ಕೊಡಗಿನ ಸಂತ್ರಸ್ತರಿಗೆ ಇನ್ಫೋಸಿಸ್ ವತಿಯಿಂದ ಮನೆ ನಿರ್ಮಾಣ ಸುಧಾಮೂರ್ತಿ

Posted on: October 10, 2018

Dasara-2018

ಮೈಸೂರು : ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ 25 ಕೋಟಿ ರೂ. ನೆರವು ನೀಡುವುದಾಗಿ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಇಂದಿಲ್ಲಿ ಘೋಷಣೆ ಮಾಡಿದರು. ಸುಧಾಮೂರ್ತಿ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ ಮಹಿಷಾಸುರ ಪ್ರತಿಮೆ ಸಮೀಪದಿಂದ ಪೂರ್ಣಕುಂಭದೊಂದಿಗೆ ದೇವಾಲಯಕ್ಕೆ ಕರೆತರಲಾಯಿತು.

ನಂತರ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಆನಂತರ ದೇವಾಲಯ ಸಮೀಪ ವಿಶೇಷವಾಗಿ ನಿರ್ಮಿಸಿದಂತಹ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು   ಸರ್ಕಾರ ಮಾಡುವ ಯಾವುದೇ ಕೆಲಸದಲ್ಲಿ ನಾವು ಕೈಜೋಡಿಸುವುದು ನಮ್ಮ ಕೆಲಸವಾಗಿದೆ, ನಮಗೆ ಸಮಾಜದಿಂದ ಸಿಕ್ಕಿದ ಹಣ ಮತ್ತೆ ಸಮಾಜಕ್ಕೆ ಹೋಗಬೇಕು. ಹೀಗಾಗಿ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಜನರ ಪುನರ್ವಸತಿಗೆ ಸರ್ಕಾರ ಮೂಲಸೌಕರ್ಯಗಳನ್ನು ಒಳಗೊಂಡ  ಸೂಕ್ತ  ಸ್ಥಳ ಗುರುತಿಸಿದರೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದರು. ಇದನ್ನು ನಾನು ಕೊಡುಗೆ ಎಂದು ಭಾವಿಸದೆ ಕರ್ತವ್ಯ ಎಂದು ತಿಳಿಯುತ್ತೇನೆ ಎಂದು ಕೂಡ ಸುಧಾಮೂರ್ತಿ ಹೇಳಿದರು.

ಇತಿಹಾಸ ಪ್ರಸಿದ್ದ ದಸರಾ ಆಚರಣೆಯನ್ನು ಸರ್ಕಾರ ನಾಡಹಬ್ಬವಾಗಿ ಆಚರಿಸುವ ಮೂಲಕ ಜನರಿಗೆ ಸಂತಸವನ್ನುಂಟು ಮಾಡಿದೆ. ದಸರಾ ಎನ್ನುವುದು ವಿಶಿಷ್ಟ ಆಚರಣೆಯಾಗದೆ ವಿಜಯನಗರ ಅರಸರ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇದಾದ ನಂತರ ಯದುವಂಶಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ವಿಜಯನಗರ ಕಾಲದಲ್ಲಿ ದಸರಾ ವೇಳೆ ಮಲ್ಲಯುದ್ಧ, ಸಂಗೀತ, ಭುವನೇಶ್ವರಿ ಉತ್ಸವ ಸಹ ನಡೆಯುತ್ತಿತ್ತು. ಇದೀಗ ನಾಡಹಬ್ಬ ಮಾಡುವ ಮೂಲಕ ಸಾರ್ವಜನಿಕ ಹಬ್ಬದಂತೆ ಮೆರಗು ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ರಾಜಶೇಖರ್ ರೆಡ್ಡಿ, ಸಾ.ರಾ.ಮಹೇಶ್, ಜಯಮಾಲ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *