ಗೋವಾದಲ್ಲಿ ರೈಲಿನಿಂದ ಬಿದ್ದು ಸುಂಟಿಕೊಪ್ಪ ಯುವಕ ಸಾವು

Posted on: October 15, 2018

WhatsApp Image 2018-10-15 at 10.32.03 PM
ಸುಂಟಿಕೊಪ್ಪ : ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ ಸುಂಟಿಕೊಪ್ಪದ ಯುವಕನೊಬ್ಬ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಸುಂಟಿಕೊಪ್ಪ ಮಸಣಿಕಮ್ಮ ದೇವಸ್ಥಾನ ಸಮೀಪ ವಾಸವಿರುವ ಮಣಿ ಎಂಬುವವರ ಪುತ್ರ ವಿಘ್ಣೇಶ್ (20) ಎಂಬಾತನೇ ಈ ರೀತಿ ಧಾರುಣವಾಗಿ ಅಂತ್ಯ ಕಂಡಿರುವ ಹತಭಾಗ್ಯ ಯುವಕನಾಗಿದ್ದಾನೆ.

ತಮಿಳುನಾಡಿನಲ್ಲಿ ಕಾರ್ಪೆಂಟರಿ ಮತ್ತು ಪೈಯಿಂಟಿಂಗ್ ಕೆಲಸ ಮಾಡುತ್ತಿದ್ದ ಈತ ಇಂದು ಕಾರ್ಯನಿಮಿತ್ತ ಕೇರಳ ಮೂಲಕ ಗೋವಾಕ್ಕೆ ರೈಲಿನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯದ ಬಡಂಗಾವ್ ಕೊಂಕಣ ರೈಲ್ವೇ ಸಮೀಪ ಆಯತಪ್ಪಿ ಕೆಳಗೆ ಬಿದ್ದು ಅಸುನೀಗಿದ್ದಾನೆ ಎಂದು ಹೇಳಲಾಗಿದೆ.

ಇನ್ನೊಂದು ಮೂಲದ ಪ್ರಕಾರ ಈತನಿಂದ ಯಾರೋ ಹಣ ಕಸಿದು ರೈಲಿನಿಂದ ಕೆಳಗೆ ನೂಕಿದ್ದಾರೆ ಎನ್ನಲಾಗಿದೆ. ಆದರೆ ವಾಸ್ತವಾಂಶ ಗೋವಾ ಪೊಲೀಸರ ತನಿಖೆಯಿಂದಷ್ಟೆ ಹೊರ ಬರಬೇಕಿದೆ. ಗೋವಾ ರೈಲ್ವೇ ರಕ್ಷಣಾ ದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀ ಜಯರಾಂ ರವರಿಗೆ ಮಾಹಿತಿ ರವಾನಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *