ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಸಂತ್ರಸ್ತರಿಗಾಗಿ ದಸರಾ ಆಚರಣೆ ಸರಳವಾಗಿರಲಿ ಮಡಿಕೇರಿ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಗಣೇಶ್ ಮನವಿ

Posted on: September 19, 2018

Z K.M.GANESH 1

ಮಡಿಕೇರಿ : ಜಿಲ್ಲೆಯ ಸಾವಿರಾರು ಮಂದಿ ಮಹಾಮಳೆಗೆ ಸಿಲುಕಿ ಸಂಕಷ್ಟದ ಜೀವನ ಸಾಗಿಸುತ್ತಿರುವುದರಿಂದ ಈ ಬಾರಿಯ ಮಡಿಕೇರಿ ದಸರಾ ಜನೋತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಬೇಕೆಂದು ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಗಣೇಶ್ ಮನವಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಮಡಿಕೇರಿ ತಾಲ್ಲೂಕಿನ ಅನೇಕ ಗ್ರಾಮಗಳು ಅತಿವೃಷ್ಟಿಯಿಂದ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಸಾವಿರಾರು ಮಂದಿ ಸಂತ್ರಸ್ತರು ಅಸಹಾಯಕ ಸ್ಥಿತಿಯಲ್ಲಿ ಇಂದಿಗೂ ಕಣ್ಣೀರಿನಲ್ಲೆ ದಿನ ದೂಡುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಆಚರಿಸುವುದು ಮಾನವೀಯ ಮೌಲ್ಯಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸ ಪ್ರಸಿದ್ಧ ದಸರಾ ಸಂಪ್ರದಾಯಕ್ಕೆ ಎಲ್ಲೂ ಚ್ಯುತಿ ಬಾರದ ರೀತಿಯಲ್ಲಿ ನವರಾತ್ರಿಗಳ ಕಾಲ ದೇವಿಯ ಆರಾಧನೆ ನಡೆಯಬೇಕು. ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಯಾವುದೇ ಅಡ್ಡಿ, ಆತಂಕವಿಲ್ಲದೆ ಶ್ರದ್ಧಾಭಕ್ತಿಯಿಂದ ಜರುಗಬೇಕು. ಆದರೆ ಗಾಂಧಿ ಮೈದಾನದಲ್ಲಿ ಸಂಭಾವನೆ ನೀಡಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಿ ಸ್ವಯಂ ಪ್ರೇರಿತರಾಗಿ ಬಂದು ಕಾರ್ಯಕ್ರಮ ನೀಡುವ ತಂಡಗಳಿಗೆ ಕಾವೇರಿ ಕಲಾಕ್ಷೇತ್ರದಲ್ಲಿ ಮಾತ್ರ ಅವಕಾಶ ಕಲ್ಪಿಸಬೇಕು. ದಸರಾದ ಕೊನೆಯ ದಿನ ಗಾಂಧಿ ಮೈದಾನದಲ್ಲಿ 35 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಮೇಲ್ಚಾವಣಿ ನಿರ್ಮಿಸುವ ಬದಲು ತೆರೆದ ಪ್ರದೇಶದಲ್ಲಿ ಸರಳ ರೀತಿಯ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಕೆ.ಎಂ.ಗಣೇಶ್ ಸಲಹೆ ನೀಡಿದ್ದಾರೆ.

ದಶಮಂಟಪಗಳಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿಯಂತೆ ಕಳಶವನ್ನಿಟ್ಟು ಸೂರ್ಯೋದಯದ ಮೊದಲೇ ಬನ್ನಿಮಂಟಪಕ್ಕೆ ಮಂಟಪಗಳನ್ನು ಕೊಂಡೊಯ್ದು ಬನ್ನಿ ಕಡಿಯುವುದು ಸಂಪ್ರದಾಯ. ಇದೇ ಪ್ರಕಾರವಾಗಿ ಈ ಬಾರಿಯ ದಸರಾ ನಡೆಯಬೇಕು ಮತ್ತು ಮಂಟಪಗಳಿಗೆ ಒಂದು ಟ್ರ್ಯಾಕ್ಟರ್‍ನಷ್ಟೇ ಸೀಮಿತಗೊಳಿಸಿ ಚಲನವಲಗಳಿಲ್ಲದ ದೇವರ ಸ್ತಬ್ಧ ಮೂರ್ತಿಗಳ ಮೆರವಣಿಗೆ ಸಾಗಬೇಕು. ಮಡಿಕೇರಿಯಲ್ಲಿ ಇನ್ನೂ ಕೂಡ ಶೋಕದ ವಾತಾವರಣ ಇರುವುದರಿಂದ ಡಿಜೆ ಶಬ್ಧ ಬಳಸಿ ದಸರಾ ಆಚರಿಸುವುದನ್ನು ಕೈಬಿಡಬೇಕು ಎಂದು ತಿಳಿಸಿರುವ ಗಣೇಶ್ ಅತ್ಯಂತ ಕಡಿಮೆ ಹಣದಲ್ಲಿ ಅತಿ ಸರಳ ರೀತಿಯಲ್ಲಿ ಈ ಬಾರಿಯ ದಸರಾ ಆಚರಣೆಯಾಗಬೇಕೆಂದು ಮನವಿ ಮಾಡಿದ್ದಾರೆ.

ಪ್ರವಾಸೋದ್ಯಮ ನಷ್ಟದ ಹಾದಿಯಲ್ಲಿದ್ದು, ವ್ಯಾಪಾರ, ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪರಿಸ್ಥಿತಿ ಹೀಗಿರುವಾಗ ವಾಣಿಜ್ಯೋದ್ಯಮಿಗಳಿಂದ ಮತ್ತು ವರ್ತಕರಿಂದ ದಸರಾ ದೇಣಿಗೆ ನಿರೀಕ್ಷಿಸುವುದು ಅಸಾಧ್ಯವಾಗಿದೆ. ತೋಟ, ಗದ್ದೆಗಳನ್ನು ಕಳೆದುಕೊಂಡು ಬೆಳೆಗಾರರು ಕೂಡ ಸಂಕಷ್ಟದಲ್ಲಿರುವುದರಿಂದ ಇವರಿಂದಲೂ ದಸರಾ ದೇಣಿಗೆ ಸಂಗ್ರಹ ಸಾಧ್ಯವಿಲ್ಲದಾಗಿದೆ.

ಸರಕಾರ ಸಂತ್ರಸ್ತರಿಗೆ ಹೊಸ ಜೀವನವನ್ನು ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ದಸರಾ ಆಚರಣೆಗೆಂದು ಅನುದಾನ ಬಿಡುಗಡೆ ಮಾಡಿದರೂ ಆ ಹಣವನ್ನು ನೊಂದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಅದ್ಧೂರಿಯಾಗಿ ಸಂಭ್ರಮದಿಂದ ಮಡಿಕೇರಿ ದಸರಾವನ್ನು ಆಚರಿಸಿಕೊಂಡು ಬರಲಾಗಿದೆ. ಆದರೆ ಈ ಬಾರಿ ತಾಲ್ಲೂಕಿನಲ್ಲಿ ದು:ಖ ಮಡುಗಟ್ಟಿದ ವಾತಾವರಣವಿದ್ದು, ಸರಳ ದಸರಾ ಆಚರಣೆಯ ಮೂಲಕ ಸಂತ್ರಸ್ತರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ರವಾನಿಸಬೇಕಾಗಿದೆ ಮತ್ತು ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದು ಗಣೇಶ್ ತಿಳಿಸಿದ್ದಾರೆ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *