ಸಾಲು ಸಾಲು ಹಬ್ಬಗಳು ಶಾಂತಿ ಸುವ್ಯವಸ್ಥೆ ಕಾಪಾಡಲು ಕೊಡಗು ಜಿಲ್ಲಾಡಳಿತ ಮನವಿ

Posted on: September 12, 2018

 

DSC06692

ಮಡಿಕೇರಿ: ಇದೇ 12 ಮತ್ತು 13ರಂದು ಗೌರಿ ಮತ್ತು ಗಣೇಶ ಹಬ್ಬ ಹಾಗೂ 21ರಂದು ಮೊಹರಂ ಕಡೇ ದಿನ, ಹೀಗೆ ಸಾಲು ಸಾಲು ಹಬ್ಬಗಳು ಇದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತ ಕೋರಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ 409 ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಸೆ.13ರಿಂದ ಅ.7ರವರೆಗೂ ಗಣೇಶ ಮೂರ್ತಿ ವಿಸರ್ಜನಾ ಕಾರ್ಯ ನಡೆಯಲಿದ್ದು, ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವಂತೆ ತಿಳಿಸಿದರು.

ಸೆ.13ರಂದೇ 156 ಕಡೆಗಳಲ್ಲಿ ಗಣೇಶ ವಿಸರ್ಜನಾ ಕಾರ್ಯ ಜರುಗಲಿದೆ. ಇಂತಹ ಸಮಯದಲ್ಲಿ ಯಾವುದೇ ರೀತಿಯ ಶಾಂತಿ ಸುವ್ಯವಸ್ಥೆಗೆ ಭಂಗ ತರದಂತೆ ಎಚ್ಚರಿಕೆ ವಹಿಸುವುದು ಸಂಬಂಧಪಟ್ಟವರದ್ದಾಗಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಲಾಗುತ್ತದೆ. ಅದೇ ರೀತಿ ವಿದ್ಯುತ್, ಅಗ್ನಿಶಾಮಕ ಇಲಾಖೆಗಳ ಗಮನಕ್ಕೆ ತರಬೇಕು. ಹಾಗೆಯೇ ಪೊಲೀಸ್ ಇಲಾಖೆಯಿಂದ ಎನ್.ಒ.ಸಿ. ಪಡೆಯಬೇಕು ಎಂದು ಎಸ್‍ಪಿ ತಿಳಿಸಿದರು.

ಮೆರವಣಿಗೆ ಸಂದರ್ಭದಲ್ಲಿ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು. ಇವರಿಗೆ ಗುರುತಿನ ಚೀಟಿ ನೀಡಬೇಕು. ಸಾಧ್ಯವಿದ್ದಲ್ಲಿ ದೊಡ್ಡ ದೊಡ್ಡ ಪ್ರತಿಷ್ಠಾಪನೆ ಮಾಡುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಗಣೇಶ ಮೂರ್ತಿ ವಿಸರ್ಜನೆಗೆ ಸಾಗುವ ಮೆರವಣಿಗೆ ಬಗ್ಗೆ ಪೊಲೀಸ್ ಇಲಾಖೆಗೆ ಮೊದಲೇ ಮಾಹಿತಿ ನೀಡಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎಲ್ಲಾ ಸಮಾಜದವರು, ಎಲ್ಲಾ ಧಾರ್ಮಿಕ ಮುಖಂಡರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದೀರಿ, ಹಾಗೆಯೇ ಹಬ್ಬ ಹರಿದಿನಗಳಲ್ಲಿಯೂ ಶಾಂತಿ ಸುವ್ಯವಸ್ಥೆಗೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದರು.

DSC06695

DSC06698

DSC06696

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *