ದೇಶದಿಂದ ನಿಸರ್ಗಧಾಮ ಟೂರಿಸ್ಟ್ ಸೆಂಟರನ್ನು ತೆರೆದಿದ್ದಾರೆ. ಎನ್.ಟಿ.ಸಿ ಯನ್ನು ಅವಲಂಬಿಸಿ ೫೦೦ ಕ್ಕೂ ಹೆಚ್ವು ಕುಟುಂಬಸ್ಥರು ಜೀವನವನ್ನು ಸಾಗಿಸುತ್ತಿದ್ದಾರೆ. ಎಲ್ಲಾ ಧರ್ಮದ, ಎಲ್ಲಾ ಜಾತಿಯವರು ಸೇರಿರುವ ಎನ್.ಟಿ.ಸಿಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುವ ಮೂಲಕ ಜನರಿಗೆ ಮಾದರಿಯಾಗಿದ್ದಾರೆ. ಹಬ್ಬಗಳಾಚರಣೆಯನ್ನು ಭಾರೀ ಅದ್ದೂರಿಯಿಂದ ನಡೆಸುತ್ತಾ ಬರುತ್ತಿದ್ದು, ಮಾಲೀಕರ ಸಹಕಾರದೊಂದಿಗೆ ಎನ್.ಟಿ.ಸಿಯ ವರ್ತಕರು ಹಾಗೂ ಕೆಲಸಗಾರರು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದಾರೆ.
ವಿಶೇಷವೆಂದರೆ ಎನ್.ಟಿ.ಸಿಯ ಕೆಲಸಗಾರರಾದ ಲೋಕೇಶ್ರವರು ಅರ್ಚಕರಾಗಿ ಕಾರ್ಯನಿರ್ವಹಿಸಿ ಪೂಜಾ ವಿಧಿ ವಿಧಾನಗಳನ್ನು ನೆರೆವೇರಿಸಿದರು.
ಈ ಸಂದರ್ಭ ಮಾತನಾಡಿದ  ಎನ್.ಟಿ.ಸಿ ಮಾಲೀಕ ಅಬ್ದುಲ್ ಸಲಾಮ್ ರಾವತರ್, ಇಂದು ಧರ್ಮದ ಹೆಸರನ್ನೇಳಿ‌ ರಾಜಕೀಯ ಮಾಡುವ ಈ ಕಾಲದಲ್ಲಿ ನಾವೆಲ್ಲರೂ ಒಂದೇ ಎಂಬ ಉದ್ದೇಶದಿಂದ ಗಣೇಶೋತ್ಸವವನ್ನು ಆಚರಿಸುತ್ತಿದ್ದೇವೆ. ನೆರೆಯಿಂದ ಬೇಸತ್ತಿರುವ ನಮ್ಮ ವರ್ತಕರು ಹಾಗೂ ಕೆಲಸಗಾರರ ಉಲ್ಲಾಸಭರಿತರಾಗುವ ಉದ್ದೇಶದಿಂದ ಗಣೇಶೋತ್ಸವವನ್ನು ಸರಳವಾಗಿ ಆಚರಿಸುತ್ತಿದ್ದೇವೆ ಎಂದರು.
ಒಟ್ಟಾರೆಯಾಗಿ ನಾವೆಲ್ಲರೂ ಒಂದೇ ಎಂಬ ಉದ್ದೇಶವನ್ನು ಸಾರಿ ಮಾದರಿಯಾಗಿರುವ  ನಿಸರ್ಗಧಾಮ ಟೂರಿಸ್ಟ್ ಸೆಂಟರಿನ ಈ ಕೆಲಸಕ್ಕೆ ಊರಿನ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *