ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಶಾಶ್ವತ ಪುನರ್ವಸತಿ ಕಲ್ಪಿಸಲು ಪ್ರಾಧಿಕಾರ ರಚನೆಯ ಚಿಂತನೆ 900 ಮನೆಗಳ ನಿರ್ಮಾಣದ ಗುರಿ

Posted on: October 8, 2018

Z-RAIN-DAMAGE-1

ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಸಂತ್ರಸ್ತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರವೊಂದನ್ನು ರಚಿಸಬೇಕೆಂಬ ಬೇಡಿಕೆಗೆ ಬಹುತೇಕ ಸಮ್ಮತಿ ವ್ಯಕ್ತವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಾಧಿಕಾರ ರಚಿಸುವ ಕುರಿತು ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದೆ.

ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಕೇವಲ ಮನೆ ಕಟ್ಟಿಕೊಟ್ಟಲ್ಲಿ ಸಮಸ್ಯೆ ನಿವಾರಣೆಯಾಗುವುದಿಲ್ಲ. ಮನೆ ಇದ್ದರೂ ಕೂಡ ಹಲವರು ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಹಲವರ ಮನೆಗೆ ತೆರಳಲು ರಸ್ತೆ ಇಲ್ಲ. ಮನೆ ನಿರ್ಮಾಣ ತತ್ಕಾಲದ ಹಾಗೂ ತುರ್ತು ಪರಿಹಾರವಾಗಬಹುದೇ ಹೊರತು ಶಾಶ್ವತ ಪರಿಹಾರಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಮಾಹಿತಿಯನ್ನು ಕಲೆ ಹಾಕಿ ಅವರಿಗೆ ಆಗಿರುವ ನಷ್ಟವನ್ನು ಅಂದಾಜು ಮಾಡಬೇಕಿದೆ. ನಂತರ ಅವರ ಬದುಕಿಗೆ ಯಾವ ರೀತಿಯ ನೆರವು ನೀಡಬೇಕು ಎನ್ನುವ ಚಿಂತನೆ ನಡೆಯಬೇಕಿದೆ. ಸಂತ್ರಸ್ತರು ಸ್ವಾವಲಂಬಿಗಳಾಗಲು ಅಗತ್ಯ ಮಾರ್ಗವನ್ನು ತೋರಿಸಬೇಕಿದೆ. ಈಗ ತಾತ್ಕಾಲಿಕವಾಗಿ ರಸ್ತೆ, ಹೆದ್ದಾರಿಯ ದುರಸ್ತಿ ಕಾರ್ಯವಾಗುತ್ತಿದ್ದು, ಶಾಶ್ವತ ನಿರ್ಮಾಣ ಕಾರ್ಯಗಳು ನಡೆಯಬೇಕಿದೆ. ಇವೆಲ್ಲವನ್ನೂ ನಿರ್ವಹಿಸಬೇಕಾದರೆ ಕೇವಲ ಜಿಲ್ಲಾಡಳಿತದಿಂದ ಮಾತ್ರ ಸಾಧ್ಯವಾಗಲಾರದು. ಈ ಹಿನ್ನೆಲೆಯಲ್ಲಿ ಕೊಡಗು ಪುನರ್ನಿರ್ಮಾಣ ಪ್ರಾಧಿಕಾರ ರಚಿಸುವ ಅಗತ್ಯವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಲಿರುವ ಪ್ರಾಧಿಕಾರದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗುವುದೆಂದು ಹೇಳಲಾಗುತ್ತಿದೆ.

ಮಾದರಿ ಮನೆಗಳು ಸಿದ್ಧ: ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವ ಕಾರ್ಯವನ್ನು ಜಿಲ್ಲಾಡಳಿತ ಚುರುಕುಗೊಳಿಸಿದ್ದು, ಅವರಿಗೆ ಒದಗಿಸಬಹುದಾದ ಮೂರು ರೀತಿಯ ಮಾದರಿ ಮನೆಗಳು ಬಹುತೇಕ ಸಿದ್ಧವಾಗಿದ್ದು, ಮಹಾಮಳೆ ಹಾಗೂ ಗುಡ್ಡಕುಸಿತದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ಮೊದಲ ಆದ್ಯತೆಯಾಗಿ ಮನೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ವಿವಿಧೆಡೆಗಳಲ್ಲಿ ಒಟ್ಟು 110 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಲೇಔಟ್ ಸಿದ್ಧವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಒಂದೆರಡು ತಿಂಗಳುಗಳಲ್ಲಿ ಸುಮಾರು 900 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.

ಕೊಡಗಿನ ಮಳೆ, ಗಾಳಿಗೆ ಸದೃಢವಾಗಿರುವಂತಹ ಮನೆಯನ್ನು ವಿವಿಧ ತಂತ್ರಜ್ಞಾನದಿಂದ ವಿಶೇಷ ವಿನ್ಯಾಸದಲ್ಲಿ ರೂಪಿಸಲಾಗುತ್ತಿದೆ. ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯ ಬಳಿಯಲ್ಲಿ ಒಟ್ಟು ಮೂರು ಮಾದರಿಯಲ್ಲಿ ಮನೆಗಳನ್ನು ತಯಾರಿಸಲಾಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ನಿರಾಶ್ರಿತರನ್ನು ವಿವಿಧ ತಂಡಗಳಲ್ಲಿ ಸ್ಥಳಕ್ಕೆ ಕರೆದೊಯ್ದು ಮೂರು ಮನೆಗಳ ಮಾದರಿಯನ್ನು ತೋರಿಸಿ ಅದರ ವಿಶೇಷತೆಯನ್ನು ಮನದಟ್ಟು ಮಾಡಲಾಗುತ್ತದೆ. ನಂತರ ಅವರಿಗೆ ನಿಗದಿತ ನಮೂನೆಯನ್ನು ನೀಡಿ ಅವರು ಯಾವ ರೀತಿಯ ಮಾದರಿಯನ್ನು ಇಷ್ಟ ಪಡುತ್ತಾರೆ ಎನ್ನುವ ಮಾಹಿತಿ ಪಡೆಯಲಾಗುತ್ತದೆ. ಬಳಿಕ ಸರಕಾರದ ಹಾಗೂ ಫಲಾನುಭವಿಗಳ ಒಪ್ಪಿಗೆ ಪಡೆದು ಸಂತ್ರಸ್ತರಿಗೆ ಯಾವ ರೀತಿಯ ಮನೆ ನಿರ್ಮಿಸಬೇಕು ಎನ್ನುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.

ವಿವಿಧ ತಂತ್ರಜ್ಞಾನದ ಸಮ್ಮಿಶ್ರಣದೊಂದಿಗೆ ಹೊಸದಾಗಿ ಇಂಜಿನಿಯರ್‍ಗಳು ವಿನ್ಯಾಸವನ್ನು ರೂಪಿಸಿದ್ದು, ಒಂದು ಮನೆಯನ್ನು ಕೇವಲ ಒಂದು ತಿಂಗಳಲ್ಲಿ ಪೂರ್ಣಗೊಳಿಸಬಹುದಾಗಿದೆ. ಅಗತ್ಯ ಸಾಮಾಗ್ರಿಗಳನ್ನು ದಾಸ್ತಾನು ಮಾಡಿಕೊಂಡರೆ ಎರಡು ಅಥವಾ ಮೂರು ತಿಂಗಳ ಒಳಗೆ ಎಲ್ಲಾ 900 ಮನೆಗಳನ್ನು ಪೂರ್ಣಗೊಳಿಸಿ ನಿರಾಶ್ರಿತರಿಗೆ ಹಸ್ತಾಂತರ ಮಾಡಬಹುದಾಗಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *